ವಿವರವಾದ ಮಾಹಿತಿಗಾಗಿ ಈಗಲೂ ಜನರು ಪತ್ರಿಕೆಯನ್ನೇ ಅವಲಂಬಿಸಿದ್ದಾರೆ. ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಿದ್ದರೂ ಪತ್ರಿಕೆಗಳ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿಲ್ಲ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಭಿಪ್ರಾಯಪಟ್ಟರು.

ಪುತ್ತೂರು: ವಿವರವಾದ ಮಾಹಿತಿಗಾಗಿ ಈಗಲೂ ಜನರು ಪತ್ರಿಕೆಯನ್ನೇ ಅವಲಂಬಿಸಿದ್ದಾರೆ. ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಿದ್ದರೂ ಪತ್ರಿಕೆಗಳ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿಲ್ಲ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅಭಿಪ್ರಾಯಪಟ್ಟರು. ಪುತ್ತೂರಿನ ನೆಲ್ಲಿಕಟ್ಟೆ ಮಾತೃಛಾಯಾ ಸಭಾಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತ ಒಳ್ಳೆಯವನಾದಲ್ಲಿ ಸಮಾಜ ಒಳ್ಳೆಯದಾಗುತ್ತದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಸುಧಾಕರ ಸುವರ್ಣ, ಪ್ರಸ್ತುತ ಎಐ ಮಾಧ್ಯಮ ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತಿದೆ. ಎಐ ಬಂದರೂ ಪತ್ರಿಕೆಗಳ ಅಸ್ತಿತ್ವಕ್ಕೆ ಧಕ್ಕೆಯಾಗುವುದಿಲ್ಲ. ಇಂದಿಗೂ ಜನರು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗಳನ್ನೇ ಹೆಚ್ಚು ವಿಶ್ವಾಸದಿಂದ ಸ್ವೀಕರಿಸುತ್ತಾರೆ ಎಂದರು.ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲು, ಸಂಘದ ಕಾನೂನು ಸಲಹೆಗಾರ ಕೃಷ್ಣ ಪ್ರಸಾದ್ ನಡ್ಸಾರ್ ಮಾತನಾಡಿದರು. ಪದಸ್ವೀಕಾರ ಮಾಡಿದ ನೂತನ ಅಧ್ಯಕ್ಷ ಶರತ್ ಕುಮಾರ್ ಪಾರ ಮಾತನಾಡಿದರು. ಲಂಚ, ಭ್ರಷ್ಟಾಚಾರದ ವಿರುದ್ಧದ ಸುದ್ದಿ ಸಮೂಹ ಸಂಸ್ಥೆಗಳ ಜನಾಂದೋಲನ ಕಾರ್ಯಕ್ರಮದ ಜಾಗೃತಿ ಫಲಕ ಅನಾವರಣಗೊಳಿಸಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಉದ್ಯಮಿ ಎಸ್‌ಆರ್‌ಕೆ ಲ್ಯಾಡರ್ಸ್ ನ ಸಂಸ್ಥಾಪಕ ಕೇಶವ ಅಮೈ ಮತ್ತು ಸುದ್ದಿ ಬಿಡುಗಡೆಯ ಪ್ರಸರಣ ವಿಭಾಗದ ನಿವೃತ್ತ ಮುಖ್ಯಸ್ಥ ಜಯರಾಮ ಭಟ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಜತೆ ಕಾರ್ಯದರ್ಶಿ ದಿನೇಶ್ ಬಡಗನ್ನೂರು, ಕೋಶಾಧಿಕಾರಿ ಚಿತ್ರಾಂಗಿಣಿ ಸತ್ಯಪ್ರಕಾಶ್, ಉಪಾಧ್ಯಕ್ಷೆ ಸುಮಿತ್ರ ಬಿ. ನಾಯ್ಕ್, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಮಿತ್ತಡ್ಕ ಇದ್ದರು.

ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಉರ್ಲಾಂಡಿ ವಂದಿಸಿದರು. ಸದಸ್ಯ ಹರಿಪ್ರಸಾದ್ ನೆಲ್ಯಾಡಿ ನಿರೂಪಿಸಿದರು.