ಕಾರವಾರ: ಪ್ರಸ್ತಾವಿತ ಬೇಡ್ತಿ- ಹಿರೇವಡ್ಡಟ್ಟಿ (ಮಾರ್ಪಡಿಸಿದ ಬೇಡ್ತಿ- ವರದಾ) ನದಿ ಜೋಡಣೆ ಯೋಜನೆಯ ರೂಪುರೇಷೆ, ಅಭಿವೃದ್ಧಿ ಮತ್ತು ಅನುಷ್ಠಾನದ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹಾತ್ಮಕ ನೆರವಿಗೆ ಮಾತ್ರ ಸೀಮಿತವಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಹಾಗೂ ಯೋಜನೆಯ ಮುಂದಿನ ಚಟುವಟಿಕೆಗಳನ್ನು ತಡೆಹಿಡಿಯುವಂತೆ ಆಗ್ರಹಿಸಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಲ್ಲಿಸಿದ್ದ ಮನವಿಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಬೇಡ್ತಿ- ಹಿರೇವಡ್ಡಟ್ಟಿ ನದಿ ಜೋಡಣೆ ಯೋಜನೆ ಕಾರ್ಯಸಾಧುವಲ್ಲ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ಹೀಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸಬಾರದು ಎಂದು ಕಾಗೇರಿ ಅವರು ಕೇಂದ್ರ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರ ಲಿಖಿತ ಉತ್ತರ ಮಹತ್ವ ಪಡೆದಿದೆ.ನೀರಾವರಿ ಹಾಗೂ ನದಿ ಜೋಡಣೆ ಯೋಜನೆಗಳ ರೂಪಿಸುವಿಕೆ, ಅಭಿವೃದ್ಧಿ ಮತ್ತು ನಿರ್ವಹಣೆ ಆಯಾ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತವೆ. ರಾಜ್ಯ ಸರ್ಕಾರಗಳ ಆಡಳಿತಾತ್ಮಕ ಆದ್ಯತೆ ಮತ್ತು ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸಂಬಂಧಪಟ್ಟ ರಾಜ್ಯ ಸರ್ಕಾರದ ಪ್ರಸ್ತಾವನೆ ಬಂದಾಗ ನಿಯಮಾನುಸಾರ ತಾಂತ್ರಿಕ ಮಾರ್ಗದರ್ಶನ ಹಾಗೂ ಸಲಹೆ ನೀಡುವುದನ್ನು ಹೊರತುಪಡಿಸಿ, ಯೋಜನೆ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರಕ್ಕೆ ನೇರ ಹೊಣೆಗಾರಿಕೆ ಇರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧಿಕೃತ ಮನವಿ ಹಾಗೂ 2025ರ ಡಿ. 23ರಂದು ಮಾಡಿಕೊಂಡ ಒಪ್ಪಂದದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (ಎನ್ಡಬ್ಲ್ಯುಡಿಎ) ಡಿಪಿಆರ್ ಸಿದ್ಧಪಡಿಸುವ ಕಾರ್ಯ ಕೈಗೆತ್ತಿಕೊಂಡಿದೆ. ರಾಜ್ಯ ಸರ್ಕಾರದೊಂದಿಗಿನ ಒಪ್ಪಂದದಂತೆ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆಯೇ ಹೊರತು, ಅದುವೇ ಅಂತಿಮ ಯೋಜನಾ ವರದಿಯಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಸ್ತಾಪಿಸಿರುವ ಪರಿಸರ ಹಾಗೂ ಜನಹಿತದ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅರಣ್ಯ, ವನ್ಯಜೀವಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಎಲ್ಲ ಶಾಸನಬದ್ಧ ನಿಯಮಾವಳಿಗಳ ಕುರಿತು ರಾಜ್ಯ ಸರ್ಕಾರ ವರದಿ ಸಲ್ಲಿಸಿದರೆ, ಅದನ್ನು ಕೇಂದ್ರ ಪರಿಸರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಂಸದರ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.