ಕೃಷಿಯತ್ತ ವಲಸಿತ ಯುವಕರ ಒಲವು: ಚಲುವರಾಯಸ್ವಾಮಿ

| Published : Nov 14 2025, 04:15 AM IST

ಕೃಷಿಯತ್ತ ವಲಸಿತ ಯುವಕರ ಒಲವು: ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗ ಆರಿಸಿಕೊಂಡು ನಗರ ಪ್ರದೇಶಗಳ ಕಡೆಗೆ ವಲಸೆ ಹೋಗುತ್ತಿದ್ದ ಯುವಕರು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಕಡಿಮೆ ವೇತನ ಇರುವವರಿಗೆ ಕೃಷಿ ಮುಖ್ಯ ಉದ್ಯೋಗವಾಗುತ್ತಿದ್ದು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಪ್ರಗತಿಪರ ಕೃಷಿಕರಾಗಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಉದ್ಯೋಗ ಆರಿಸಿಕೊಂಡು ನಗರ ಪ್ರದೇಶಗಳ ಕಡೆಗೆ ವಲಸೆ ಹೋಗುತ್ತಿದ್ದ ಯುವಕರು ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಕಡಿಮೆ ವೇತನ ಇರುವವರಿಗೆ ಕೃಷಿ ಮುಖ್ಯ ಉದ್ಯೋಗವಾಗುತ್ತಿದ್ದು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಪ್ರಗತಿಪರ ಕೃಷಿಕರಾಗಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಸಲಹೆ ನೀಡಿದರು.

ಗುರುವಾರ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿ ‘ಸಮೃದ್ಧ ಕೃಷಿ -ವಿಕಸಿತ ಭಾರತ ನೆಲ, ಜಲ ಮತ್ತು ಬೆಳೆ’ ಶೀರ್ಷಿಕೆಯಡಿ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿರುವ ಕೃಷಿ ಮೇಳ-2025ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸ್ವಾಯತ್ತತೆ ಪಡೆದಿರುವ ದೇಶದ ಪ್ರಮುಖ ವಿಶ್ವವಿದ್ಯಾಲಯವಾಗಿದೆ. ಕೃಷಿಕರಿಗೆ ಇಲ್ಲಿನ ವಿಜ್ಞಾನಿಗಳು ಆವಿಷ್ಕರಿಸುವ ನೂತನ ತಳಿಗಳು, ಯಂತ್ರೋಪಕರಣಗಳಿಂದ ಲಾಭ ಸಿಗುವಂತಾಗಬೇಕು. ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಆದಾಯ ನೀಡುವ ಬೆಳೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಇಂತಹ ಕೃಷಿ ಮೇಳಗಳನ್ನು ಆಯೋಜಿಸಲಾಗಿದ್ದು, ಇದನ್ನು ಬಳಸಿಕೊಂಡು ರೈತರು ಉದ್ಯಮಿಗಳಾಗಿ ಬಲವರ್ಧನೆಗೊಳ್ಳಬೇಕು ಎಂದು ಹೇಳಿದರು.

ಬೆಂಗಳೂರು ಕೃಷಿ ವಿವಿಯು ಪ್ರತಿ ವರ್ಷದಂತೆ ಉತ್ತಮ ತಳಿಗಳನ್ನು ಈ ಬಾರಿಯೂ ಬಿಡುಗಡೆಗೊಳಿಸಿದೆ. ರೈತರಿಗೆ ಕೃಷಿ ವಿವಿಗಳು ನೀಡಬೇಕಾಗಿರುವುದು ಕೂಡ ಇದನ್ನೇ ಎಂದ ಅವರು, ಕೃಷಿಯನ್ನು ಉದ್ದಿಮೆಯಾಗಿ ಪರಿವರ್ತಿಸಿ ರೈತರಿಗೆ ಉತ್ತಮ ಆದಾಯ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಸೌಲಭ್ಯಗಳು ಹಾಗೂ ಕಾರ್ಯಕ್ರಮಗಳನ್ನು ನೀಡುತ್ತಿವೆ ಎಂದರು.

ಕೇಂದ್ರ ಎಂಎಸ್‌ಎಂಇ, ಉದ್ಯೋಗ, ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕೃಷಿ ವಲಯಕ್ಕೆ ಪೂರಕವಾಗಿ ಆಹಾರ ಸಂಸ್ಕರಣೆ ಹಾಗೂ ಮೌಲ್ಯವರ್ಧನ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಧ್ಯ ಏಷ್ಯಾದ ದೇಶಗಳಿಗೆ ಆಹಾರೋತ್ಪನ್ನಗಳನ್ನು ಸರಬರಾಜು ಮಾಡಲು ಕ್ರಮ ವಹಿಸಲಾಗುವುದು. ಭಾರತದಲ್ಲಿ 353 ಮಿಲಿಯನ್ ಟನ್ ಆಹಾರ ಬೆಳೆ, 355 ಟನ್ ತರಕಾರಿ, ಹಣ್ಣು ಬೆಳೆಯಲಾಗುತ್ತಿದೆ. ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿ ಎಲ್ಲರಿಗೂ ಆಹಾರ ಸಿಗುವಂತಾಗಿದೆ. ಆಹಾರ ಸಂಸ್ಕರಣೆ ಉದ್ಯಮ ವಿಸ್ತರಿಸಿ ಅಗತ್ಯ ಇರುವ ಕಡೆ ಸರಬರಾಜು ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿವಿ ಕುಲಸಚಿವ ಡಾ. ಕೆ.ಸಿ. ನಾರಾಯಸ್ವಾಮಿ, ಕೃಷಿ ವಿವಿ ಸಹ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ರಘುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ರೈತ ಪ್ರಶಸ್ತಿ ಪ್ರದಾನ

ಕೆನರಾ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿಯನ್ನು ರಾಮನಗರ ತಾಲೂಕಿನ ಎಲ್.ವಿ. ಶಿವರಾಜು, ದೊಡ್ಡ ಬಳ್ಳಾಪುರ ತಾಲೂಕು ಕುಂಜನಹಳ್ಳಿ ಗ್ರಾಮದ ಪದ್ಮಿನಿ, ಎಚ್.ಡಿ. ದೇವೇಗೌಡ ಪ್ರಶಸ್ತಿಯನ್ನು ಕೋಲಾರದ ಮರನಹಳ್ಳಿ ಗ್ರಾಮದ ಎಂ.ಎನ್. ರವಿಶಂಕರ್‌ ಅವರಿಗೆ ಪ್ರದಾನ ಮಾಡಲಾಯಿತು.

ವೈಜ್ಞಾನಿಕ ಕೃಷಿಯ ಮೂಲಕ ಕೃಷಿಕರು ಅಭಿವೃದ್ಧಿ ಸಾಧಿಸಿದರೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಮುಂದಿನ ತಲೆಮಾರಿಗೆ ಅತ್ಯುತ್ತಮವಾದ ಪರಿಸರ, ಫಲವತ್ತಾದ ಭೂಮಿಯನ್ನು ಬಿಟ್ಟು ಕೊಡಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಈ ಕುರಿತು ಅರಿವು ಮೂಡಿಸುವುದರ ಜೊತೆಗೆ ಹಲವಾರು ತಂತ್ರಜ್ಞಾನಗಳನ್ನು ಪರಿಚಯಿಸಲು ಈ ಕೃಷಿ ಮೇಳದಲ್ಲಿ ಆದ್ಯತೆ ನೀಡಲಾಗಿದೆ.

ಡಾ.ಎಸ್.ವಿ. ಸುರೇಶ್, ಕುಲಪತಿಗಳು, ಬೆಂಗಳೂರು ಕೃಷಿ ವಿವಿ

ಹೊಸ ತಳಿ, ಯಂತ್ರ ಬಿಡುಗಡೆ

ಹಸಿ ಅವರೆಕಾಯಿ, ಹೆಸರುಕಾಳು, ತೊಗರಿಕಾಯಿ, ಹಲಸಂದೆ, ಬಟಾಣಿ ಇತ್ಯಾದಿ ಧಾನ್ಯಗಳನ್ನು ಬಿಡಿಸುವ ಯಂತ್ರವನ್ನು ಬೆಂಗಳೂರು ಕೃಷಿ ವಿವಿಯು ಆವಿಷ್ಕರಿಸಿದೆ. ಈ ಯಂತ್ರವನ್ನು ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಎನ್‌.ಚಲುವರಾಯಸ್ವಾಮಿ ಅವರು, ಮೇಳದಲ್ಲಿ ಯಂತ್ರದೊಳಗೆ ಅವರೆಕಾಯಿ ಹಾಕುವ ಮೂಲಕ ಅಧಿಕೃತವಾಗಿ ಯಂತ್ರವನ್ನು ಲೋಕಾರ್ಪಣೆಗೊಳಿಸಿದರು. ಇದೇ ವೇಳೆ ಅಭಿವೃದ್ಧಿಪಡಿಸಲಾದ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಯಿತು. ಸುಮಾರು 750 ಮಳಿಗೆಗಳಲ್ಲಿ ವೈವಿಧ್ಯಮಯ ಮಾಹಿತಿಯೊಂದಿಗೆ ಕೃಷಿಗೆ ಅಗತ್ಯವಾದ ಯಂತ್ರೋಪಕಗಳು, ಬೀಜಗಳು ಲಭ್ಯ.

1.50 ಲಕ್ಷಕ್ಕೂ ಹೆಚ್ಚು ಜನರ ಆಗಮನ

ನ.13ರಿಂದ ನಾಲ್ಕು ದಿನಗಳ ಕಾಲ ಜಿಕೆವಿಕೆ ಆವರಣದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಮೊದಲ ದಿನವೇ ರೈತರು, ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬರೋಬ್ಬರಿ 1.50 ಲಕ್ಷಕ್ಕೂ ಹೆಚ್ಚು ಜನರು ಮೇಳಕ್ಕೆ ಆಗಮಿಸಿದ್ದರು. 11.86 ಸಾವಿರ ಜನರು ಕೃಷಿ ವಿವಿಯ ರಿಯಾಯಿತಿ ಭೋಜನಾಲಯದಲ್ಲಿ ಮಧ್ಯಾಹ್ನದ ಊಟ ಸವಿದರು. 62 ಲಕ್ಷ ರು.ಗಳ ವಹಿವಾಟು ನಡೆದಿದೆ ಎಂದು ಕೃಷಿ ವಿವಿ ಮಾಹಿತಿ ನೀಡಿದೆ.