ತೀವ್ರ ಸ್ವರೂಪ ಪಡೆದ ಕಬ್ಬು ಬೆಳೆಗಾರರ ಹೋರಾಟ

| Published : Nov 14 2025, 04:00 AM IST

ಸಾರಾಂಶ

ಟನ್ ಕಬ್ಬಿಗೆ ₹3500 ದರ ಘೋಷಣೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರ ಮುಧೋಳ ತಾಲೂಕಿನ ಸಮೀರವಾಡಿ ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ 50ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳನ್ನು ಹೋರಾಟಗಾರರು ನೆಲಕ್ಕುರುಳಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಲ್ಲದೆ ಕಾರ್ಖಾನೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಸಿಬ್ಬಂದಿ, ಹಲವು ರೈತರು ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಗುರುವಾರ ಬೆಳಗ್ಗೆ ಮಹಾಲಿಂಗಪುರ ಬಳಿಯ ಸೋಮಯ್ಯ ಸಕ್ಕರೆ ಕಾರ್ಖಾನೆಯಲ್ಲಿ ಹೋಮ, ಹವನ ನಡೆಸಿ ಕೇನ್‌ ಕ್ಯಾರಿಯರ್ ಪೂಜೆಯೊಂದಿಗೆ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಲಾಗಿತ್ತು. ಮುಧೋಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಹಸ್ರಾರು ಹೋರಾಟಗಾರರು ಬಸ್‌ಗಳಲ್ಲಿ ಸಂಜೆ ಸಮೀರವಾಡಿಗೆ ಮುತ್ತಿಗೆ ಹಾಕಿ ಕಾರ್ಖಾನೆ ಒಳಗೆ ಹೋಗಲು ಗೇಟ್‌ ಮುಂದೆ ಸಾಲಾಗಿ ನಿಲ್ಲಿಸಿದ್ದ ಕಬ್ಬು ತುಂಬಿದ್ದ ಬರುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ನೆಲಕ್ಕುರುಳಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಘೋಷಣೆ ಕೂಗಿದ್ದಲ್ಲದೆ, ಕಾರ್ಖಾನೆಯ ಮುಂದಿನ ಗೇಟ್‌ ಬಂದ್‌ ಮಾಡಿ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಕಾರ್ಖಾನೆ ಸಿಬ್ಬಂದಿ ಸೇರಿ ಹಲವು ರೈತರೂ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಮಿಸಿದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ಹತೋಟಿಗೆ ಪ್ರಯತ್ನಿಸಿದರು. ವಿಷಯ ತಿಳಿದು ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಇತರ ಅಧಿಕಾರಿಗಳು, ಆಗ್ನಿಶಾಮಕ ದಳ, ಆಂಬ್ಯುಲೆನ್ಸ್‌ ಗಳು ಆಗಮಿಸಿದವು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ನಡೆಸಬೇಕಾಯಿತು. ಕಲ್ಲು ತೂರಾಟದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾಂತೇಶ ಜಿಡ್ಡಿ ಅವರಿಗೂ ಕಲ್ಲು ಏಟು ಬಿದ್ದು ಗಾಯಗೊಂಡಿದ್ದಾರೆ.

ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರಿಂದ ಕಬ್ಬು ಹೊತ್ತಿ ಉರಿಯುತ್ತಿವೆ. ಆಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಸ ನಡೆಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಸ್ಥಳದಿಂದ ಪ್ರತಿಭಟನಾಕಾರರು ಕಾಲ್ಕಿತ್ತಿದ್ದಾರೆ. ಕಾರ್ಖಾನೆ ಆವರಣದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಕೆಲವು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಮೂರು ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ:

ಕಬ್ಬು ಬೆಳೆಗಾರರ ಹೋರಾಟ ಹಿಂಸಾರೂಪಕ್ಕೆ ತಿರುಗಿದ್ದರಿಂದ ಜಿಲ್ಲಾಧಿಕಾರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೂರು ತಾಲೂಕುಗಳಲ್ಲಿ ನಿಷಾಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಜಮಖಂಡಿ, ರಬಕವಿ-ಬನಹಟ್ಟಿ, ಮುಧೋಳ ತಾಲೂಕಿನಲ್ಲಿ 2023 ಕಲಂ 164 ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮೂರು ತಾಲೂಕುಗಳಲ್ಲಿ ಹೆಚ್ಚಿನ ಪೊಲೀಸರುನ್ನು ನಿಯೋಜಿಸಲಾಗಿದೆ. ವಿಜಯಪುರ, ಬೆಳಗಾವಿ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ತುಕಡಿ ಕರೆಸಿಕೊಳ್ಳಲಾಗಿದೆ.