ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರತಿಯೊಬ್ಬರು ಕಾಯಕ ನಿಷ್ಠರಾಗಬೇಕು. ಮಾಡುವ ಕಾಯಕದಲ್ಲಿ ಮೇಲು ಕೀಳುಗಳೆನ್ನದೇ ಅದರಲ್ಲಿ ಕೈಲಾಸ ಕಾಣುವಂತಾಗಬೇಕು ಎಂದು ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಚ್.ವೈ. ಮೇಟಿ ಹೇಳಿದರು.ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಮಹರ್ಷಿ ಮೂಲ ದೇವಾನು ದೇವತೆಗಳಿಗೆ ಕ್ಷೌರಿಕನಾಗಿದ್ದರಿಂದ ಕ್ಷೌರಿಕರ ಮೂಲ ಪುರುಷನಾಗಿದ್ದಾರೆ. ಇಂತಹ ಮಹಾತ್ಮರ ಸಮುದಾಯದವರು ಶಿಕ್ಷಣ ಪಡೆಯುವುದರ ಜೊತೆಗೆ ವೃತ್ತಿಯಲ್ಲಿ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಬಳಕೆ ಸಹ ಮುಖ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ ಮಾತನಾಡಿ, ಸೂರ್ವಿತ ಎಂಬುದು ಸೂರ್ಯನಿಗೆ ಕರೆಯುವ ಹೆಸರಾಗಿದ್ದು, ಸೂರ್ಯ ತನ್ನ ಪಥ ಬದಲಿಸಿ ಬರುವ ಈ ದಿನ ರಥಸಪ್ತಮಿ ಆಗಿದ್ದು, ಅಂದೇ ಸವಿತಾ ಮಹರ್ಷಿ ಅವತರಿಸಿದ್ದಾರೆ. ಬ್ರಹ್ಮನ ನಾಭಿಯಿಂದ ಹುಟ್ಟಿದ ಋಷಿಯಾಗಿದ್ದರಿಂದ ಈ ಸಮಾಜದವರಿಗೆ ನಾವಿಕರು ಎಂದು ಕರೆಯುವರು. ಅಲ್ಲದೆ ಶಿವನ ಕ್ಷೌರ ಮಾಡಿ ಶಿವನಿಗೆ ತುಂಬಾ ಹತ್ತಿರವಾದವರಾದವರು ಸವಿತಾ ಮಹರ್ಷಿ ಮನುಷ್ಯ ಪಾಪ ಕರ್ಮಗಳ ಪ್ರತೀಕವಾಗಿ ಕೂದಲುಗಳು ಬೆಳೆಯುತ್ತಿದ್ದರಿಂದ ದೇವಸ್ಥಾನಗಳಿಗೆ ಮುಡಿಕೊಡುವ ಪದ್ಧತಿ ಇದ್ದು, ಇಂದಿಗೂ ಪ್ರಸ್ತುತಿ ಇದೆ ಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಮಾಡಲಾರರು ಎಂಬ ನಾನ್ನುಡಿ ಪ್ರತಿಯೊಬ್ಬರೂ ಗಮನಿಸಿ ಇತಿಹಾಸ ಅರಿವ ಕಾರ್ಯವಾಗಬೇಕು. ಸವಿತಾ ಮಹರ್ಷಿಯಂತಹ ಸಮುದಾಯದವರು ಅವರ ಆಚರಣೆ, ಉದ್ದೇಶ ಹಾಗೂ ಮೌಲ್ಯವನ್ನು ಅರಿತಾಗ ಮಾತ್ರ ಜಯಂತಿ ಆಚರಿಸಿದ್ದಕ್ಕೂ ಸ್ವಾರ್ಥಕತೆವಾಗುತ್ತದೆ. ಆಯುರ್ವೇದದಲ್ಲಿ ಪರಿಣತಿ ಹೊಂದಿದ ಶಿವನ ಹತ್ತಿರ ಆದವರು ಹಾಗೂ ಸಂಗೀತದಲ್ಲಿ ಒಲವು ಹೊಂದಿದವರು ಸವಿತಾ ಮಹರ್ಷಿ ಎಂದರು.
ರಾಮಣ್ಣ ಗೋಗಿ ಉಪನ್ಯಾಸ ನೀಡಿ ಮಾತನಾಡಿ, ಕಶ್ಯಪ ಮುನಿಗೆ ಅದಿತಿಯಲ್ಲಿ ಜನಿಸಿದ ಸವಿತಾ ಮಹರ್ಷಿ ಪುರಾಣದ ಪ್ರಕಾರ ಶಿವನು ಅತಿಯಾಗಿ ಬೆಳೆದ ಕೂದಲುಗಳಿಂದ ತೊಂದರೆ ಅನುಭವಿಸುತ್ತಿದ್ದಾಗ ಪಾರ್ವತಿ ದೇವಿಯ ಸಲಹೆಯಂತೆ ತನ್ನ ಎಡಗಣ್ಣಿನಿಂದ ಕ್ಷೌರಿಕರ ಮೂಲ ಪುರುಷರಾದದವರು. ಆಯುರ್ವೇದ ಈ ಜನಾಂಗದ ಉಪಕಸಬಾಗಿ ಬಂದಿದೆ. ಈ ಸಮುದಾಯದವರು ಒಗ್ಗಟ್ಟಾದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ. ಕ್ಷೌರಿಕ, ಆಯುವೇದ ಹಾಗೂ ಸಂಗೀತದಲ್ಲಿ ಪರಿಣತಿ ಹೊಂದಿದವರು ಸವಿತಾ ಮಹರ್ಷಿ ಎಂದು ಹೇಳಿದರು.ಜಿ.ಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಸಮುದಾಯದ ಮುಖಂಡರಾದ ಶರಣಬಸಪ್ಪ ಶಹಾಪೂರ, ಗಣೇಶ ಶಹಾಪೂರ, ರೇಖಾ ಇದ್ದರು.
ಸವಿತಾ ಮಹರ್ಷಿ ಭಾವಚಿತ್ರ ಅದ್ಧೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುಂಚೆ ಜಿಲ್ಲಾಡಳಿತ ಆವರಣದಲ್ಲಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಡಳಿತ ಭವನದಿಂದ ಪ್ರಾರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್ ಭವನ ತಲುಪಿತು. ಮೆರವಣಿಗೆಯಲ್ಲಿ ಜಾನಪರ ಕಲಾತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಆಕರ್ಷಣೆಯಾಗಿದ್ದರು.