ಕೆಎಲ್‌ಇ ಸಾಮ್ರಾಜ್ಯ ನಿರ್ಮಾಣ ಕೋರೆ ಕೊಡುಗೆ

| Published : Nov 14 2025, 04:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಒಂದು ಶೈಕ್ಷಣಿಕ ಬೀಜವನ್ನು ಬಿತ್ತಿ ಅಸಂಖ್ಯ ಮರಗಳನ್ನು ಬೆಳೆದವರು ಅವರು. ಅವರ ದೂರದೃಷ್ಟಿಯ ಫಲವಾಗಿಯೇ ಸಂಸ್ಥೆ ಇಂದು ಅಗಾದವಾಗಿ ಬೆಳೆದಿದೆ. ಅದರ ಹಿಂದೆ ಡಾ.ಕೋರೆಯವರ ಪರಿಶ್ರಮವನ್ನು ನಾವು ಶ್ಲಾಘಿಸಬೇಕು ಎಂದು ಬೆಂಗಳೂರಿನ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್.ಜಯರಾಂ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಒಂದು ಶೈಕ್ಷಣಿಕ ಬೀಜವನ್ನು ಬಿತ್ತಿ ಅಸಂಖ್ಯ ಮರಗಳನ್ನು ಬೆಳೆದವರು ಅವರು. ಅವರ ದೂರದೃಷ್ಟಿಯ ಫಲವಾಗಿಯೇ ಸಂಸ್ಥೆ ಇಂದು ಅಗಾದವಾಗಿ ಬೆಳೆದಿದೆ. ಅದರ ಹಿಂದೆ ಡಾ.ಕೋರೆಯವರ ಪರಿಶ್ರಮವನ್ನು ನಾವು ಶ್ಲಾಘಿಸಬೇಕು ಎಂದು ಬೆಂಗಳೂರಿನ ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಆರ್.ಜಯರಾಂ ಹೇಳಿದರು.

ನಗರದ ಜೆಎನ್ ವೈದ್ಯಕೀಯ ಕಾಲೇಜು ಆವರಣದ ಡಾ.ಬಿ.ಎಸ್.ಜೀರಗೆ ಸಭಾಗೃಹದಲ್ಲಿ ಗುರುವಾರ ಆಯೋಜಿಸಿದ್ದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ 110ನೇ ಸಂಸ್ಥಾಪನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಶೈಕ್ಷಣಿಕ ಅಗತ್ಯತೆಯನ್ನು ಪೂರೈಸುವ ನೆಲೆಯಲ್ಲಿ ಸಪ್ತರ್ಷಿಗಳು ಹಗಲಿರುಳು ಶ್ರಮಿಸಿದರು. ಅವರ ತ್ಯಾಗ ಹಾಗೂ ದೂರದೃಷ್ಟಿಯ ಫಲವಾಗಿಯೇ ಸಂಸ್ಥೆ ಬೆಳೆದುನಿಂತಿದೆ. ಅಖಂಡ ನಾಲ್ಕು ದಶಕಗಳಿಂದ ಈ ಬೃಹತ್ ಸಾಮ್ರಾಜ್ಯವನ್ನು ನಿರ್ಮಿಸುವಲ್ಲಿ ಡಾ.ಕೋರೆಯವರ ಕೊಡುಗೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಬಣ್ಣಿಸಿದರು.

ಜನರು ಉತ್ತಮ ನಾಯಕತ್ವಕ್ಕಾಗಿ ನಿಮ್ಮತ್ತ ನೋಡುವರು. ನಾನೂ ಕೂಡ ಈ ದೇಶಕ್ಕೆ ನೀಡಬೇಕಾದ ಶ್ರೇಷ್ಠ ನಾಯಕತ್ವವನ್ನು ನಿಮ್ಮಿಂದಲೇ ನಿರೀಕ್ಷಿಸುತ್ತಿದ್ದೇನೆ. ಭವಿಷ್ಯದ ಭಾರತಕ್ಕಾಗಿ ಜ್ಞಾನದಲ್ಲಿ ಮುಂದುವರಿಯಿರಿ, ಸರ್ಕಾರದೊಂದಿಗೆ ಕೈಜೋಡಿಸಿ, ಈಗ ಭವಿಷ್ಯವನ್ನು ನೋಡಿ, ಹಿಂದಿನ ಸಾಧನೆಗಳನ್ನು ನೆನಪಿಸಿಕೊಳ್ಳಿ ಮತ್ತು ಶ್ರೇಷ್ಠ ಕೊಡುಗೆಯನ್ನು ನೀಡಲು ಸಿದ್ಧರಾಗಿರಿ. ಇದೆಲ್ಲದಕ್ಕೂ ಮುಖ್ಯವಾದದ್ದು ಉತ್ತಮವಾದದ್ದನ್ನು ಆಲೋಚಿಸುವುದು. ಸಪ್ತರ್ಷಿಗಳು ಉದಾತ್ತವಾದುದುನ್ನು ಆಲೋಚಿಸಿದರು, ಅಮರವಾದ ಕಾರ್ಯ ನಿರ್ವಹಿಸಿದರು ಎಂದು ಕೆಎಲ್ಇಯನ್ನು ದೃಷ್ಟಿ, ಬದ್ಧತೆ ಮತ್ತು ತ್ಯಾಗದಿಂದ ನಿರ್ಮಿಸಲಾಗಿದೆ ಎಂದು ಪ್ರಭಾಕರ ಕೋರೆ ಅವರನ್ನು ಶ್ಲಾಘಿಸಿದರು.

ರಾಷ್ಟ್ರೀಯ ಬೆಳವಣಿಗೆಗೆ, ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಕೆಲಸ ಮಾಡಲು ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವ ಅಗತ್ಯವಿದೆ. ಈ ರಾಷ್ಟ್ರೀಯ ಧ್ಯೇಯವನ್ನು ಬೆಂಬಲಿಸಲು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರದ ಮೇಲೆ ಕೇಂದ್ರೀಕರಿಸುವ ಎಸ್‌ಟಿಇಎಂ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಂತೆ ಅವರು ಕೆಎಲ್ಇಗೆ ಸಲಹೆ ನೀಡಿದರು.ಆಶೀರ್ವಚನ ನೀಡಿದ ಹೈದರಾಬಾದ್‌ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಬೋಧಮಯಾನಂದ ಮಹಾರಾಜರು, ಜ್ಞಾನದಿಂದ ಅದ್ಭುತವಾದದ್ದನ್ನು ಸಾಧಿಸಲು ಸಾಧ್ಯ. ಜ್ಞಾನ ಮಾತ್ರ ಸಮಾಜವನ್ನು ರಾಷ್ಟ್ರವನ್ನು ಸಬಲಗೊಳಿಸುತ್ತದೆ. ಅಂತಹ ಜ್ಞಾನದಾಹವನ್ನು ನೀಗಿಸಿ ಈ ಭಾಗದಲ್ಲಿ ಅಕ್ಷರಕ್ರಾಂತಿ ಮಾಡಿದ ಕೆಎಲ್ಇ ಸಂಸ್ಥೆಯ ಏಳು ಜನ ಸಪ್ತರ್ಷಿಗಳನ್ನು ಮನಸಾರೆ ಸ್ಮರಿಸುವುದಾಗಿ ತಿಳಿಸಿದರು.

ಯುವ ಪೀಳಿಗೆ ಕೆಲವೊಮ್ಮೆ ಅಭಿಮಾನ ಮತ್ತು ಪ್ರೇಮದ ಭ್ರಮೆಯಲ್ಲಿ ದೊಡ್ಡ ತಪ್ಪುಗಳನ್ನು ಮಾಡುತ್ತಿರುವುದು ಬೇಸರದ ಸಂಗತಿ. ಒಂದು ಕಡೆ ಭಾರತದ ವಿಜ್ಞಾನಿಗಳು ಬಾಹ್ಯಾಕಾಶದತ್ತ ಏರುತ್ತಿರುವಾಗ, ಇನ್ನೊಂದು ಕಡೆ ಮೌಲ್ಯಗಳ ಕುಸಿತದಿಂದ ಸಮಾಜ ನೋವಿನ ಘಟನೆಗಳನ್ನು ನೋಡುತ್ತಿದೆ. ಇದು ಚಿಂತಿಸಬೇಕಾದ ಸಮಯ. ಸ್ವಾಮೀ ವಿವೇಕಾನಂದರು ದೇಶವನ್ನು ಇಲ್ಲಿಯ ಸಂಸ್ಕೃತಿಯನ್ನು ಪ್ರೀತಿಸಲು ಕರೆನೀಡಿದರು. ನಮ್ಮ ಅಂತರಂಗದಲ್ಲಿ ಅಂತಹ ದೇಶಪ್ರೇಮ ನೆಲೆಗೊಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದ ಮೂಲಕ ಸಮಾಜವನ್ನು ಸಬಲೀಕರಣಗೊಳಿಸಲು ಕೆಎಲ್ಇ ಸ್ಥಾಪಿಸಿದ ದಾರ್ಶನಿಕ ಸ್ಥಾಪಕ ಪಿತಾಮಹರಾದ ಸಪ್ತಋಷಿಗಳಿಗೆ, ಸಂಸ್ಥಾಪಕರಿಗೆ, ದಾನಿಗಳಿಗೆ ಎಷ್ಟೇ ಗೌರವ ಸಲ್ಲಿಸಿದರು ಕಡಿಮೆ. ಕೆಎಲ್ಇ ಸಂಸ್ಥೆ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿದೆ. ಭಾಷಾತೀತವಾಗಿ-ಧರ್ಮಾತೀತವಾಗಿ-ಜಾತ್ಯಾತೀತವಾಗಿ ಸಂಸ್ಥೆ ಬೆಳೆದಿದೆ. ಶಿಕ್ಷಣದ ಎಲ್ಲ ಬೇಡಿಕೆಯನ್ನು ಪೂರೈಸಿದೆ. ಶೈಕ್ಷಣಿಕ-ಆರೋಗ್ಯ-ಸಂಶೋಧನಾ ಕ್ಷೇತ್ರದಲ್ಲಿ ಅದ್ವಿತೀಯ ಕೊಡುಗೆ ನೀಡಿ ರಾಷ್ಟ್ರನಿರ್ಮಾಣಕ್ಕೆ ತನ್ನದೇ ಕೊಡುಗೆ ನೀಡಿದೆ. 2025ರಲ್ಲಿ ಉತ್ತರ ಕರ್ನಾಟಕದಲ್ಲಿ ಮೊದಲ ಕೃಷಿ ಕಾಲೇಜು ಪ್ರಾರಂಭವಾದದ್ದು ಮಹತ್ವದ ಸಾಧನೆ ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಆಜೀವ ಸದಸ್ಯ ಮಂಡಳಿಯ ಕಾರ್ಯಧ್ಯಕ್ಷೆ ಡಾ.ದೀಪಾ ಮೆಟಗುಡ್ ಉಪಸ್ಥಿತರಿದ್ದರು. ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಆಜೀವ ಸದಸ್ಯರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ರಾಜ್ಯ,ರಾಷ್ಟ್ರೆ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಸಾಧನೆಗೈದ ಕೆಎಲ್ಇ ಸಂಸ್ಥೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳನ್ನು, ವೈದ್ಯರನ್ನು, ಶಿಕ್ಷಕರನ್ನು, ನರ್ಸಿಂಗ್ ಸಿಬ್ಬಂದಿ ವರ್ಗದವರನ್ನ ಗೌರವಿಸಿ ಸತ್ಕರಿಸಲಾಯಿತು. 66 ಚಿನ್ನ, 49 ಬೆಳ್ಳಿ ಪದಕಗಳನ್ನು ವಿತರಿಸಲಾಯಿತು. ಡಾ.ನೇಹಾ ದಡೇದ, ಡಾ.ಮಹೇಶ ಗುರನಗೌಡರ, ಡಾ.ಆದಿತ್ಯ ಆಚಾರ್ಯ ನಿರೂಪಿಸಿದರು. ಡಾ.ದೀಪಾ ಮೆಡಗುಡ್ ವಂದಿಸಿದರು.

ಕೋಟ್‌ಕೆಎಲ್ಇ ವೈದ್ಯರು ಜಾಗತಿಕವಾಗಿ ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಮುಂಬರುವ ದಿನಗಳಲ್ಲಿ 1000 ಹಾಸಿಗೆಗಳ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜ ನೂತನ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ಇದು ಕೆಎಲ್ಇಯ ಒಟ್ಟು ಆರೋಗ್ಯ ರಕ್ಷಣಾ ಸಾಮರ್ಥ್ಯವನ್ನು 4500 ಹಾಸಿಗೆಗಳಿಗೆ ತಲುಪಿಸಿದೆ. ಜನರ ಮನೆ ಬಾಗಿಲಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೊಂಡೊಯ್ಯಲು ಈ ಪ್ರದೇಶದಲ್ಲಿ ಹೆಚ್ಚಿನ ಆಸ್ಪತ್ರೆಗಳನ್ನು ಸ್ಥಾಪಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.ಡಾ.ಪ್ರಭಾಕರ ಕೋರೆ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷರು