ಸಾರಾಂಶ
ಶಿರಹಟ್ಟಿ: ಇಂದಿನ ಯುವಕರು ಆರಂಭದಲ್ಲಿ ಸಂತೋಷ, ಸಂಭ್ರಮಕ್ಕಾಗಿ ಮಾದಕ ದ್ರವ್ಯ ಸೇವನೆ ಆರಂಭಿಸುತ್ತಾರೆ. ಅದು ಚಟವಾಗಿ ಬದುಕನ್ನೇ ನಾಶ ಮಾಡುವ ಮಟ್ಟಕ್ಕೆ ಬೆಳೆದು ನಿಲ್ಲುತ್ತದೆ. ಹೀಗಾಗಿ ಯುವಜನತೆ, ವಿದ್ಯಾರ್ಥಿಗಳು ಜಾಗೃತರಾಗಿರಬೇಕು ಎಂದು ಕ್ಷೇತ್ರ ಯೋಜನಾಧಿಕಾರಿ ಪುನಿತ್ ಓಲೇಕಾರ ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಶಿರಹಟ್ಟಿ ವಲಯದಿಂದ ಪಟ್ಟಣದ ಎ.ಎ.ಪಠಾಣ್ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಯಾವುದೋ ಒತ್ತಾಯಕ್ಕೋ, ಹೆಚ್ಚಿನ ಸಾಧನೆ ಮಾಡಬೇಕೆಂಬ ಒಲವಿನಿಂದ ಅಥವಾ ಅವರಲ್ಲಿನ ಒತ್ತಡ ಹಾಗೂ ಸಮಸ್ಯೆ ಮರೆಯಲು ಮಾದಕ ವಸ್ತುಗಳನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ.ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸಲಹೆ ನೀಡಿದರು.
ಮದ್ಯ ವ್ಯಸನಿಗಳಿಗೆ ಸಮಾಜ ಎಂದಿಗೂ ಗೌರವ ನೀಡುವುದಿಲ್ಲ. ಹಿಂದೆ ನೀವುಗಳು ಹೇಗಿದ್ದೀರಿ ಎಂಬುದು ಮುಖ್ಯವಲ್ಲ. ಇಂದಿನಿಂದ ನೀವು ಹೇಗೆ ಬಾಳುತ್ತೀರಿ ಎನ್ನುವುದು ಮುಖ್ಯ.ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಮಾಜ ಸೇವೆಯಿಂದ ಕಲಿಯುವುದು ಸಾಕಷ್ಟಿದೆ ಎಂದರು.ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಫಕ್ಕಿರೇಶ ರಟ್ಟಿಹಳ್ಳಿ ಮಾತನಾಡಿ, ಮಾದಕ ವಸ್ತುಗಳ ಸೇವನೆಗೆ ದಾಸರಾಗಿರುವ ಯುವಜನತೆ ತಮ್ಮ ಸಾವಿಗೆ ತಾವೇ ಆಹ್ವಾನ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಅವರ ಕುಟುಂಬದ ನೆಮ್ಮದಿ ಕಿತ್ತುಕೊಳ್ಳುತ್ತಿದ್ದಾರೆ. ಯುವಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸಹವಾಸ ದೋಷ ಹಾಗೂ ಇನ್ನಿತರೆ ಕಾರಣಗಳಿಂದ ಮಾದಕ ಸೇವನೆ ಚಟಕ್ಕೆ ಬಿದ್ದು ತಮ್ಮ ಬದುಕನ್ನು ನಾಶಮಾಡಿಕೊಳ್ಳುತ್ತಿದ್ದರೆ.ಇಂತಹ ಸಾಮಾಜಿ ಪಿಡುಗಿನ ವಿರುದ್ಧ ವಿದ್ಯಾರ್ಥಿಗಳು ಹೋರಾಟ ಮಾಡಬೇಕಿದೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಎಂ.ಎ.ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರಾಯಿ ಮನುಷ್ಯನ ಬುದ್ದಿಯನ್ನು ಶೂನ್ಯ ಮಾಡುತ್ತಿದೆ. ಅಧಿಕಾರಿ ವರ್ಗವೇ ಅಂಗಡಿ ಮಾಲೀಕರಿಗೆ ಸಾರಾಯಿ ಮಾರಾಟದ ಟಾರ್ಗೆಟ್ ನೀಡುತ್ತಿದ್ದು, ನಾಚಿಕೆಯ ಸಂಗತಿಯಾಗಿದೆ.ಜೀವನ ವಿನಾಶದತ್ತ ಕೊಂಡೊಯ್ಯುತ್ತಿದ್ದು, ವ್ಯಕ್ತಿ, ಕುಟುಂಬ,ಮನೆತನದ ಸಂಪ್ರದಾಯ, ಸಮಾಜದ ಏಳಿಗೆಗಾಗಿ ದುಶ್ಚಟಗಳ ದಾಸರಾಗದೇ ಸಾಧನೆಯತ್ತ ಸಾಗಬೇಕು ಎಂದು ಕರೆ ನೀಡಿದರು.ವ್ಯಕ್ತಿಯು ಸೃಷ್ಟಿಯ ಕೀರೀಟವಾಗಿದ್ದು, ಮೋಜಿಗಾಗಿ ಕುಡಿದು ರಾಕ್ಷಸರಾಗದೇ ಧೂಮಪಾನ ತ್ಯಜಿಸಿ ಒಳ್ಳೆಯ ಜೀವನ ಸಾಗಿಸಬೇಕು. ಹಲವಾರು ವಿಶೇಷತೆಗಳಿಂದ ಕೂಡಿದ ಈ ದೇಹ ವ್ಯಸನಗಳಿಂದ ಹಾಳುಮಾಡಿಕೊಳ್ಳದಿರಿ. ಮಾದಕ ದ್ರವ್ಯ ಸೇವನೆಯಿಂದ ಎಷ್ಟೋ ಕುಟುಂಬಗಳು ಬೀದಿಪಾಲಾಗಿರುವುದನ್ನು ಕಣ್ಣಾರೆ ಕಾಣುತ್ತಿದ್ದು, ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಡಾ.ಮಾಲಾ ಮಾತನಾಡಿ, ಹೆಚ್ಚಾಗಿ ಇಂದಿನ ಯುವಕರೇ ದಿನದಿಂದ ದಿನಕ್ಕೆ ದುಶ್ಚಟಕ್ಕೆ ಬಲಿಯಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಮಾಡಲಾರದಂತಹ ಸಾಧನೆ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾಡುತ್ತಿದ್ದಾರೆ. ರಾಜ್ಯದಲ್ಲಿನ ಸಾವಿರಾರು ಕುಟುಂಬಗಳು ಕೌಟುಂಬಿಕ ಸಾಮರಸ್ಯದಿಂದ ಸುಸ್ಥಿತಿ ಸಮಾಜದತ್ತ ಬಂದಿರುವುದನ್ನು ನೋಡುತ್ತಿದ್ದು, ಬಡಕುಟುಂಬಕ್ಕೆ ಸಾಕಷ್ಟು ಸಹಾಯ, ಸಹಕಾರ ನೀಡುತ್ತಿರುವುದ ಶ್ಲಾಘನೀಯ ಎಂದರು.