ಸರ್ಕಾರಿ ಶಾಲೆ-ಕಾಲೇಜಲ್ಲಿನ್ನು ಎಐ ಹಾಜರಾತಿ!

| Published : Nov 19 2025, 12:45 AM IST

ಸರ್ಕಾರಿ ಶಾಲೆ-ಕಾಲೇಜಲ್ಲಿನ್ನು ಎಐ ಹಾಜರಾತಿ!
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಒನ್ ಕ್ಲಿಕ್‌ ಅಟೆಂಡೆನ್ಸ್ ಪದ್ಧತಿ ಜಾರಿಗೆ ಬರುವ ದಿನಗಳು ಸನ್ನಿಹಿತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿಗೆ ಹೆಸರು ಕೂಗಿ, ಅಟೆಂಡೆನ್ಸ್ ಪುಸ್ತಕದಲ್ಲಿ ಶಿಕ್ಷಕರು ಟಿಕ್ ಮಾಡುವ ಪದ್ಧತಿ ಕೆಲವೇ ದಿನಗಳಲ್ಲಿ ಇತಿಹಾಸ ಪುಟ ಸೇರಲಿದೆ. ಏಕೆಂದರೆ, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಒನ್ ಕ್ಲಿಕ್‌ ಅಟೆಂಡೆನ್ಸ್ ಪದ್ಧತಿ ಜಾರಿಗೆ ಬರುವ ದಿನಗಳು ಸನ್ನಿಹಿತವಾಗಿದೆ.

ರಾಜ್ಯದ ಇ-ಗವರ್ನೆನ್ಸ್ ಇಲಾಖೆಯಿಂದ ಎಐ ಅಟೆಂಡೆನ್ಸ್ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದ್ದು, ನಗರದ ಮಲ್ಲೇಶ್ವರದಲ್ಲಿರುವ ಸರ್ಕಾರಿ ಶಾಲಾ-ಕಾಲೇಜಿನಲ್ಲಿ ಪ್ರಯೋಗಿಕವಾಗಿ ಬಳಸಲಾಗುತ್ತಿದೆ. ಪ್ರಾಯೋಗಿಕ ಬಳಕೆಯಲ್ಲಿ ಎದುರಾಗುವ ಸವಾಲುಗಳು, ಅನನುಕೂಲಗಳ ಕುರಿತು ಅಧ್ಯಯನ ಮಾಡಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಸುಧಾರಣೆ, ಬದಲಾವಣೆ ಮಾಡಿಕೊಳ್ಳಲಾಗುತ್ತದೆ. ನಂತರ ಹಂತ ಹಂತವಾಗಿ ಬೇರೆ ಬೇರೆ ಶಾಲೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ನಗರದಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಭಾಗವಹಿಸಿರುವ ರಾಜ್ಯ ಸರ್ಕಾರದ ಇ ಗವರ್ನೆನ್ಸ್ ಇಲಾಖೆ, ತನ್ನ ಹೊಸ ಯೋಜನೆಯನ್ನು ಸಾರ್ವಜನಿಕರ ಎದುರು ತೆರೆದಿಟ್ಟಿದೆ. ಈಗಾಗಲೇ ಸರ್ಕಾರದ 18 ಇಲಾಖೆಗಳಲ್ಲಿ ಮುಖಚಹರೆ, ಸಹಿತ ಮೊಬೈಲ್ ಫೋನ್ ಆ್ಯಪ್ ಆಧಾರಿತ ‘ಕರ್ತವ್ಯ ಅಟೆಂಡೆನ್ಸ್’ ಅನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಶಾಲಾ-ಕಾಲೇಜುಗಳಿಗೆ ಎಐ ಅಟೆಂಡೆನ್ಸ್ ತರಲು ಮುಂದಾಗಿದೆ.

ಎಐ ಹಾಜರಾತಿಯಿಂದ ಎಲ್ಲರ ಹೆಸರು ಕೂಗಿ ಟಿಕ್ ಮಾಡಲು ವ್ಯಯಿಸುವ ಸಮಯ ಉಳಿತಾಯವಾಗುತ್ತದೆ. ಬೋಧನೆಗೆ ಹೆಚ್ಚಿನ ಅವಕಾಶ ಸಿಗುತ್ತದೆ. ರಿಯಲ್ ಟೈಮ್ ಫೋಟೋ ಕ್ಲಿಕ್ಕಿಸಿಕೊಳ್ಳುವ ಕಾರಣ ಸಹಪಾಠಿಯ ಹೆಸರು ಕೂಗಿ ಹಾಜರಾತಿ ಹಾಕಿ ವಿದ್ಯಾರ್ಥಿಗಳು ಕೀಟಲೆ ಮಾಡುವುದಕ್ಕೆ ಕಡಿವಾಣ ಬೀಳುತ್ತದೆ. ಶಾಲಾ ಹಾಜರಾತಿಯಲ್ಲಿ ಪಾರದರ್ಶಕತೆ ಇರುತ್ತದೆ. ಇದರಿಂದ ಶಾಲೆಗೆ ಒದಗಿಸುವ ಆಹಾರ, ಅಗತ್ಯ ಸೌಕರ್ಯಗಳ ನಿಖರ ಲೆಕ್ಕ ಇಡಬಹುದು ಎಂದು ಸೆಂಟರ್ ಫಾರ್ ಇ ಗವರ್ನೆನ್ಸ್‌ನ ಯೋಜನಾ ನಿರ್ದೇಶಕ ಡಾ.ಶ್ರೀವ್ಯಾಸ್ ಎಚ್.ಎಂ ತಿಳಿಸಿದರು.

ಹೊಸ ಹಾಜರಾತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಒಂದು ಕಡೆ ಬಳಸಲಾಗುತ್ತಿದೆ. ಪ್ರತಿಕ್ರಿಯೆ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಬೇರೆ ಕಡೆಗೂ ವಿಸ್ತರಿಸಲಾಗುತ್ತದೆ ಎಂದು ಡಾ.ಶ್ರೀವ್ಯಾಸ್ ಎಚ್.ಎಂ. ಹೇಳಿದರು.

ಮೊಬೈಲ್ ಫೋನ್ ಆ್ಯಪ್ ಮೂಲಕ ಎಐ ಅಟೆಂಡೆನ್ಸ್ ಕಾರ್ಯ ನಿರ್ವಹಿಸುತ್ತದೆ. ಆರಂಭದಲ್ಲಿ ಒಮ್ಮೆ ವಿದ್ಯಾರ್ಥಿಯ ಫೋಟೋ ಕ್ಲಿಕ್ಕಿಸಿಕೊಂಡರೆ ಡೇಟಾ ಆಧಾರದಲ್ಲಿ ಸ್ಟೋರ್ ಆಗುತ್ತದೆ. ನಂತರ ಆ್ಯಪ್‌ ಮೂಲಕವೇ ತರಗತಿಯ ಎಲ್ಲ ವಿದ್ಯಾರ್ಥಿಗಳ ಮುಖ ಕಾಣುವಂತೆ ಶಿಕ್ಷಕರು ಫೋಟೋ ಕ್ಲಿಕ್ಕಿಸಿಕೊಳ್ಳಬೇಕು. ಏಕಕಾಲಕ್ಕೆ ಸುಮಾರು 20-30 ಮಕ್ಕಳ ಫೋಟೋ ಸೆರೆಯಾಗುವಂಥ ವ್ಯವಸ್ಥೆಯಿದೆ. ನಿಖರ ಹಾಜರಾತಿಗೆ ಎಲ್ಲರ ಮುಖ ಕಾಣುವಂತೆ ಫೋಟೋ ಸೆರೆ ಹಿಡಿಯಬೇಕಾಗುತ್ತದೆ ಎಂದು ಇ-ಗವರ್ನೆನ್ಸ್‌ನ ಮತ್ತೊಬ್ಬ ಅಧಿಕಾರಿ ಸಚಿನ್ ತಿಳಿಸಿದರು.