ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಮನೆಗೊಂದು ಗ್ರಂಥಾಲಯ ಕಾರ‍್ಯಕ್ರಮ ಅನುಷ್ಟಾನ ಹಾಗೂ ಜಿಲ್ಲಾ ಜಾಗೃತಿ ಸಮಿತಿ ರಚನೆಯ ಪೂರ್ವಭಾವಿ ಸಭೆ ನೆರವೇರಿತು.
ಕನ್ನಡಪ್ರಭವಾರ್ತೆ ಮೂಲ್ಕಿಮನೆಗೊಂದು ಗ್ರಂಥಾಲಯದ ಯೋಜನೆಯಂತೆ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಕ್ಕೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಕಾರ‍್ಯಕ್ರಮ ಅನುಷ್ಟಾನ ಹಾಗೂ ಜಿಲ್ಲಾ ಜಾಗೃತಿ ಸಮಿತಿ ರಚನೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಪುಸ್ತಕ ಆದ್ಯತೆಯ ವಸ್ತು ಆಗಬೇಕು. ಓದಿದ ಪುಸ್ತಕದೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅಭಿಮಾನ ಮೂಡಿಸಬೇಕು. ಗ್ರಂಥಾಲಯದ ಮೂಲಕ ಪುಸ್ತಕೋದ್ಯಮವನ್ನು ಜೀವಂತವಾಗಿಸುವ ಕೆಲಸ ಆಗಬೇಕಾಗಿದೆ. ಮನೆಯ ದೇವರಿಗೆ ಹೂ ಅಗರಬತ್ತಿ ತೆಗೆದುಕೊಂಡು ಹೋದಂತೆ ಸರಸ್ವತಿ ಎಂಬ ನಂಬಿಕೆಯೊಂದಿಗೆ ಪುಸ್ತಕಗಳನ್ನು ಕೊಂಡು ಕೊಂಡೊಯ್ಯವಂತಾಗಬೇಕು ಎಂದರು.ಪುಸ್ತಕದ ಜಾಗಕ್ಕೆ ಹಸ್ತ ಅಂದರೆ ಮೊಬೈಲ್ ಬಂದಿದೆ. ಹಿಂದೆ ಓದುವ ಆಸಕ್ತಿ ಇತ್ತು. ಸಾಕಷ್ಟು ಪುಸ್ತಕಗಳು ಸಿಗುತ್ತಿರಲಿಲ್ಲ. ಆದರೆ ಈಗ ಸಾವಿರಗಟ್ಟಲೆ ಪುಸ್ತಕಗಳು ಪ್ರಕಟವಾಗುತ್ತಿವೆ. ಮಾರಾಟಕ್ಕೆ ಸಾಕಷ್ಟು ಮಳಿಗೆಗಳಿವೆ. ಆದರೆ ಓದುವ ಮಂದಿ ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಪುಸ್ತಕದೆಡೆಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮನೆಮನೆ ಗ್ರಂಥಾಲಯ ಸ್ಥಾಪನೆಗೆ ಮುಂದಾಗಿದೆ ಎಂದು ಮಾಹಿತಿ ನೀಡಿದರು.1 ಲಕ್ಷ ಮನೆಗಳಲ್ಲಿ 500 ಪುಸ್ತಕ ಖರೀದಿಸುವಂತೆ ಉತ್ತೇಜಿಸುವ ಕೆಲಸ ಮಾಡಬೇಕು. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಹತ್ತು ಮಂದಿಯ ಸಮಿತಿ ರಚಿಸಲಾಗುತ್ತಿದೆ. ಅತ್ಯುತ್ತಮ ಗ್ರಂಥಾಲಯಕ್ಕೆ ಪ್ರಾಧಿಕಾರದಿಂದ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೂ ನಂಜನಗೂಡು ತಿರುಮಲಾಂಬ, ಹಾಮಾ ನಾಯಕ, ಪಿ.ಆರ್. ತಿಪ್ಪೇಸ್ವಾಮಿ ಹಾಗೂ ಗಳಗನಾಥರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಮನೆಗೊಂದು ಗ್ರಂಥಾಲಯದ ಮಾಹಿತಿಯ ಕರಪತ್ರವನ್ನು ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಬಿಡುಗಡೆಗೊಳಿಸಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ಮಾತನಾಡಿ, ಮನೆಗೊಂದು ಗ್ರಂಥಾಲಯದ ಯೋಜನೆಗೆ ಕನ್ನಡ ಸಾಹಿತ್ಯ ಪರಿಷತ್ತು ಸಹಕಾರ ನೀಡಲಿದ್ದು, ಆ ಮೂಲಕ ಕನ್ನಡ ಭಾಷೆ ಹಾಗೂ ಪುಸ್ತಕೋದ್ಯಮವನ್ನು ಓದುವ ಬೆಳೆಸುವ ಪ್ರಯತ್ನ ಮಾಡಲಾಗುವುದು ಎಂದರು.ಕಸಾಪದ ವಿವಿಧ ತಾಲೂಕುಗಳ ಅಧ್ಯಕ್ಷರಾದ ಉಮೇಶ್ ನಾಯಕ್ ಪುತ್ತೂರು, ಮಂಜುನಾಥ್ ರೇವಣ್‌ಕರ್ ಮಂಗಳೂರು, ಯದುಪತಿ ಗೌಡ ಬೆಳ್ತಂಗಡಿ, ಮಿಥುನ ಉಡುಪ ಮೂಲ್ಕಿ, ವೇಣುಗೋಪಾಲ ಶೆಟ್ಟಿ ಮೂಡುಬಿದ್ರೆ, ಚಂದ್ರಶೇಖರ ಪೇರಾಲು ಸುಳ್ಯ, ಸನತ್ ಕುಮಾರ್ , ಕಸಾಪ ಜಿಲ್ಲಾ ಸಂಘಟನಾ ಕಾರ‍್ಯದರ್ಶಿ ಪುಷ್ಪರಾಜ್ ನಿರೂಪಿಸಿದರು. ಪ್ರಾಧಿಕಾರದ ಶ್ರೀನಿವಾಸ್ ಕರಿಯಪ್ಪ ವಂದಿಸಿದರು.