ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಯುವಜನರು ಎಂಜಿಯನಿರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ವ್ಯಾಮೋಹದಿಂದ ಹೊರಬಂದು ಆತ್ಮವಿಶ್ವಾಸ ತುಂಬುವ ಪದವಿ ವ್ಯಾಸಂಗದ ಕಡೆ ಹೆಚ್ಚು ಗಮನ ಹರಿಸುವಂತೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಲಹೆ ನೀಡಿದರು.ಪಟ್ಟಣದ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸೆಮಿನಾರ್ ಕೊಠಡಿ ಉದ್ಘಾಟಿಸಿ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರ ಸಂಪೂರ್ಣ ಖಾಸಗೀಕರಣಗೊಳ್ಳುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರಿದ್ದರೂ ನಮ್ಮ ಸರ್ಕಾರಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಖಾಸಗಿ ಶಾಲೆಗಳ ಮಾದರಿಯಲ್ಲಿ ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸದ ಕಾರಣದಿಂದ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗಿದೆ. ಮಿತಿ ಮೀರಿದ ಡೋನೇಷನ್ ಹಾವಳಿ ನಡುವೆಯೂ ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳು ಪೋಷಕರಿಗೆ ಹೊರೆಯಾಗದಂತೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ ಎಂದರು.ಶಿಕ್ಷಣ ಎಂದರೆ ಕೇವಲ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಎನ್ನುವ ಭ್ರಮೆಗೆ ನಮ್ಮ ಪೋಷಕರು ಮತ್ತು ವಿದ್ಯಾರ್ಥಿಗಳು ಒಳಗಾಗಿದ್ದಾರೆ. ಇದರಿಂದ ಹೊರಬೇಕು. ಪದವಿ ಶಿಕ್ಷಣದಲ್ಲಿ ಲೋಕ ಜ್ಞಾನವಿದೆ. ಅಧ್ಯಾಪಕ ವೃತ್ತಿಯಿಂದ ಹಿಡಿದು ಕೆಎಎಸ್, ಐಎಎಸ್, ಐಪಿಎಸ್ ಪರೀಕ್ಷೆಗಳು ಸೇರಿದಂತೆ ಎಲ್ಲ ಸಾಮಾನ್ಯ ಜ್ಞಾನದ ಪರೀಕ್ಷೆಗಳನ್ನು ಎದುರಿಸುವ ತಾಕತ್ತು ನಮ್ಮ ವಿದ್ಯಾರ್ಥಿಗಳಿಗೆ ಪದವಿ ಕಲಿಕೆಯಿಂದ ಬರುತ್ತದೆ ಎಂದರು.
ಸಮಾರಂಭದಲ್ಲಿ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಪದವಿ ವ್ಯಾಸಂಗವು ವಿದ್ಯಾರ್ಥಿಗಳಿಗೆ ಸಧೃಡ ಬದುಕು ಕಟ್ಟಿಕೊಂಡು ಸಾಧನೆ ಮಾಡಲು ನಿರ್ಣಾಯಕ ಘಟ್ಟವಾಗಿದೆ ಎಂದರು.ಸಮಾರಂಭದಲ್ಲಿ ಕಲ್ಪತರು ಪ್ರಥಮ ದರ್ಜೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ವಿಠಲಾಪುರ ಜಯರಾಂ, ವಕೀಲ ಬಂಡಿಹೊಳೆ ಗಣೇಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಆರ್.ನೀಲಕಂಠ, ಕಾಲೇಜಿನ ಆಡಳಿತಾಧಿಕಾರಿ ಶಿವಕುಮಾರ್ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.