ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ. 2.58ರಷ್ಟು ಹೆಚ್ಚುವರಿ ಮತದಾನ: ನಲಿನ್ ಅತುಲ್

| Published : May 12 2024, 01:16 AM IST

ಸಾರಾಂಶ

ಲೋಕಸಭಾ ಚುನಾವಣೆ-2024ರ ಹಿನ್ನೆಲೆ ಮೇ 7ರಂದು ನಡೆದ ಮತದಾನದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. 2.58ರಷ್ಟು ಹೆಚ್ಚುವರಿ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.

ಕೊಪ್ಪಳ: ಲೋಕಸಭಾ ಚುನಾವಣೆ-2024ರ ಹಿನ್ನೆಲೆ ಮೇ 7ರಂದು ನಡೆದ ಮತದಾನದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. 2.58ರಷ್ಟು ಹೆಚ್ಚುವರಿ ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ನಲಿನ್ ಅತುಲ್ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,66,397 ಮತದಾರರಿದ್ದು, 13,24,898 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟಾರೆ ಶೇ.70.99ರಷ್ಟು ಮತದಾನವಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು (ಶೇ. 75.54) ಮತದಾನವಾಗಿದ್ದು, ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಡಿಮೆ (ಶೇ. 64.66) ಮತದಾನವಾಗಿದೆ.

85ರ ಮೇಲ್ಪಟ್ಟ ವಯೋಮಾನದ ಒಟ್ಟು 1361 ಮತದಾರರಲ್ಲಿ 1304 ಮತದಾರರು ಮತ ಚಲಾಯಿಸಿರುತ್ತಾರೆ. 576 ವಿಕಲಚೇತನ ಮತದಾರರಲ್ಲಿ 563 ಮತದಾರರು ಮನೆಯಿಂದ ಮತ ಚಲಾಯಿಸಿರುತ್ತಾರೆ. ಅಗತ್ಯ ಸೇವೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 16 ಇಲಾಖೆಯ 853 ಸಿಬ್ಬಂದಿ ಮತದಾರರಲ್ಲಿ 431 ಮತದಾರರ ಮತ ಚಲಾಯಿಸಿರುತ್ತಾರೆ.

ಕಳೆದ ಚುನಾವಣೆಗಿಂತ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ. 2.58ರಷ್ಟು ಹೆಚ್ಚುವರಿ ಮತದಾನವಾಗಿದೆ. ಶೇ. 70.99 ಮತದಾನವು ಲೋಕಸಭಾ ಚುನಾವಣೆಗಳಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಈ ವರೆಗಿನ ಗರಿಷ್ಠ ಮತದಾನವಾಗಿದೆ.

ಮತದಾರರಲ್ಲಿ ಅರಿವು ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಹಲವಾರು ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ 1317 ಮತಗಟ್ಟೆಗಳಲ್ಲಿ ನಿರಂತರ ಮತದಾನ ಜಾಗೃತಿ, ಉತ್ಸವಗಳಲ್ಲಿ, ಜಾತ್ರೆಗಳಲ್ಲಿ ಗ್ರಾಮೀಣ ಸಂತೆ, ಮದುವೆ ಸಮಾರಂಭಗಳಲ್ಲಿ ತಪ್ಪದೇ ಮತದಾನ ಮಾಡುವಂತೆ ಸಹಿ ಸಂಗ್ರಹ ಅಭಿಯಾನ, ಮನೆ ಮನೆ ಸ್ವೀಪ್ ಅಭಿಯಾನ, ಎತ್ತಿನ ಬಂಡಿ ಜಾಥಾ, ಬೈಕ್ ರ್‍ಯಾಲಿ, ಕ್ಯಾಂಡಲ್ ಲೈಟ್, ಪಂಜಿನ ಮೆರವಣಿಗೆ, ಮಾನವ ಸರಪಳಿ, ವಿಶೇಷ ಚೇತನರಿಂದ ಬೈಕ್ ರ್‍ಯಾಲಿ ಕಾರ್ಯಕ್ರಮ ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ. ಸ್ವೀಪ್ ಚಟುವಟಿಕೆಗೆ ಮತದಾರರು ಉತ್ತಮವಾಗಿ ಸ್ಪಂದಿಸಿ ಮತದಾನದ ಮೂಲಕ ಉತ್ತಮ ಕೊಡುಗೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಯುವ ಮತ್ತು ನವ ಮತದಾರರಿಗೆ ರೀಲ್ಸ್ ಸ್ಪರ್ಧೆಯಂತಹ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ಮತದಾರರು ಮತ ಚಲಾಯಿಸಲು ಉತ್ತೇಜಿಸಲಾಗಿದೆ. ಒಟ್ಟಾರೆಯಾಗಿ ಶಾಂತಿಯುತ ಮತದಾನವಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ಜರುಗಿಲ್ಲ ಎಂದು ತಿಳಿಸಿದ್ದಾರೆ.