ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯವೂ ಸೂತಕದಂತಾಗಿದೆ

| Published : Feb 05 2025, 12:32 AM IST

ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯವೂ ಸೂತಕದಂತಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿ ನಿತ್ಯವೂ ಸೂತಕದ ಮನೆಯಾಗಿದ್ದು, ಹಣವಿಲ್ಲದೇ ಪಾಪರ್ ಆಗಿ ನಿಗಮಗಳಿಗೆ ಹಣ ಕೊಟ್ಟಿಲ್ಲ. ಸರ್ಕಾರ ದಿವಾಳಿ ಆಗಿ ರಾಜ್ಯದೊಳಗೆ ಬರೀ ಆತ್ಮಹತ್ಯೆ ಆಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಮೈಕ್ರೋ ಫೈನಾನ್ಸ್ ನವರು ಈ ಸರ್ಕಾರವನ್ನು ಕೇರ್ ಮಾಡ್ತಾ ಇಲ್ಲ. ಜವಾಬ್ದಾರಿಯುತ ಸರ್ಕಾರವಾಗಿ ಏನಾದರೂ ಘೋಷಣೆ ಮಾಡಿದ್ರೆ ಹೇಗಿರಬೇಕು? ಉತ್ತರ ಪ್ರದೇಶದಲ್ಲಿ ನಮ್ಮ ಸಿಎಂ ಗುಡುಗಿದ್ರೆ ರೌಡಿಗಳು ಉತ್ತರ ಪ್ರದೇಶ ಅಲ್ಲ ದೇಶಬಿಟ್ಟೇ ಓಡಿ ಹೋಗ್ತಾರೆ. ನಮ್ಮ ಸಿಎಂ ಗುಡುಗಿದ್ದು ಆಯ್ತು, ಮಳೆ ಬಂದಿದ್ದು ಆಯ್ತು ಏನೂ ಕ್ರಮ ಆಗಿಲ್ಲ ಎಂದು ಕುಟುಕಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿ ನಿತ್ಯವೂ ಸೂತಕದ ಮನೆಯಾಗಿದ್ದು, ಹಣವಿಲ್ಲದೇ ಪಾಪರ್ ಆಗಿ ನಿಗಮಗಳಿಗೆ ಹಣ ಕೊಟ್ಟಿಲ್ಲ. ಸರ್ಕಾರ ದಿವಾಳಿ ಆಗಿ ರಾಜ್ಯದೊಳಗೆ ಬರೀ ಆತ್ಮಹತ್ಯೆ ಆಗುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿತ್ಯವೂ ಸೂತಕ ಇದೆ. ಕರ್ನಾಟಕ ಸೂತಕದ ಮನೆಯಾಗಿದೆ. ಮೈಕ್ರೋ ಫೈನಾನ್ಸ್‌ನಿಂದ ಸರಣಿ ಸಾವು ಆಗುತ್ತಿದೆ ಕೇಳೋರಿಲ್ಲ. ಬಾಣಂತಿಯರ ಸಾವಿಗೆ ಏನೂ ಕ್ರಮ ಇಲ್ಲ. ಗುತ್ತಿದೆದಾರರ ಹಣ ಬಿಡುಗಡೆ ಇಲ್ಲದೆ ಸಾವಿಗೀಡಾಗುತ್ತಿದ್ದಾರೆ. ಅಧಿಕಾರಿಗಳ ಸಾವಿಗೆ ಸ್ಪಂದನೆ ಇಲ್ಲ. ಈ ಸರ್ಕಾರ ಇದೆಯೋ ಇಲ್ಲವೊ ಎನ್ನೋ ಸ್ಥಿತಿ ಇದೆ. ಕೊಲೆ, ಸುಲಿಗೆ ಅತ್ಯಾಚಾರ ನಿತ್ಯ ಆಗುತ್ತಿದೆ. ರಾಜ್ಯದಲ್ಲಿ ಸಿಎಂ ಇದ್ದಾರ, ಗೃಹ ಸಚಿವರು ಇದ್ದಾರಾ ಎಂದು ಕೇಳುವವರಿಲ್ಲ ಎಂದರು.

ಕಾಟಾಚಾರಕ್ಕೆ ಸುಗ್ರೀವಾಜ್ಞೆ: ನನಗಿರುವ ಮಾಹಿತಿ ಪ್ರಕಾರ.೨೫ ಜನ ಮೈಕ್ರೋ ಫೈನಾನ್ಸ್ ಹಾವಳಿಗೆ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯಲ್ಲೂ ಅರಕಲಗೂಡು ತಾಲೂಕಿನಲ್ಲಿ ಒಂದು ಆತ್ಮಹತ್ಯೆ ಆಗಿದೆ. ಸಿಎಂ, ಸಚಿವರು ಸಭೆ ಮೇಲೆ ಸಭೆ ಮಾಡಿದ್ದಾರೆ. ಆದರೆ ಸರ್ಕಾರ ಕಠಿಣ ಕ್ರಮ ಎಂದು ಭಜನೆ ಮಾಡುತ್ತಿದ್ದಾರೆ. ಆದರೂ ಇವರ ಹಾವಳಿ ನಿಂತಿಲ್ಲ. ಒಂದು ತಿಂಗಳಿಂದ ಈ ರೀತಿ ಘಟನೆ ಆಗ್ತಿವೆ. ಯಾವ ಮೈಕ್ರೊ ಫೈನಾನ್ಸ್ ಮೇಲೆ ಕ್ರಮ ಆಗಿದೆ? ಯಾವ ಸಂಸ್ಥೆಯ ಮ್ಯಾನೇಜರ್‌ ಹಾಗು ಮಾಲೀಕನ ಬಂಧನ ಆಗಿದೆ! ಕಾಟಾಚಾರಕ್ಕೆ ಸುಗ್ರೀವಾಜ್ಞೆ ಎಂದು ಹೇಳುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ನವರು ಈ ಸರ್ಕಾರವನ್ನು ಕೇರ್ ಮಾಡ್ತಾ ಇಲ್ಲ. ಜವಾಬ್ದಾರಿಯುತ ಸರ್ಕಾರವಾಗಿ ಏನಾದರೂ ಘೋಷಣೆ ಮಾಡಿದ್ರೆ ಹೇಗಿರಬೇಕು? ಉತ್ತರ ಪ್ರದೇಶದಲ್ಲಿ ನಮ್ಮ ಸಿಎಂ ಗುಡುಗಿದ್ರೆ ರೌಡಿಗಳು ಉತ್ತರ ಪ್ರದೇಶ ಅಲ್ಲ ದೇಶಬಿಟ್ಟೇ ಓಡಿ ಹೋಗ್ತಾರೆ. ನಮ್ಮ ಸಿಎಂ ಗುಡುಗಿದ್ದು ಆಯ್ತು, ಮಳೆ ಬಂದಿದ್ದು ಆಯ್ತು ಏನೂ ಕ್ರಮ ಆಗಿಲ್ಲ ಎಂದು ಕುಟುಕಿದರು.

ಖರ್ಗೆಯವರಿಗೆ ಕಾಣುತ್ತಿಲ್ಲವೇ?: ಕುಂಭಮೇಳದಲ್ಲಿ ೩೦ ಜನ ಮೃತಪಟ್ಟರು. ಅದಕ್ಕೆ ಕಾಂಗ್ರೆಸ್ ನಾಯಕರು ದೊಡ್ಡದಾಗಿ ಮಾತಾಡಿದ್ರು. ಇಲ್ಲಿ ನಿಮ್ಮ ತಪ್ಪಿನಿಂದ ೨೫ ಜನ ಸತ್ತಿದ್ದಾರೆ. ಖರ್ಗೆಯವರೇ ಇದು ಕಾಣುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು. ನಿಗಮಗಳ ಮೂಲಕ ಲೋನ್ ಕೊಟ್ಟಿದ್ದರೆ ಈ ಸಮಸ್ಯೆ ಯಾಕೆ ಬರ್ತಿತ್ತು! ನಾವಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ೬೦ ಕೋಟಿ ಕೊಟ್ಟಿದ್ದೆವು. ಇವರು ೪೦ ಕೋಟಿಗೆ ಇಳಿಸಿದ್ದಾರೆ. ನಿಮ್ಮ ಸರ್ಕಾರ ದಿವಾಳಿ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಕೇಂದ್ರ ಆರ್ಥಿಕ ಸಚಿವರು ಕರ್ನಾಟಕ ದಿವಾಳಿಯಾಗಿದೆ ಎಂದಿದ್ದಾರೆ. ಅದಕ್ಕೆ ಏನು ಬಾಯಿ ಬಡಿದುಕೊಂಡರು. ಹಣ ಇಲ್ಲದೆ ಪಾಪರ್ ಆಗಿ ನಿಗಮಗಳಿಗೆ ಹಣ ಕೊಟ್ಟಿಲ್ಲ. ಹಾಗಾಗಿ ಜನರು ಮೈಕ್ರೋ ಫೈನಾನ್ಸ್ ಬಳಿ ಸಾಲ ತಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ ವಾಲ್ಮೀಕಿ ನಿಗಮಕ್ಕೆ ಅನುದಾನ ಕೊಡಬೇಕಿತ್ತು. ಎಲ್ಲಾ ಇಲಾಖೆಗೂ ಕೂಡ ಶೇ. ೪೦ರಷ್ಟು ಹಣ ಕಡಿತ ಮಾಡಿದ್ದಾರೆ. ಈ ಅವಧಿಯಲ್ಲೇ ಯಾಕೆ ಮೈಕ್ರೋ ಫೈನಾನ್ಸ್ ಕಾಟ ಜಾಸ್ತಿ ಆಗಿದೆ. ನೀವು ಕೂಡ ಕೇರಳದಂತೆ ದಿವಾಳಿ ಆಗಿದ್ದೀರಾ!

ರೌಡಿಗಳಿಗೆ ಉದ್ಯೋಗ ಭಾಗ್ಯ: ಈ ಸರ್ಕಾರ ಬಂದ ಮೇಲೆ ಬರೀ ಆತ್ಮಹತ್ಯೆ ಆಗುತ್ತಿದೆ. ಇವರು ಬಂದ ಮೇಲೆ ೨೫೦೦ ಸಾವಿರಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನೋ ಮಾಹಿತಿ ನನಗಿದೆ. ಜನ ಊರು ಬಿಟ್ಟು ಹೋಗೋ ಸ್ಥಿತಿ ಬಂದಿದೆ. ಚಾಮರಾಜನಗರದಲ್ಲಿ ಈ ಸಮಸ್ಯೆ ಜಾಸ್ತಿ ಇದೆ. ಸಿದ್ದರಾಮಯ್ಯ ಬಂದ ಬಳಿಕ ರೌಡಿಗಳಿಗೆ ಕೆಲಸ ಸಿಕ್ಕಿದೆ. ರೌಡಿಗಳಿಗೆ ಉದ್ಯೋಗ ಭಾಗ್ಯ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ನಾವು ಗ್ಯಾರಂಟಿ ಬೇಡ ಎನ್ನಲ್ಲ. ಎರಡು ಸಾವಿರ ಅಲ್ಲ ಐದು ಸಾವಿರ ಕೊಡಿ. ಎಲ್ಲವನ್ನೂ ಗುಡಿಸಿ ಗುಂಡಾಂತರ ಮಾಡಿ ಹೋಗಿ. ನವೆಂಬರ್ ೧೫ ಅಥವಾ ೧೬ಕ್ಕೆ ಸಿದ್ದರಾಮಯ್ಯ ಇಳಿಯಬೇಕಲ್ಲ. ನಂತರ ಡಿಕೆ ಬರ್ತಾರೊ ಪರಮೇಶ್ವರ್ ಬರ್ತಾರೋ ಜಾರಕಿ ಹೊಳಿ ಬರ್ತಾರೋ , ಯಾವ ಹೊಳಿ ಬಂದರೂ ಏನೂ ಉಳಿದಿರಲ್ಲ. ನಮ್ಮ ರಾಜ್ಯದ ಬೊಕ್ಕಸ ಯಾವಾಗಲೂ ಖಾಲಿ ಆಗಿರಲಿಲ್ಲ. ಇಷ್ಟು ಪಾಪರ್ ಸರ್ಕಾರ ಇತಿಹಾಸದಲ್ಲಿ ಇಲ್ಲ ಎಂದ ಗುಡುಗಿದರು.ಒಂದು ಲಕ್ಷದ ಐದು ಸಾವಿರ ಈ ಸಲ ಸಾಲ ಮಾಡಬೇಕಾಗುತ್ತದೆ! ಕರ್ನಾಟಕವನ್ನು ದುಸ್ಥಿತಿಗೆ ತಂದ ಮನೆ ಹಾಳ ಸರ್ಕಾರ ಇದು. ಮೈಕ್ರೋಫೈನಾನ್ಸ್ ಹಾವಳಿ ತಡೆಯಲು ಸರ್ಕಾರ ಕೂಡಲೇ ನಿಗಮಗಳಿಗೆ ಹಣ ನೀಡಬೇಕು. ಐದು ಸಾವಿರ ಕೋಟಿ ಹಣ ನಿಗಮಕ್ಕೆ ಬಿಡುಗಡೆ ಮಾಡಿ ಎಂದ ಅವರು, ಸಾಲ ಕೊಡ್ತೀರಾ ಅದು ವಾಪಸ್ ಬರುತ್ತದೆ. ಇರೋ ಕಾನೂನೇ ಸಾಕಷ್ಟು ಬಲಿಷ್ಠವಾಗಿದೆ. ಆದರೆ ಪೊಲೀಸರಿಂದ ಏನೂ ಕ್ರಮ ಆಗ್ತಾ ಇಲ್ಲ. ಯಾಕಂದ್ರೆ ಪೊಲೀಸರು ವರ್ಗಾವಣೆ ದಂಧೆಯಲ್ಲಿ ಬಂದವರು ಹಾಗಾಗಿ ಅವರ ಕಂಡರೆ ಭಯ ಇಲ್ಲ ಎಂದರು. ಬಡವರಿಗೆ ಸರ್ಕಾರ ಲೋನ್ ಕೊಟ್ಟರೆ ಈ ಹಾವಳಿ ನಿಲ್ಲುತ್ತದೆ. ನಾವು ಹೋರಾಟ ಮಾಡಿ ಓರ್ವ ಸಚಿವರು ರಾಜೀನಾಮೆ ನೀಡಿದ್ದಾರೆ. ಸಿಎಂ ಕೊನೆ ಹಂತಕ್ಕೆ ಬಂದಿದ್ದಾರೆ. ಇನ್ನು ಎರಡು ವರ್ಷ ತುಂಬುವುದರೊಳಗೆ ಈ ಪರಿಸ್ಥಿತಿ ಬಂದಿದೆ. ಡಿಸಿಎಂ ಅವರು ನನ್ನ ಬಳಿ ಬಂದು ಭವಿಷ್ಯ ಕೇಳ್ತೀನಿ ಅಂದಿದ್ದಾರೆ. ಅವರು ಬಂದ್ರೆ ಹೇಳ್ತಿನಿ, ಸಿಎಂ ಆಯ್ಕೆ ಹಾಗೊ ಸಂದರ್ಭ ಯಾರಿದ್ದರು? ಏನೇನು ಮಾತಾಡಿದ್ರು ಎಂದು ಮಾತಾಡಬೇಕಲ್ಲ ಎಂದು ಹೇಳಿದರು.

ಬಿಜೆಪಿಯಲ್ಲಿ ಗೊಂದಲದ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ರಾಜ್ಯದ ರಾಜಕೀಯದಲ್ಲಿ ಬಿಜೆಪಿ ಒಳಗಿನ ಬಣ ಜಗಳದ ಕುರಿತು ಮಾತನಾಡುತ್ತಾ, ನಾನು ಪಾರ್ಟಿಯ ಶಿಸ್ತಿನ ಸಿಪಾಯಿ, ಮನೆಯೊಳಗೆ ಏನು ಮಾತನಾಡಬೇಕು ಅಲ್ಲಿ ಮಾತನಾಡುತ್ತೇನೆ, ಹೊರಗೆ ಏನು ಮಾತನಾಡಬೇಕು ಅದನ್ನು ಮಾತನಾಡಿದ್ದೇನೆ. ಇತಿಹಾಸದಲ್ಲಿ ನಾನು ಪಾರ್ಟಿ ವಿಚಾರಗಳನ್ನು ಹೊರಗಡೆ ಮಾತನಾಡಿಲ್ಲ ಎಂದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಂದಾಗ ಕರ್ನಾಟಕದ ಸ್ಥಿತಿಗತಿಗಳನ್ನು ವಿವರಿಸಿದ್ದೇನೆ. ನಾನು ಕೂಡ ದೆಹಲಿ ನಾಯಕರ ಜತೆ ಸಂಪರ್ಕದಲ್ಲಿದ್ದೇನೆ. ಮುಂದಿನ ಹದಿನೈದು-ಇಪ್ಪತ್ತು ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನ ಹೊರಬೀಳಲಿದೆ ಎಂದು ಅವರು ಭವಿಷ್ಯ ನುಡಿದರು.

=============================

* ಬಾಕ್ಸ್‌: ಆಚೆ ಹೋದರೆ ನನ್ನ ಶಕ್ತಿ ಜೀರೋ

ಬಿಜೆಪಿ ಬಿಟ್ಟು ಹೋದವರು ಉದ್ಧಾರವಾಗಿಲ್ಲ. ಬಿಜೆಪಿ ನನ್ನ ಶಕ್ತಿ. ಆಮೇಲೆ ಅಶೋಕ್ ಎಂದ ಅವರು, ಆಚೆ ಹೋದರೆ ನನ್ನ ಶಕ್ತಿ ಜೀರೋ ಎಂದು ಭಾವೋದ್ರೇಕದಿಂದ ನುಡಿದರು. ಈ ನಿಟ್ಟಿನಲ್ಲಿ ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಪಕ್ಷ ತಾಯಿ ಇದ್ದಂತೆ ಎಂದು ಉತ್ತರಿಸಿದರು. ಇನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಏನನ್ನೂ ಹೇಳಲು ಇಷ್ಟಪಡದೇ ಮೌನವಾಗಿದ್ದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಶಾಸಕ ಸಿಮೆಂಟ್ ಮಂಜು, ಬಿ.ಎಚ್. ನಾರಾಯಣಗೌಡ, ಪ್ರಸನ್ನ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.