ಸಾರಾಂಶ
ಲಿಂಗರಾಜು ಕೋರಾಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಕುಸಿಯುತ್ತಿರುವ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿಸಲು 2026-27ನೇ ಶೈಕ್ಷಣಿಕ ಸಾಲಿಗೆ ಸರ್ಕಾರ ನಿರ್ದಿಷ್ಟ ಗುರಿ ನಿಗದಿ ಮಾಡಿದೆ. ಅಲ್ಲದೆ, ಈ ಗುರಿ ಮೀರಿ ಸಾಧನೆ ಮಾಡುವ ತಲಾ ಐವರು ಡಿಡಿಪಿಐ, ಬಿಇಒ, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ‘ವಿದೇಶಿ ಅಧ್ಯಯನ ಪ್ರವಾಸ’ದ ಆಫರ್ ನೀಡಿದೆ.ಜತೆಗೆ, ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಮನೋಭಾವವನ್ನು ಜನರಿಂದ ಹೋಗಲಾಡಿಸಲು ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಶಾಲೆಗಳ ಬಗ್ಗೆ ಜಾಗೃತಿಗೆ ರಾಯಭಾರಿಗಳನ್ನು ಆಯ್ಕೆ ಮಾಡಿಕೊಳ್ಳಲೂ ಇಲಾಖೆ ಸೂಚಿಸಿದೆ.ಹೌದು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕಳೆದ ಹದಿನೈದು ವರ್ಷಗಳಲ್ಲಿ ಶೇ.30ರಷ್ಟು ದಾಖಲಾತಿ ಕುಸಿದಿದೆ. 2010-11ನೇ ಸಾಲಿನ ವೇಳೆ 1ರಿಂದ 10ನೇ ತರಗತಿ ವರೆಗೆ ಸುಮಾರು 55 ಲಕ್ಷದಷ್ಟಿರುತ್ತಿದ್ದ ಮಕ್ಕಳ ದಾಖಲಾತಿ ಸಂಖ್ಯೆ ಈಗ 38 ಲಕ್ಷಕ್ಕೆ ಇಳಿದಿದೆ. ಹಾಗಾಗಿ ದಾಖಲಾತಿ ಕುಸಿತವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಮುಂದಿನ ವರ್ಷ ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಮತ್ತು ಪಿಎಂಶ್ರೀ ಶಾಲೆಗಳಲ್ಲಿ ಶೇ.25ರಷ್ಟು, ಉಳಿದ ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ ಕನಿಷ್ಠ ಶೇ.15ರಷ್ಟು ದಾಖಲಾತಿ ಪ್ರಮಾಣ ಹೆಚ್ಚಿಸಲು ಗುರಿ ನಿಗದಿ ಮಾಡಿದೆ. ಈ ಗುರಿ ಸಾಧನೆಗೆ ನವೆಂಬರ್‌ನಿಂದಲೇ ಮಕ್ಕಳ ದಾಖಲಾತಿ ಜಾಗೃತಿ ಅಭಿಯಾನ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಂಡು 2026ರ ಜೂನ್ ವರೆಗೂ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ.
ಅಲ್ಲದೆ, ದಾಖಲಾತಿ ಹೆಚ್ಚಿಸಲು ಅಧಿಕಾರಿಗಳು ಮತ್ತು ಶಿಕ್ಷಕರನ್ನು ಪ್ರೇರೇಪಿಸಲು ಪ್ರೋತ್ಸಾಹ ಕಾರ್ಯಕ್ರಮವನ್ನೂ ಇಲಾಖೆ ಪ್ರಕಟಿಸಿದೆ. ಅಭಿಯಾನದಡಿ ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಆಯಾ ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮಗಳನ್ನು ರೂಪಿಸಬೇಕು. ಶಾಲಾ, ಕಾಲೇಜುಗಳ ಹಂತದಲ್ಲಿ ಆಯಾ ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರು ತಮ್ಮ ಶಾಲೆ, ಕಾಲೇಜಿಗೆ ಹೆಚ್ಚಿನ ಮಕ್ಕಳನ್ನು ದಾಖಲಿಸಿಕೊಳ್ಳಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು.ಈ ಪೈಕಿ ಇಲಾಖೆ ನಿಗದಿಪಡಿಸಿರುವ ಗುರಿಗಿಂತ ಹೆಚ್ಚು ದಾಖಲಾತಿ ಮಾಡುವ ತಲಾ ಐವರು ಡಿಡಿಪಿಐಗಳು, ಬಿಇಒಗಳು, ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ‘ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮ ಶೈಕ್ಷಣಿಕ ಆಚರಣೆಗಳ ಕುರಿತ ಅಧ್ಯಯನ’ಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
-ಬಾಕ್ಸ್-ದಾಖಲಾತಿ ಹೆಚ್ಚಿಸಲು ಏನೇನು ಮಾಡಬೇಕು?
ಡಿಡಿಪಿಐ, ಬಿಇಒಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಜಿಲ್ಲೆ, ತಾಲೂಕು ಮತ್ತು ಕ್ಲಸ್ಟರ್ ಹಂತದ ಅಧಿಕಾರಿ/ಸಿಬ್ಬಂದಿಗೆ ಸಭೆ ಮೂಲಕ ಸೂಕ್ತ ಮಾರ್ಗದರ್ಶನ ನೀಡಬೇಕು. ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಶಾಲೆ, ಕಾಲೇಜುಗಳ ಮುಖ್ಯಸ್ಥರು ಅಭಿಯಾನದಡಿ ವಿಶೇಷ ಕಾರ್ಯಕ್ರ/ಸಭೆ/ಚಟುವಟಿಕೆ/ಜಾಥಾಗಳನ್ನು ಹಮ್ಮಿಕೊಳ್ಳಲು ನಿರ್ದೇಶನ ನೀಡಬೇಕು. ಇವುಗಳನ್ನು ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿರುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ-ಸಾಕ್ಸ್ ವಿತರಣೆ, ಮಕ್ಕಳ ಅಪೌಷ್ಟಿಕತೆ ನೀಗಿಸಲು ಬೆಳಗ್ಗೆ ಕ್ಷೀರಭಾಗ್ಯ, ಮಧ್ಯಾಹ್ನ ಬಿಸಿಯೂಟ, ವಿದ್ಯಾರ್ಥಿ ವೇತನದಂಥ ಸೌಲಭ್ಯಗಳು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈಗ ಸಿಬಿಎಸ್‌ಇ, ಐಸಿಎಸ್‌ಇ ಮಾದರಿಯಲ್ಲೇ ಪರೀಕ್ಷಾ ಪದ್ದತಿ ಸುಧಾರಣೆ ಮಾಡಿರುವ ಬಗ್ಗೆ, ಕೇಂದ್ರೀಯ ಪಠ್ಯಕ್ರಮ ಮಾದರಿ ಶಾಲೆಗಳಲ್ಲಿರುವಂತೆ ಗಣಿತ, ವಿಜ್ಞಾನ ವಿಷಯಗಳಿಗೆ ಎನ್‌ಸಿಇಆರ್‌ಟಿ ಪುಸ್ತಕಗಳನ್ನೇ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲೂ ಬೋಧಿಸುತ್ತಿರುವ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಬೇಕು. ಶಿಕ್ಷಣದ ಮಹತ್ವ ಸೇರಿ ಈ ಎಲ್ಲಾ ಅಂಶಗಳ ಮಾಹಿತಿಗಳ ಬಗ್ಗೆ ಸಾಕ್ಷ್ಯ ಚಿತ್ರ, ಧ್ವನಿ, ಮುದ್ರಿಕೆಗಳು, ಪೋಸ್ಟರ್, ಮಾದರಿಗಳನ್ನು ಬಳಸಿ ಜಾಗೃತಿ ಮೂಡಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗಳತ್ತ ಬರುವಂತೆ ಕ್ರಮ ವಹಿಸಬೇಕು.;Resize=(128,128))
;Resize=(128,128))
;Resize=(128,128))
;Resize=(128,128))