ಸಾರಾಂಶ
ಪಟ್ಟಣದಲ್ಲಿ ಸಂಜಯ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ
ಹೊಸದುರ್ಗ: ಗುರುಗಳು ಭೋದನೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ ಆದರೆ ಭೋದನೆ ಕೇಳುವವರ್ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಪುಷ್ಪಗಿರಿ ಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿ ಸಂಜಯ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಪ್ರಧಾನಮಂತ್ರಿಯಿಂದ ಹಿಡಿದು ಮುಖ್ಯ ಮಂತ್ರಿ ಕಾರ್ಯಕ್ರಮಗಳಿಗೂ ಜನರನ್ನು ಹಣ ಕೊಟ್ಟು ಕರೆತರುವಂತಹ ಪರಿಸ್ಥಿತಿಗೆ ನಿರ್ಮಾಣವಾಗಿರುವುದೇ ಧಾರ್ಮಿಕತೆಗೆ ದೊಡ್ಡ ಹಿನ್ನಡೆಗೆ ಕಾರಣವಾಗಿದೆ ಎಂದರು.ಧಾರ್ಮಿಕತೆ, ಸಾಮಾಜಿಕತೆ ಹಾಗೂ ಮಾನವೀಯ ಮೌಲ್ಯಗಳು ಉಳಿದಿವೆಯಾ, ಉಳಿಸಲು ಪ್ರಯತ್ನಗಳು ನಡೆಯುತ್ತಿವೆಯಾ ಎಂಬ ಪ್ರಶ್ನೆ ನಾವು ಹಾಕಿಕೊಳ್ಳಬೇಕಿದೆ. ಸಭೆಗಳಲ್ಲಿ ಜನರು ಕುಳಿತುಕೊಳ್ಳುವುದಿರಲಿ ವಿಧಾನಸಭೆ, ಲೋಕಸಭೆಗಳಲ್ಲಿಯೇ ಚುನಾಯಿತ ಪ್ರತಿನಿಧಿಗಳು ಕುಳಿತುಕೊಳ್ಳುತ್ತಿಲ್ಲ. ಇದನ್ನೆಲ್ಲಾ ಗಮನಿಸಿದರೆ ಸಮಾಜ ಯಾವ ದಿಕ್ಕಿನಲ್ಲಿ ಹೊಗುತ್ತಿದೆ ಎಂಬುದೇ ತಿಳಿಯದಾಗಿದೆ ಎಂದರು.
ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ಇಂದು ಮಾನಸಿಕ ಆರೋಗ್ಯ ಕೆಟ್ಟಿದೆ. ಸಮಾಜದಲ್ಲಿ ನಂಬಿಕೆ, ವಿಶ್ವಾಸ ಇಲ್ಲದಾಗಿದೆ. ಸರ್ಕಾರಿ ಸ್ಕೀಂಗಳು ಜಾತಿಯ ಸ್ಕೀಂಗಳಾಗದೆ ಮಾನವತೆಯ, ಸಮಾನತೆಯ ಸ್ಕೀಂಗಳಾದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ. ಸಂಜಯ್ ಆಸ್ಪತ್ರೆ ಜಾತಿಯ ಆಸ್ಪತ್ರೆಯಾಗದೆ ಮಾನವೀಯತೆಯ ಆಸ್ಪತ್ರೆಯಾಗಲಿ ಎಂದರು.ವಿಧಾನಸಭೆಯ ಉಪ ಸಭಾಪತಿ ರುದ್ರಪ್ಪಲಮಾಣಿ ಮಾತನಾಡಿ, ವೈದ್ಯರುಗಳು ತಮ್ಮ ಕೆಲಸವನ್ನು ಸೇವೆಯಾಗಿ ನೋಡಬೇಕೆ ಹೊರತು ಕಮರ್ಷಿಯಲ್ ಆಗಿ ನೋಡಬಾರದು ಎಂದರು.
ಶಾಸಕ ಬಿಜಿ ಗೋವಿಂದಪ್ಪ ಮಾತನಾಡಿ ಯಾವುದೇ ವ್ಯಕ್ತಿ ಪದವಿಯಿಂದ ಉತ್ತುಂಗಕ್ಕೆ ಏರಲು ಸಾದ್ಯವಿಲ್ಲ ಸೇವೆಯಿಂದ ಮಾತ್ರ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಬ್ರಹ್ಮವಿದ್ಯಾನಗರದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ವೇಳೆ ಬಿಜೆಪಿ ರಾಜ್ಯ ವಕ್ತಾರ ಚಂದ್ರಶೇಖರ್, ಡಾ ಸಂಜಯ್ ಮತ್ತಿತರರು ಹಾಜರಿದ್ದರು.