ಸಾರಾಂಶ
ಕೊರಮ, ಕೊರಚ, ಬೋವಿ ಲಂಬಾಣಿ ಸಮುದಾಯಗಳಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಬಳ್ಳಾರಿಒಳಮೀಸಲಾತಿಯಲ್ಲಿ ಬೋವಿ, ಕೊರಚ, ಕೊರಮ ಹಾಗೂ ಲಂಬಾಣಿ ಸಮುದಾಯಗಳಿಗೆ ತೀವ್ರ ಅನ್ಯಾಯವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಸರಿಪಡಿಸಬೇಕು. ತಳ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅರಿತು ಒಳಮೀಸಲು ನೀಡುವ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಶೋಷಿತ ಸಮುದಾಯಗಳ ವಿರೋಧಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ತಿಸುತ್ತಿದ್ದು, ನಿರ್ದಿಷ್ಟ ಸಮುದಾಯಗಳ ಓಲೈಕೆಗೆ ಎಲ್ಲ ಸ್ತರಗಳಲ್ಲೂ ಅತ್ಯಂತ ಹಿಂದುಳಿದ ಸಮುದಾಯಗಳಾದ ಕೊರಚ, ಕೊರಮ, ಭೋವಿ ಹಾಗೂ ಲಂಬಾಣಿ ಸಮುದಾಯಗಳಿಗೆ ಅನ್ಯಾಯ ಎಸಗಿದ್ದಾರೆ. ಒಳಮೀಸಲಾತಿಯಲ್ಲಿ ಸಾಮಾಜಿಕ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆಯನ್ನು ಸಹ ಮುಖ್ಯಮಂತ್ರಿ ಹುಸಿಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಒಕ್ಕೂಟದ ಜಿಲ್ಲಾ ಪ್ರಮುಖರಾದ ಮಹೇಶ್ ಬಂಡಿಹಟ್ಟಿ, ಡಾ. ಹನುಮಂತಪ್ಪ ಹಾಗೂ ವಿ. ರಾಮಾಂಜಿನೇಯಲು ಮಾತನಾಡಿ, ರಾಜ್ಯ ಸರ್ಕಾರದ ಅವೈಜ್ಞಾನಿಕ ಧೋರಣೆಯನ್ನು ಖಂಡಿಸಿದರಲ್ಲದೆ, ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ಕೊರಚ, ಕೊರಮ, ಭೋವಿ ಹಾಗೂ ಲಂಬಾಣಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ತರಾತುರಿಯಲ್ಲಿ ಏಕಪಕ್ಷೀಯವಾಗಿ, ದೋಷಪೂರಿತ ದತ್ತಾಂಶವನ್ನು ಪರಿಗಣಿಸಿ ಒಳಮೀಸಲಾತಿ ಜಾರಿಗೊಳಿಸುವ ತಳ ಸಮುದಾಯಗಳಿಗೆ ದ್ರೋಹ ಎಸಗಿದೆ. ಬೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳಿಗೆ ಹಿಂದಿನ ರಾಜ್ಯ ಸರ್ಕಾರ ಶೇ. 4.50 ಒಳಮೀಸಲಾತಿ ನಿಗದಿ ಪಡಿಸಿದಾಗ, ಎಲ್ಲರೂ ಆ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರಂಪಾಟ ಮಾಡಿ ಚುನಾವಣೆಯಲ್ಲಿ ಸೋಲುಣಿಸಿದರು. ನಂತರದಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈ ಹಿಂದಿನ ಸರ್ಕಾರದ ತಪ್ಪು ನಡೆಯನ್ನು ಸರಿಪಡಿಸಿ ಒಳಮೀಸಲಾತಿಯಲ್ಲಿ ನ್ಯಾಯ ನೀಡಲಿದೆ ಎಂದು ಅಪಾರವಾಗಿ ನಂಬಿದ್ದೆವು. ಆದರೆ, ನಮ್ಮ ನಿರೀಕ್ಷೆಯನ್ನು ಹುಸಿಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರಿಯಾದ ಮಾನದಂಡನ್ನು ಅನುಸರಿಸದೆ ನಮ್ಮ ಸಮುದಾಯಗಳಿಗೆ ಬಹುದೊಡ್ಡ ಅನ್ಯಾಯ ಎಸಗಿದರು. ಮಾಧುಸ್ವಾಮಿ ವರದಿ ಮೀಸಲಾತಿಯ ವರ್ಗೀಕರಣಕ್ಕೆ ಜನಸಂಖ್ಯೆಯೇ ಆಧಾರ ಎಂದು ಹೇಳಿತು. ಹಾಗಾಗಿ ಬೋವಿ, ಬಂಜಾರ, ಕೊರಚ, ಕೊರಮ ಗುಂಪಿನ ಮೀಸಲಾತಿ ಸದಾಶಿವ ಆಯೋಗದ ವರದಿಯನ್ವಯ ಶೇ. 3 ರಿಂದ 4.5ಕ್ಕೆ ಏರಿಕೆಯಾಯಿತು. ನ್ಯಾ. ನಾಗಮೋಹನ ದಾಸ ವರದಿಯಲ್ಲಿ ಬೋವಿ ಮತ್ತು ಬಂಜಾರ ಸಮುದಾಯದ ಏರಿಕೆ ಅತ್ಯಂತ ಕಡಿಮೆ ಎಂದು ತೋರಿಸಲಾಗಿದೆ. 28 ಲಕ್ಷ ಜನಸಂಖ್ಯೆ ಇರುವ ಬೋವಿ, ಬಂಜಾರ, ಕೊರಚ, ಕೊರಮ ಗುಂಪಿಗೆ ಶೇ. 4ರ ಮೀಸಲಾತಿಯನ್ನು ನ್ಯಾ ನಾಗಮೋಹನ ದಾಸ್ ನಿಗದಿ ಪಡಿಸಿದ್ದರು. ನಮಗಿಂತ 16 ಮಾನದಂಡಗಳಲ್ಲಿ ಸಾಮಾಜಿಕ, ಶೈಕ್ಶಣಿಕವಾಗಿ ಮುಂದೆ ಇರುವ ಇತರ ಉಪಜಾತಿಗಳ ಗುಂಪಿಗೆ ಎರಡು ಜಾತಿ ಸೇರಿಸಿ ಶೇ. 5ರಿಂದ ಶೇ 6ಕ್ಕೆ ಹೆಚ್ಚಿಸಿರುವುದು ಪಕ್ಷಪಾತದ ನಿರ್ಣಯವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾಡಿರುವ ದ್ರೋಹಕ್ಕೆ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ. ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರಲ್ಲದೆ, ನಾಗಮೋಹನ್‌ದಾಸ್ ವರದಿಯನ್ನು ತೆಗೆದುಹಾಕಿ, ಜಾತಿವಾರು ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಕೈಗೊಳ್ಳಬೇಕು. ಜಾತಿವಾರು ನಿರ್ದಿಷ್ಟ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ (ಕೊರಚ, ಕೊರಮ, ಬೋವಿ, ಲಂಬಾಣಿ) ಸಮದಾಯಕ್ಕೆ ಶೇ.7ರಷ್ಟು ಮೀಸಲಾತಿ ನೀಡಬೇಕು. ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿರುವ ಎಲ್ಲ ಉದ್ಯೋಗ ಮತ್ತು ಬಡ್ತಿಗಳನ್ನು ತೆಡೆಯಬೇಕು ಎಂದು ಆಗ್ರಹಿಸಿದರು.ಇಲ್ಲಿನ ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ ನಗರೂರು ನಾರಾಯಣರಾವ್ ಪಾರ್ಕ್‌ನಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಸಮಾವೇಶಗೊಂಡರು. ಇದೇ ವೇಳೆ ಪಕ್ಷದ ಮುಖಂಡರು ರಾಜ್ಯ ಸರ್ಕಾರದ ಧೋರಣೆ ಖಂಡಿಸಿದರು. ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಒಕ್ಕೂಟದ ಜಿಲ್ಲಾ ಮುಖಂಡರಾದ ರಮಣಪ್ಪ ಭಜಂತ್ರಿ, ಟಿ.ವಿ. ವೆಂಕಟೇಶ್, ವಿ.ತಮ್ಮಣ್ಣ, ಗುಡದೂರು ಹನುಮಂತಪ್ಪ, ರಾಮು ನಾಯ್ಕ, ಗೋಪಿನಾಯ್ಕ, ಶಂಕರ ಬಂಡೆ ವೆಂಕಟೇಶ್, ಎಚ್.ಕೆ.ಎಚ್. ಹನುಮಂತಪ್ಪ, ಕೆ.ರಂಗಸ್ವಾಮಿ, ವಿ.ರಾಮಾಂಜಿನೇಯ ಮತ್ತಿತರರು ಭಾಗವಹಿಸಿದ್ದರು.