ಸಾರಾಂಶ
ಉಡುಪಿ ರಾಜಾಂಗಣದಲ್ಲಿ ಭಾರತೀಯ ಜ್ಞಾನ ಪರಂಪರಾ ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಉಡುಪಿಭಾರತೀಯ ಜ್ಞಾನ ಪರಂಪರೆ ವಿಶ್ವದಲ್ಲಿಯೇ ಅತ್ಯಂತ ಪರಿಪೂರ್ಣವಾದುದು, ಬೇರೆ ಯಾವುದೇ ವಿದೇಶಿ ಪರಂಪರೆಯೂ ಇಷ್ಟು ಸಮೃದ್ಧ ಮತ್ತು ಪುರಾತನವಾಗಿಲ್ಲ. ಆದರೆ ಹಿತ್ತಲಗಿಡ ಮದ್ದಲ್ಲ ಎಂಬಂತೆ ಭಾರತೀಯರೇ ಅದನ್ನು ನಿರ್ಲಕ್ಷಿಸಿದ್ದೇವೆ, ನಮ್ಮ ಹಿತ್ತಿಲಿನಲ್ಲಿಯೇ ಅಮೃತಮಯ ಜ್ಞಾನ ಇದೆ ಎಂಬುದನ್ನು ನಾವು ಗುರುತಿಸಬೇಕಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.ಶುಕ್ರವಾರ ಕೃಷ್ಣಮಠದ ರಾಜಾಂಗಣದಲ್ಲಿ ನಿಟ್ಟೆ ವಿವಿ ಮತ್ತು ಕರ್ನಾಟಕ ಸಂಸ್ಕೃತ ವಿವಿಗಳ ಸಹಯೋಗದಲ್ಲಿ ನಡೆದ ಭಾರತೀಯ ಜ್ಞಾನ ಪರಂಪರಾ - ಅಂತರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಹನುಮಂತನಿಗೆ ಉಳಿದವರು ಹೇಳುವವರೆಗೆ ತನ್ನ ಅಗಾಧ ಶಕ್ತಿಯ ಪರಿಚಯ ಇರಲಿಲ್ಲ, ಭಾರತದ ಪರಿಸ್ಥಿತಿ ಕೂಡ ಹನುಮಂತನದ್ದೇ ಆಗಿದೆ. ಭಾರತದ ಜ್ಞಾನ ಪರಂಪರೆಯನ್ನು ವಿದೇಶಿಯರು ಹೇಳಿಕೊಡುವ ಪರಿಸ್ಥಿತಿ ಬಂದಿದೆ ಎಂದ ಶ್ರೀಗಳು, ಸಾವಿರಾರು ವರ್ಷಗಳ ಹಿಂದಿನಿಂದಲೂ ನಮ್ಮಲ್ಲಿ ಜ್ಯೋತಿಷ್ಯ, ಖಗೋಳ, ಜೀವವಿಜ್ಞಾನ, ಅಣುವಿಜ್ಞಾನಗಳ ಜ್ಞಾನ ಇತ್ತು, ಆದರೇ ಅದನ್ನೆಲ್ಲಾ ಇಂದು ನಾವು ಪಾಶ್ಚಾತ್ಯ ಜ್ಞಾನ ಎಂದು ಕಲಿಯುತಿದ್ದೇವೆ ಎಂದವರು ವಿಷಾದಿಸಿದರು.ನಾವು ನಾವೇ ಉದ್ಧಾರ ಮಾಡಿಕೊಳ್ಳಬೇಕು ಎಂದು ಗೀತೆಯಲ್ಲಿ ಕೃಷ್ಣನೇ ಹೇಳಿದ್ದಾರೆ. ಅದನ್ನೇ ಪ್ರಧಾನಿ ಮೋದಿ ಅವರು ಆತ್ಮನಿರ್ಭರ ಭಾರತದ ರೂಪದಲ್ಲಿ ಜಾರಿಗೆ ತರುತಿದ್ದಾರೆ, ಅದರ ಪರಿಣಾಮವಾಗಿಯೇ ನಮ್ಮ ವಿಜ್ಞಾನಿಗಳು ಬ್ರಹ್ಮೋಸ್ ಕ್ಷಿಪಣಿ ನಿರ್ಮಿಸಿದ್ದಾರೆ. ನಮ್ಮ ಜ್ಞಾನ ಪರಂಪರೆ ಸರಿಯಾಗಿ ಬಳಸಿಕೊಂಡರೇ ಜೀವನದಲ್ಲಿ ಆತ್ಮನಿರ್ಭರತೆ ಸುಲಭಸಾಧ್ಯವಾಗಲಿದೆ ಎಂದು ಶ್ರೀಗಳು ಹೇಳಿದರು.
ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು. ನಿಟ್ಟೆ ವಿವಿ ಪ್ರಕಟಿಸಿರುವ 50 ಸಂಶೋಧನಾ ಪ್ರಬಂಧಗಳ ಸಂಗ್ರಹ ‘ಜ್ಞಾನ ಭಾರತಂ’ ಬಿಡುಗಡೆ ಮಾಡಲಾಯಿತು.ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿವಿ ಉಪಕುಲಾಧಿಪತಿ ಡಾ. ಎಂ. ಎಸ್. ಮೂಡಿತ್ತಾಯ ವಹಿಸಿದ್ದರು, ಸಮ್ಮೇಳನಾಧ್ಯಕ್ಷ ಅಮೇರಿಕದ ವಿಜ್ಞಾನಿ ಕೇಶವರಾವ್ ತಾಡಿಪತ್ರಿ, ದಿಕ್ಸೂಚಿ ಭಾಷಣಕಾರರಾಗಿ ತತ್ವಜ್ಞಾನ ಚಿಂತಕ ಪ್ರೊ. ಪಾದೂರು ಶ್ರೀಪತಿ ತಂತ್ರಿ, ಇಸ್ರೋ ವಿಜ್ಞಾನಿ ಪದ್ಮಶ್ರೀ ಪ್ರಹ್ಲಾದ ರಾಮ ರಾವ್, ಅಮೆರಿಕಾದ ಡಾ. ಸುದರ್ಶನ್ ಮೂರ್ತಿ ಮತ್ತು ಡಾ. ಲಕ್ಷ್ಮೀ ಮೂರ್ತಿ ದಂಪತಿ, ಆಯುರ್ವೇದ ತಜ್ಞ ಡಾ. ತನ್ಮಯ ಗೋಸ್ವಾಮೀ, ಬಹುಭಾಷಾ ಕಿಲಿಮಣೆ ತಜ್ಞ ಡಾ.ಗುರಪ್ರಸಾದ್, ವಿದ್ವಾನ್ ಗೋಪಿನಾಥ್ ಆಚಾರ್ ಗಲಗಲಿ ವೇದಿಕೆಯಲ್ಲಿದ್ದರು.................................ಜಗತ್ತೇ ಭಾರತೀಯ ಜ್ಞಾನ ಪರಂಪರೆಯತ್ತ ನೋಡುತ್ತಿದೆ: ಮೂಡಿತ್ತಾಯಅಧ್ಯಕ್ಷತೆ ವಹಿಸಿದ್ದ ಡಾ. ಎಂ. ಎಸ್.ಮೂಡಿತ್ತಾಯ ಅವರು, ಇಂದಿನ ಜಾಗತಿಕ ಸಮಸ್ಯೆಗಳಾದ ಭೌಗೋಳಿಕ ರಾಜಕೀಯ, ಪರಿಸರದ ಬಿಕ್ಕಟ್ಟು, ನೀತಿ ದ್ರುವೀಕರಣ, ತಂತ್ರಜ್ಞಾನದ ದುರ್ಬಳಕೆ, ಸಂಸ್ಕೃತಿಗಳ ಸಂಘರ್ಷ, ಹವಾಮಾನ ಬದಲಾವಣೆ ಇತ್ಯಾದಿ ಸಮಸ್ಯೆಗಳಿಂದ ಹತಾಶೆಗೊಳಗಾಗಿರುವ ಜಗತ್ತೇ ಪರಿಹಾರಕ್ಕಾಗಿ ಭಾರತೀಯ ಜ್ಞಾನ ಪರಂಪರೆಯತ್ತ ನೋಡುತ್ತಿದೆ ಎಂದರು.ನಿಟ್ಟೆ ವಿವಿಯಿಂದ ಭಾರತೀಯ ಜ್ಞಾನ ಪರಂಪರೆ ಮತ್ತು ಭಗವದ್ಗೀತೆಗಳ ಬಗ್ಗೆ ಕೋರ್ಸ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಿಸಿದರು.