ಸಾರಾಂಶ
ಗದಗ: ಮಕ್ಕಳಿಗೆ ಶಿಕ್ಷಣ ಹಾಗೂ ರಕ್ಷಣೆ ನೀಡುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗದಗ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಶಿಕ್ಷಣ ಅಧಿಕಾರಿಗಳಿಗೆ ಶಾಲೆಯಲ್ಲಿದೆ ಶಿಕ್ಷಣದ ಜತೆ ರಕ್ಷಣೆ ಎಂಬ ಶೀರ್ಷಿಕೆಯಡಿ ಆರ್.ಟಿ.ಇ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ರಕ್ಷಣೆ ಹಾಗೂ ಶಿಕ್ಷಣ ನೀಡುವುದು ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ಕರ್ತವ್ಯ ಲೋಪದಿಂದ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಶಾಲೆಯ ಹಾಜರಾತಿ ಪರಿಶೀಲನೆ ಮಾಡಿ ಶಾಲೆಯಿಂದ ಮಗು ಹೊರಗುಳಿದ ಸಂದರ್ಭದಲ್ಲಿ ಪರಿಶೀಲನೆ ನಡೆಸಬೇಕು. ಮಗುವಿನ ಕೌಟುಂಬಿಕೆ ಹಿನ್ನೆಲೆ ವಿಚಾರಿಸಬೇಕು. ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಮಗು ಶಾಲೆಯಿಂದ ದೀರ್ಘಕಾಲದವರೆಗೆ ಹೊರಗುಳಿದ ಸಂದರ್ಭದಲ್ಲಿ ಬಾಲಕಾರ್ಮಿಕತೆ, ಅನೈತಿಕ ಚಟುವಟಿಕೆ, ಬಾಲ್ಯ ವಿವಾಹ ಮುಂತಾದ ಘಟನೆಗಳು ಸಂಭವಿಸಬಹುದಾಗಿವೆ. 2016ರ ಮಕ್ಕಳ ರಕ್ಷಣಾ ನೀತಿ ಪಾಲಿಸುವುದು ಕಡ್ಡಾಯವಾಗಿದೆ. ಶಾಲಾ ಫಲಕದಲ್ಲಿ ಮಕ್ಕಳ ಸಹಾಯವಾಣಿ ಅಳವಡಿಸುವುದು, ಶಾಲೆಯಲ್ಲಿ ಮಕ್ಕಳ ಸಲಹಾಪೆಟ್ಟಿಗೆ ಇಡುವುದರಿಂದ ಮಕ್ಕಳ ರಕ್ಷಣಾ ನೀತಿ ಅನುಸರಿಸಿ ಶಾಲೆಯಲ್ಲಿ ಸಂಭವಿಸಬಹುದಾದ ಅವಘಡ ತಪ್ಪಿಸಬಹುದಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ. ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳ ಬಾಲ್ಯ ವಿವಾಹ ಹಾಗೂ ಬಾಲ ಗರ್ಭಿಣಿ ಪ್ರಕರಣಗಳು ಕಂಡು ಬಂದಿರುವುದು ಆತಂಕಕಾರಿ ವಿಷಯವಾಗಿವೆ. ಮಕ್ಕಳು ಶಾಲೆಗೆ ಅನಧಿಕೃತ ಗೈರು ಆಗದಿರುವಂತೆ ಶಿಕ್ಷಕರು ನೋಡಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರಿಂದ ಅವರ ಭವಿಷ್ಯ ಉಜ್ವಲಗೊಳಿಸಬಹುದಾಗಿದೆ ಎಂದರು.
ಡಿಡಿಪಿಐ ಆರ್.ಎಸ್. ಬುರುಡಿ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯ ಪಾಲನೆಯಾಗಬೇಕು. ಶಾಲೆಗೆ ಹಾಜರಾದ ಮಗು ಅರ್ಥಪೂರ್ಣ ಕಲಿಕಾ ಅವಧಿ ಪೂರ್ಣಗೊಳಿಸಬೇಕು. ಶಾಲೆಗೆ ಮಕ್ಕಳನ್ನು ಕಡ್ಡಾಯವಾಗಿ ಕಳುಹಿಸುವುದು ಪಾಲಕರ ಜವಾಬ್ದಾರಿಯೂ ಕೂಡ ಆಗಿದೆ. ಶಾಲೆಯಲ್ಲಿ ಮಗುವಿಗೆ ಕಲಿಕಾ ಅವಧಿಯಲ್ಲಿ ಸಂತಸದಾಯಕ ವಾತಾವರಣ ನಿರ್ಮಾಣವಾಗಬೇಕು ಎಂದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ ಕುರಿತು ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು. ಸಂಪನ್ಮೂಲ ವ್ಯಕ್ತಿ ಬಿ.ಎನ್.ಸಂಶಿ ಅವರು ಶಾಲೆಯಲ್ಲಿದೆ ಶಿಕ್ಷಣದ ಜತೆ ರಕ್ಷಣೆ ಶೀರ್ಷಿಕೆಯಡಿ ಆರ್.ಟಿ.ಇ ಕಾಯ್ದೆ, ಫೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕುರಿತು ಮಾತನಾಡಿದರು. ಜ್ಯೋತಿ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಮಾತನಾಡಿದರು.
ಡಿವೈಎಸ್‌ಪಿ ಇನಾಮದಾರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಯಶ್ರೀ ಕವಲೂರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಡಿ.ಐ. ಈರಗಾರ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಎಂ.ವಿ. ಗೋಡೇಕರ್ ಪ್ರಾರ್ಥಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರು ಸ್ವಾಗತಿಸಿದರು. ರಮೇಶ ಕಳ್ಳಿಮನಿ ವಂದಿಸಿದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು. ನಂತರ ನರ್ಸಿಂಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಿತು.