ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಜನರಿಗೆ ಅನುಕೂಲವಾಗುವ ಯಾವುದೇ ಅಭಿವೃದ್ಧಿ ಕೆಲಸ ಮಾಡಲಾಗದೆ ಒಬ್ಬ ಮಾಜಿ ಶಾಸಕನಾಗಿ ಗುರುತಿಸಿಕೊಂಡು ರಾಜಕಾರಣ ಮಾಡುವಂತಹ ಪರಿಸ್ಥಿತಿ ನನಗೆ ಬಂದೊದಗಿದ್ದರೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿ ಮನೆಗೆ ಹೋಗುತ್ತಿದ್ದೆ ಹೊರತು ಮತ್ತೊಬ್ಬರ ವಿರುದ್ಧ ಮಾತಾಡುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇರವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಾನು ಕ್ಷೇತ್ರದಲ್ಲಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ನೈತಿಕತೆ ಇಲ್ಲ. ನಾಲಿಗೆಯಾದರೂ ಹೇಗೆ ಮುಂದಾಗುತ್ತೋ ಗೊತ್ತಿಲ್ಲ ಎಂದು ತಮ್ಮ ರಾಜಕೀಯ ಕಡು ವೈರಿ ಸುರೇಶ್‌ಗೌಡರ ವಿರುದ್ಧ ಗುಡುಗಿದರು.
ನಾನು ಅಧಿಕಾರದಲ್ಲಿದ್ದ ಅವಧಿಯಲ್ಲಿ ಶಾಶ್ವತವಾಗಿ ಉಳಿಯುವಂತಹ ಹಲವು ಅಭಿವೃದ್ಧಿ ಕೆಲಸಗಳು ನಿರಂತರವಾಗಿ ನಡೆದಿವೆ. ಆದರೆ, ತಾಲೂಕಿನಲ್ಲಿ ಹತ್ತು ವರ್ಷ ಕಾಲ ಆಡಳಿತ ನಡೆಸಿದ ಒಬ್ಬ ಮಾಜಿ ಶಾಸಕ ಇಂತಹ ಯಾವುದಾದರೊಂದು ಸರ್ಕಾರಿ ಕಟ್ಟಡವನ್ನು ನಿರ್ಮಿಸಲಾಗದೆ ಬಾಯಿಗೆ ಬಂದಂತೆ ಮಾತನಾಡಲು ನಾಚಿಕೆಯಾಗುವುದಿಲ್ಲವೇ ಎಂದು ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು.ಪಟ್ಟಣದಲ್ಲಿ ಎಆರ್‌ಟಿಒ ಕಚೇರಿ, ಅಗ್ನಿಶಾಮಕ ಠಾಣೆ, ಮಿನಿವಿಧಾನಸೌಧ, ಪುರಸಭಾ ವಾಣಿಜ್ಯಮಳಿಗೆ, ಸೆಸ್ಕಾಂ ವಿಭಾಗೀಯ ಕಚೇರಿ, ಡಿಪ್ಲೊಮೋ, ಐಟಿಐ, ಪ್ರಥಮ ದರ್ಜೆ ಕಾಲೇಜು ಕಟ್ಟಡಗಳನ್ನು ನಾನೇ ನಿರ್ಮಿಸಿದ್ದೇನೆ. ಪಿಯು ಕಾಲೇಜು ಮೇಲ್ದರ್ಜೆಗೇರಿಸಿ ಹೆಚ್ಚುವರಿ ಕೊಠಡಿ ನಿರ್ಮಾಣ, 30 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ 100 ಹಾಸಿಗೆಗಳ ಆಸ್ಪತ್ರೆಯನ್ನಾಗಿಸಿದ್ದು, ಪಟ್ಟಣಕ್ಕೆ ಶುದ್ಧ ಕುಡಿಯುವ ನೀರಿನ ಯೋಜನೆ ಇವೆಲ್ಲವನ್ನು ನಾನೇ ತಂದಿದ್ದೇನೆ. ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕಟ್ಟಡಕ್ಕೆ ನಾನೇ ಭೂಮಿಪೂಜೆ ನೆರವೇರಿಸಿ ಇಂದು ಉದ್ಘಾಟನೆ ಮಾಡಿದ್ದೇನೆ. ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣಿಸುತ್ತಿದ್ದರೂ ಕೂಡ ಇನ್ಯಾವ ಭಾಷೆಯಲ್ಲಿ ಇವರಿಗೆ ಹೇಳಬೇಕೋ ಗೊತ್ತಾಗ್ತಿಲ್ಲ ಎಂದು ಮಾಜಿ ಶಾಸಕರ ವಿರುದ್ಧ ಹರಿಹಾಯ್ದರು.
ಜಿಲ್ಲೆಯಲ್ಲಿ ಎಂಡಿಸಿಸಿ ಬ್ಯಾಂಕ್ ಸ್ಥಾಪನೆಯಾದಾಗಿನಿಂದ ಈವರೆಗೂ 9 ಸ್ಥಾನ ಅವಿರೋಧ ಆಯ್ಕೆಯಾಗಿಲ್ಲ. 12 ಸ್ಥಾನಗಳ ಪೈಕಿ 11 ಸ್ಥಾನ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಗೆದ್ದಿರಲಿಲ್ಲ. 11 ಸ್ಥಾನ ಗೆದ್ದಿದ್ದರೂ ಸಂಭ್ರಮ ಮಾಡದೆ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದೇವೆ. ಆದರೆ, ಚುನಾವಣೆ ವಿಚಾರದಲ್ಲಿ ಜೆಡಿಎಸ್ ನವರು ಮಾತಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ಅಶೋಕ್, ಉಪ ಕೃಷಿ ನಿರ್ದೇಶಕ ಭಾನುಪ್ರಕಾಶ್, ತಹಸೀಲ್ದಾರ್ ಜಿ.ಆದರ್ಶ, ತಾಪಂ ಇಒ ಸತೀಶ್, ಸಹಾಯಕ ಕೃಷಿ ನಿರ್ದೇಶಕ ಆರ್.ಹರೀಶ್, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಂಜುನಾಥ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ.ಪ್ರಕಾಶ್, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಬಿ.ರಾಜೇಗೌಡ, ಕೃಷಿ ಅಧಿಕಾರಿ ಯುವರಾಜ್, ಇಲಾಖೆಯ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))