ಸಾರಾಂಶ
ಮಗನ ನೆನಪಿನಲ್ಲಿ ಕಚೇರಿ ನಿರ್ಮಾಣಕ್ಕೆ ನಿವೇಶನ ದಾನ ನೀಡಿದ ತಂದೆ । 2022ರಲ್ಲಿ ಆರ್‌ಎಸ್ಎಸ್ ಕಚೇರಿ ನಿರ್ಮಾಣಕ್ಕೆ ನೆರವೇರಿದ್ದ ಶಂಕುಸ್ಥಾಪನೆ
ಕನ್ನಡಪ್ರಭ ವಾರ್ತೆ ರಾಮನಗರಜನಕಲ್ಯಾಣ ಟ್ರಸ್ಟ್ ವತಿಯಿಂದ ನಗರದ ವಿವೇಕಾನಂದನಗರದಲ್ಲಿರುವ ಸಂಘಮಿತ್ರದಲ್ಲಿ ನೂತನ ಸಂಘ ಕಾರ್ಯಾಲಯದ ಪ್ರವೇಶೋತ್ಸವ ಜ.31ರಂದು ಬೆಳಗ್ಗೆ 4.30ರಿಂದ 5.15ರೊಳಗೆ ಸಲ್ಲುವ ಬ್ರಾಹ್ಮಿ ಮೂಹೂರ್ತದಲ್ಲಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾನನೀಯ ಸಹಸರ ಕಾರ್ಯವಾಹಕ ಸಿ.ಆರ್. ಮುಕುಂದ ಅವರಿಂದ ಬೌದ್ಧಿಕ ವರ್ಗ ನಡೆಯಲಿದೆ.
ಮಗನ ನೆನಪಿನಾರ್ಥ ನಿವೇಶನ ದಾನ:ರಾಷ್ಟ್ರೀಯ ಸ್ವಯಂ ಸೇವಕನಾಗಿದ್ದ ತಮ್ಮ ಪುತ್ರನ ಅಗಲಿಕೆ ನೋವಿನ ನಡುವೆಯೂ ತಂದೆಯೊಬ್ಬರು ದಾನವಾಗಿ ನೀಡಿದ್ದ ನಾಲ್ಕು ಕೋಟಿ ಮೌಲ್ಯದ ನಿವೇಶನದಲ್ಲಿ ಜಿಲ್ಲಾ ಆರ್ ಎಸ್ ಎಸ್ ಕಚೇರಿ ನಿರ್ಮಾಣಗೊಂಡಿದೆ.
ರಾಮನಗರದ ಚಾಮುಂಡೇಶ್ವರಿ ಬಡಾವಣೆ ನಿವಾಸಿಯಾದ ವರದರಾಜು, ಎಚ್ ಡಿಎಫ್ ಸಿ ಬ್ಯಾಂಕಿನಲ್ಲಿ ನೌಕರಿ ಜೊತೆಗೆ ಸ್ವಯಂ ಸೇವಕನಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. 30ನೇ ವಯಸ್ಸಿನಲ್ಲೇ ಅವರು ಹೃದಯಘಾತದಿಂದ ಮೃತಪಟ್ಟಿದ್ದರು. ಜನಸೇವೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದ ವರದರಾಜು ತಂದೆ ರಾಮಚಂದ್ರಪ್ಪನವರು ತನ್ನ ಪುತ್ರನ ಆದರ್ಶವನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ.ಕಳೆದ 2018ರಲ್ಲಿ ಮೃತಪಟ್ಟ ವರದರಾಜನ ನೆನಪಿನಲ್ಲಿ ರಾಮಚಂದ್ರಪ್ಪನವರು, ಆರ್.ಎಸ್.ಎಸ್ ಜಿಲ್ಲಾ ಕಚೇರಿ ನಿರ್ಮಾಣ ಮಾಡಲು ಪಟ್ಟಣದ ಹೃದಯ ಭಾಗದಲ್ಲಿರುವ ಸುಮಾರು 4 ಕೋಟಿ ಮೌಲ್ಯದ 10 ಕುಂಟೆ ನಿವೇಶವನ್ನು ಕೊಡುಗೆಯಾಗಿ ನೀಡಿದ್ದರು.
ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ:2018ರಲ್ಲಿ ವರದರಾಜು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯದಲ್ಲಿ ಕೊನೆಯುಸಿರು ಎಳೆದಿದ್ದರು. ಅವರು ಪತ್ನಿ ನವ್ಯ, ತಂದೆ ರಾಮಚಂದ್ರಪ್ಪ, ತಾಯಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದರು. ಆಗ ವರದರಾಜು ಕಣ್ಣುಗಳನ್ನು ಬಿಡದಿಯ ಡಾ. ರಾಜ್ ನೇತ್ರ ಸಂಗ್ರಹ ಕೇಂದ್ರಕ್ಕೆ ದಾನ ಮಾಡುವ ಮೂಲಕ ಕುಟುಂಬ ಸದಸ್ಯರು ಆತನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು.
2022ರಲ್ಲಿ ಆರ್ ಎಸ್ ಎಸ್ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ:ಸ್ವಯಂ ಸೇವಕ ವರದರಾಜು ಸ್ಮರಣಾರ್ಥ, ಭೂಮಿಯನ್ನು ಕೊಡುಗೆಯಾಗಿ ನೀಡಿದ ರಾಮಚಂದ್ರಪ್ಪ ಹಾಗೂ ಸಂಘದ ಹಲವಾರು ಪ್ರಮುಖರೊಂದಿಗೆ ರಾಮನಗರದ ಎಂ.ಎಚ್. ಕಾಲೇಜು ಸಮೀಪ ರಾಮನಗರ ಜಿಲ್ಲಾ ಆರ್ ಎಸ್ ಎಸ್ ಜಿಲ್ಲಾ ಕಚೇರಿ ನಿರ್ಮಾಣಕ್ಕೆ 2022ರ ಮಾರ್ಚ್ ತಿಂಗಳಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.
8 ಸಾವಿರ ಚದರಡಿಯಲ್ಲಿ ನೂತನ ಕಟ್ಟಡ ನಿರ್ಮಾಣ:ಸಂಘ ಕಾರ್ಯದ ಈಗಿನ ಅವಶ್ಯಕತೆಗಳಿಗೆ ಸ್ಥಳಾವಕಾಶ ವ್ಯವಸ್ಥೆಗಳನ್ನು ಒದಗಿಸುವ ಅನಿವಾರ್ಯತೆ ಇದೆ. ಈ ಅವಶ್ಯಕತೆಯನ್ನು ಪೂರೈಸಲು ಹಿರಿಯರ ಮಾರ್ಗದರ್ಶನದಂತೆ ರಾಮನಗರ ಜಿಲ್ಲಾ ಕಾರ್ಯಾಲಯಕ್ಕೆ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ನಿಶ್ಚಯಿಸಿ, 10 ಸಾವಿರ ಚದರಡಿ ವಿಸ್ತಾರದ ಕಾರ್ಯಾಲಯದ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.