ಸಾರಾಂಶ
ಅಂತರಾಷ್ಟ್ರೀಯ ಸಂವಿಧಾನ ದಿನಾಚರಣೆ
ಕನ್ನಡಪ್ರಭ ವಾರ್ತೆ ಬಳ್ಳಾರಿಯಾವುದೇ ಒಂದು ದೇಶದ ಅಭಿವೃದ್ಧಿಯು ಅಲ್ಲಿನ ಆಡಳಿತ ವ್ಯವಸ್ಥೆ ಮೇಲೆ ಅವಲಂಬಿತವಾಗಿರುತ್ತದೆ. ಅಂತಹ ಉತ್ತಮ ಆಡಳಿತ ವ್ಯವಸ್ಥೆಯನ್ನು ನಮ್ಮ ದೇಶದಲ್ಲಿ ಕಾಣಬಹುದಾಗಿದೆ. ಅದರಿಂದಲೇ ಭಾರತ ಅಭಿವೃದ್ಧಿಯತ್ತ ಮುನ್ನುಗುತ್ತಿದೆ. ಈ ಕಾರಣಕ್ಕಾಗಿಯೇ ವಿಶ್ವವೇ ಭಾರತದತ್ತ ನೋಡುವಂತಾಗಿದೆ ಎಂದು ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್ ತಿಳಿಸಿದರು.
ಜಿಲ್ಲಾಡಳಿತ, ಜಿಪಂ ಮತ್ತು ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನನ್ನ ಮತ-ನಮ್ಮ ಹಕ್ಕು ಎಂಬ ಧ್ಯೇಯವಾಕ್ಯದೊಂದಿಗೆ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗನ್‌ಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ವಿಶ್ವದಲ್ಲಿಯೇ ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ. ಜನಪ್ರತಿನಿಧಿಗಳಿಂದಲೇ ಕಾನೂನು ರೂಪಿಸಲಾಗುತ್ತದೆ. ಜನರಿಗಾಗಿಯೇ ಅನುಷ್ಠಾನಗೊಳಿಸಲಾಗುತ್ತದೆ.
ಭಾರತ ಸಂವಿಧಾನವನ್ನು ನಾವೆಲ್ಲರೂ ಎಷ್ಟು ಗೌರವಿಸುತ್ತೇವೆಯೋ, ಅಷ್ಟೇ ಮುಂಬರುವ ದಿನಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ಕಾಣುತ್ತೇವೆ. ಆದರೆ, ತಿರಸ್ಕಾರ ಮನೋಭಾವ ಕಂಡಾಗ ರಾಷ್ಟ್ರದ ಅವನತಿಯ ಹಾದಿಯೂ ಸಹ ಅಷ್ಟೇ ಸಮೀಪಿಸುತ್ತದೆ ಎಂದು ಎಚ್ಚರಿಸಿದರು.ಸ್ವಾತಂತ್ರ್ಯ ನಂತರದ ದೇಶದ ಅಭಿವೃದ್ಧಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್ ಭಾರತಕ್ಕೆ ಅತ್ಯುತ್ತಮ ಆಡಳಿತ ವ್ಯವಸ್ಥೆ ನೀಡಬೇಕೆಂದು ಗಣರಾಜ್ಯ ಹಾಗೂ ಪ್ರಜಾಪ್ರಭುತ್ವ ಕಲ್ಪನೆಯನ್ನು ರೂಪಿಸಿ ಅದನ್ನು ಸಂವಿಧಾನದಲ್ಲಿ ಅಳವಡಿಸಿದರು. ಅದೇ ರೀತಿಯಾದ ಆಡಳಿತ ರೂಪಿಸಿ, ಆ ವ್ಯವಸ್ಥೆ ಅಂಗೀಕರಿಸಿದರು.
ಈಗಿನ ಪೀಳಿಗೆಯು ಪ್ರಸ್ತುತ ದಿನಮಾನಗಳಲ್ಲಿ ನಡೆಯುವ ಆಗು-ಹೋಗುಗಳನ್ನು ಗಮನಿಸಬೇಕಿದೆ. ರಾಷ್ಟ್ರದ ವ್ಯವಸ್ಥೆ, ಕಾನೂನುಗಳ ಪರಿಪೂರ್ಣತೆ, ಕಾನೂನು ಅನುಷ್ಟಾನವಾಗದಿದ್ದರೆ ಆಗುವ ಘಟನೆಗಳತ್ತ ಚಿತ್ತ ಹರಿಸಬೇಕಾಗಿದೆ. ವಿದ್ಯಾರ್ಥಿಗಳು ಆಳವಾದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ದೇಶ ಹಾಗೂ ಜಾಗತಿಕ ಮಟ್ಟದಲ್ಲಾಗುವ ಬೆಳವಣಿಗೆಯತ್ತ ನಿಗಾ ಇರಿಸಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಇಂದಿನ ಯುವ-ಪೀಳಿಗೆಯೇ ಪ್ರಜಾಪ್ರಭುತ್ವ ಭವಿಷ್ಯವಾಗಿದೆ. ಈಗಿನ ಯುವ ಮನಸ್ಕರು ಸಂವಿಧಾನ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಅರಿವು ಹೊಂದಬೇಕಿದೆ. ಉದಾತ್ತ ಗುರಿ ಹೊಂದುವುದರ ಮೂಲಕ ದೇಶಕ್ಕೆ ಅಭಿವೃದ್ಧಿಯ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಂಪ್ಲಿಯ ಉಪನ್ಯಾಸಕ ರಮೇಶ್ ಛಲವಾದಿ ಪ್ರಜಾಪ್ರಭುತ್ವದ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ಇಂದಿನಿಂದ ಅಕ್ಟೋಬರ್ ಅಂತ್ಯದವರೆಗೆ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಭಾಷಣ, ಚರ್ಚಾಸ್ಪರ್ಧೆ, ಚಿತ್ರಕಲೆ ಮತ್ತು ಫೋಟೋಗ್ರಫಿ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಡಿಡಿಪಿಯು ನಾಗಲಿಂಗಯ್ಯ ಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಆಸೀಫ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಾಲಾ-ಕಾಲೇಜು ಮಕ್ಕಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.ಆಕರ್ಷಕ ಸೈಕಲ್ ರ‍್ಯಾಲಿ:
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಗರದಲ್ಲಿ ಸೋಮವಾರ ನೂತನ ಜಿಲ್ಲಾಡಳಿತ ಭವನದಿಂದ ಆಕರ್ಷಕ ಸೈಕಲ್ ರ‍್ಯಾಲಿ ನಡೆಯಿತು. ‘ನನ್ನ ಮತ-ನಮ್ಮ ಹಕ್ಕು’ ಎಂಬ ಘೋಷಣೆ ಕೂಗಲಾಯಿತು. ಚಿಗುರು ಕಲಾತಂಡದ ಹುಲುಗಪ್ಪ ಸಂಗಡಿಗರಿಂದ ಮತದಾನ ಜಾಗೃತಿ ಗೀತೆ ಪ್ರಸ್ತುತಪಡಿಸಿದರು.ಬಳಿಕ ಸೈಕಲ್ ರ‍್ಯಾಲಿಗೆ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಸೈಕಲ್ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು. ರ‍್ಯಾಲಿಯು ನೂತನ ಜಿಲ್ಲಾಡಳಿತ ಭವನದಿಂದ ಆರಂಭಗೊಂಡು ಗಡಗಿ ಚೆನ್ನಪ್ಪ ವೃತ್ತ- ಕನಕ ದುರ್ಗಮ್ಮ ದೇವಸ್ಥಾನ ವೃತ್ತ- ಎಸ್ಪಿ ವೃತ್ತ- ಎಚ್.ಆರ್. ಗವಿಯಪ್ಪ ವೃತ್ತದ ಮಾರ್ಗವಾಗಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆ ಕಾರ್ಯಕ್ರಮದವರೆಗೆ ಸಾಗಿಬಂತು.