ಜಾತಿ ಸಮೀಕ್ಷೆಯಲ್ಲಿ ಕ್ರೈಸ್ತಪದ ಸೇರಿಕೆ; ಮತಾಂತರ ಹುನ್ನಾರ ಖಂಡಿಸಿ ಪ್ರತಿಭಟನೆ

| Published : Sep 16 2025, 12:03 AM IST

ಜಾತಿ ಸಮೀಕ್ಷೆಯಲ್ಲಿ ಕ್ರೈಸ್ತಪದ ಸೇರಿಕೆ; ಮತಾಂತರ ಹುನ್ನಾರ ಖಂಡಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಮುಂದೆ ಕ್ರೈಸ್ತ ಎಂಬ ಪದ ಸೇರಿಸುವ ಮೂಲಕ ಕಾಂಗ್ರೆಸ್ ಪಕ್ಷ ಮತಾಂತರದ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಬಳ್ಳಾರಿ

ಜಾತಿ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಮುಂದೆ ಕ್ರೈಸ್ತ ಎಂಬ ಪದ ಸೇರಿಸುವ ಮೂಲಕ ಕಾಂಗ್ರೆಸ್ ಪಕ್ಷ

ಮತಾಂತರದ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಮ್ಮರಚೇಡು ಮಠದ ಶ್ರೀ ಕಲ್ಯಾಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಳ ಪಟ್ಟಿಯಲ್ಲಿ ಹಲವು ಜಾತಿಗಳ ಎದುರು ಕ್ರೈಸ್ತ ಎಂದು ಸೇರಿಸಿದೆ. ಇದು ಮತಾಂತರದ ಹುನ್ನಾರವೇ ಹೊರತು ಬೇರೇನೂ ಅಲ್ಲ ಎಂದು ಆಪಾದಿಸಿದರು.

ರಾಜ್ಯದಲ್ಲಿ ಬಲವಂತವಾಗಿ ಮತಾಂತರ ಕಾರ್ಯ ನಡೆಯುತ್ತಿವೆ. ಸಮೀಕ್ಷೆಯಿಂದ ಸಮಾಜವನ್ನು ಹೊಡೆಯುವ ಹುನ್ನಾರಗಳ ನಡೆಯುತ್ತಿದೆ. ಅಧಿಕಾರಯುತ ಯಾವುದೇ ಪಕ್ಷ ಜನಮುಖಿಯಾಗಿ ಕಾರ್ಯನಿರ್ವಹಿಸಬೇಕೇ ವಿನಾ, ಜನವಿರೋಧಿಯಾಗಿ ವರ್ತಿಸಬಾರದು. ಕಾಂಗ್ರೆಸ್ ಸರ್ಕಾರದ ನಡೆ ಅತ್ಯಂತ ಬೇಸರಕ್ಕೆ ಕಾರಣವಾಗಿದೆ. ಹಿಂದೂ ಸಮಾಜ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು.

ಸರ್ಕಾರದ ಕ್ರಮ ಖಂಡಿಸಿದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಬರೀ ಮತಾಂತರದಂತಹ ಕೃತ್ಯಗಳಿಗೆ ಕಾಂಗ್ರೆಸ್ ಸರ್ಕಾರ ಸಹಕಾರ ಮಾಡುತ್ತಾ ಬಂದಿದೆ ಎಂದು ಆಪಾದಿಸಿದರು. ಬಿಜೆಪಿ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಭಟನಾ ಮೆರವಣಿಗೆಯು ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ, ಮಾಜಿ ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಕೆ.ಎ. ರಾಮಲಿಂಗಪ್ಪ, ಎಚ್. ಹನುಮಂತಪ್ಪ, ಸಾಧನಾ ಹಿರೇಮಠ, ಕೆ.ಆರ್. ವಿಜಯಲಕ್ಷ್ಮಿ, ಗಣಪಾಲ್ ಐನಾಥರೆಡ್ಡಿ, ಸಿದ್ದಾರೆಡ್ಡಿ ಸೇರಿ ಬ್ರಾಹ್ಮಣ, ವೀರಶೈವ ಲಿಂಗಾಯತ, ವಿಶ್ವಕರ್ಮ, ವೈಶ್ಯ ಮತ್ತಿತರ ಸಮುದಾಯದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.