ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಹೈನುಗಾರಿಕೆಯನ್ನು ಅವಲಂಭಿಸಿರುವ ಹಾಲು ಉತ್ಪಾದಕರ ಜೀವನ ಕಷ್ಟಕರವಾಗಿದೆ. ರಾಜ್ಯ ಸರ್ಕಾರವು ಹಾಲಿಗೆ ನೀಡುತ್ತಿರುವ ₹೫ ಪ್ರೋತ್ಸಾಹ ಧನವನ್ನು ₹೧೦ಕ್ಕೆ ಹೆಚ್ಚಿಸಬೇಕು ಎಂದು ತಾಲೂಕಿಗೆ ಶಾಸಕ ಕೆ.ವೈ. ನಂಜೇಗೌಡ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಾಧನೆ- ಸಂಭ್ರಮ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಕೋಮುಲ್ ನಿರ್ದೇಶಕ ಮಲಿಯಪ್ಪನಹಳ್ಳಿ ಎಂ.ಎನ್.ಶ್ರೀನಿವಾಸ್ ತಿಳಿಸಿದರು.

ನಗರದ ಶಿಬಿರ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಲೂರು ತಾಲೂಕಿಗೆ ಪ್ರಥಮ ಬಾರಿಗೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ತಾಲೂಕಿನಲ್ಲಿ ೧೮೨ ಹಾಲು ಉತ್ಪಾದಕ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು ೭೪೦೦ ಹಾಲು ಉತ್ಪಾದಕರು ಪ್ರತಿನಿತ್ಯ ೧,೩೮,೦೦೦ ಲೀಟರ್ ಹಾಲನ್ನು ಜಿಲ್ಲಾ ಹಾಲು ಒಕ್ಕೂಟಕ್ಕೆ ಪೂರೈಸುತ್ತಿದ್ದಾರೆ. ರೈತರು ಕುಟುಂಬಗಳ ಪೋಷಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಮುನ್ನಡೆಸಲು ಹೈನುಗಾರಿಕೆಯನ್ನೇ ಅವಲಂಬಿಸಿರುವುದರಿಂದ ಹಾಲಿನ ಪ್ರೋತ್ಸಾಹಧನವನ್ನು ₹೧೦ಕ್ಕೆ ಹೆಚ್ಚಿಸಬೇಕು, ಸದರಿ ಪಶು ಆಹಾರ ಬೆಲೆಯನ್ನು ಸರ್ಕಾರ ಕಡಿಮೆ ಮಾಡಿ ರಿಯಾಯಿತಿ ದರದಲ್ಲಿ ನೀಡಬೇಕು, ಜಿಲ್ಲೆಯಾದ್ಯಂತ ಮಳೆ ಕೊರತೆ ಇರುವುದರಿಂದ ಹಸಿರು ಮೇವು ಕೊರತೆ ಸಂಭವಿಸಿರುವುದರಿಂದ ಮೇವಿನ ಲಭ್ಯತೆ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕರ ನೇತೃತ್ವದಲ್ಲಿ ಸುಮಾರು ೧೦,೦೦೦ ಹಾಲು ಉತ್ಪಾದಕರ ನಿಯೋಗದೊಂದಿಗೆ ಮನವಿ ಸಲ್ಲಿಸಲಾಗುವುದು. ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಆಗಮಿಸಲು ಸರ್ಕಾರಿ ಬಸ್ ಹಾಗೂ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.

ಒಕ್ಕೂಟದ ಮಹಿಳಾ ನಿರ್ದೇಶಕಿ ಕಾಂತಮ್ಮ ಸೋಮಣ್ಣ ಮಾತನಾಡಿ, ಪ್ರಸ್ತುತ ಹಾಲನ್ನು ಉತ್ಪಾದಿಸಲು ರೈತರಿಗೆ ಹೆಚ್ಚಿನ ಹೊರೆಯಾಗುತ್ತಿದ್ದು ಪ್ರೋತ್ಸಾಹ ಧನ ₹೧೦ ಹೆಚ್ಚಿಸಬೇಕು ಎಂದರು.


ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕ ನಾರಾಯಣಗೌಡ ಕೆ., ಹಾಲು ಉತ್ಪಾದಕ ನೌಕರ ಸಂಘದ ಅಧ್ಯಕ್ಷ ಮುನಿರಾಜು, ಎಫ್ ಪಿ ಓ ಅಧ್ಯಕ್ಷ ಶ್ರೀನಿವಾಸ್, ಬಾಳಿಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಆರ್. ಶ್ರೀನಿವಾಸ್, ಅರಸನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್, ಗೋಪಾಲಕೃಷ್ಣ, ದೊಡ್ಡ ಸಬ್ಬೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಶ್ರೀನಿವಾಸ್, ಅಬ್ಬೇನಹಳ್ಳಿ ಮಂಜುನಾಥ್ ಇನ್ನಿತರರು ಹಾಜರಿದ್ದರು.