- ಎಸ್ಐಆರ್ ಹೆಸರಲ್ಲಿ ಕಣ್ತಪ್ಪಿನಿಂದಲ್ಲ, ಉದ್ದೇಶ ಪೂರ್ವಕವಾಗಿ ಟಾರ್ಗೆಟ್‌: ಅಫ್ಸರ್ ಕೊಡ್ಲಿಪೇಟೆ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ರಜಾವುಲ್ ಮುಸ್ತಫಾ ನಗರ ಪ್ರದೇಶದ ಮತದಾರರ ಹೆಸರು 2002ರ ಮತದಾರರ ಪಟ್ಟಿಯಲ್ಲಿ ಕಾಣೆಯಾದ ಗಂಭೀರ ದೋಷವನ್ನು ತಕ್ಷಣವೇ ಸರಿಪಡಿಸಿ, ಅರ್ಹ ಮತದಾರರನ್ನು ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕ್ಷೇತ್ರದ ಮುಸ್ತಫಾ ನಗರದ ನಿವಾಸಿಗಳು ಹಾಗೂ ಸೋಷಿಯಲ್ ಡಿಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಮುಖಂಡರ ನಿಯೋಗ ಕಳೆದ ಮಾ.9ರಂದೇ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾಧಿಕಾರಿಗೆ ಈ ಬಗ್ಗೆ ಮನವಿ ಅರ್ಪಿಸಿದ್ದು, ಮಾ.14ರಂದು ಮುಖ್ಯ ಚುನಾವಣಾಧಿಕಾರಿ ಅವರಿಗೂ ದೂರು ನೀಡಲಾಗಿದೆ ಎಂದರು.

ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಬಂದಿದ್ದರೂ ಈವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮುಸ್ತಫಾ ನಗರ ನಿವಾಸಿಗಳು 3 ದಶಕದಿಂದ ಅಲ್ಲಿ ವಾಸವಿದ್ದು, 2002ರ ಚುನಾವಣೆಯಲ್ಲಿ ಅಲ್ಲಿನ ಬಿ.ಕಲ್ಪನಹಳ್ಳಿ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದರು. ಆದರೆ, 2002ರ ಮಾಯಕೊಂಡ ಕ್ಷೇತ್ರ-42ರ ಭಾಗ ಸಂಖ್ಯೆ 25ರ ಮತದಾರರ ಪಟ್ಟಿ ಪರಿಶೀಲಿಸಿದಾಗ ಮುಖಪುಟದಲ್ಲಿ ಭಾಗದ ಪ್ರದೇಶ- ಬಿ.ಕಲ್ಪನಹಳ್ಳಿ ಹಾಗೂ ರಜಾವುಲ್ ಮುಸ್ತಫಾ ನಗರ ಎಂಬುದಾಗಿ ನಮೂದಿಸಿದ್ದರೂ, ಒಳಗಿನ ಪುಟಗಳಲ್ಲಿ ಕೇವಲ ಬಿ.ಕಲ್ಪನಹಳ್ಳಿ ಗ್ರಾಮದ ಮತದಾರರ ಹೆಸರಷ್ಟೇ ಕಂ ಬಂದಿವೆ ಎಂದು ದೂರಿದರು.

ಮುಸ್ತಫಾ ನಗರದ ಮತದಾರರ ಹೆಸರು ಸಂಪೂರ್ಣ ಕಾಣೆ ಆಗಿರುವುದು ಗಂಭೀರ ಆಡಳಿತಾತ್ಮಕ ದೋಷವಾಗಿದೆ. ಮತದಾರರ ಹೆಸರನ್ನು 2002ರ ಇತರೇ ಭಾಗದಲ್ಲಿ ಪರಿಶೀಲಿಸಿದರೂ ಯಾವುದೇ ದಾಖಲೆ ಲಭ್ಯವಾಗಿಲ್ಲ. ಇದು ತಾಂತ್ರಿಕ ದೋಷವಾಗಿರಬಹುದಾದರೂ, ಅರ್ಹ ಮತದಾರರ ಮತದಾನದ ಹಕ್ಕಿಗೆ ಧಕ್ಕೆ ಉಂಟು ಮಾಡುವ ಗಂಭೀರ ದೋಷವಾಗಿದೆ. ಈಚೆಗೆ ಎಸ್‌ಡಿಪಿಐ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅನೇಕ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಕಾಣೆ ಆಗಿರುವುದು ದೃಢಪಟ್ಟಿದೆ. ಮತದಾರರ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.


ಮುಸ್ತಫಾ ನಗರದ ಭಾಗ ಸಂಖ್ಯೆ 25ರ 2002ರ ಮತದಾರರ ಪಟ್ಟಿ ಸಮಗ್ರವಾಗಿ ಪರಿಶೀಲಿಸಬೇಕು. ಅಲ್ಲಿನ ಮತದಾರರ ಹೆಸರು 2002ರಲ್ಲಿ ಯಾವ ಭಾಗದಲ್ಲಿ ಸೇರಿದ್ದವು ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ಪಟ್ಟಿಯಲ್ಲಿ ಕಾಣೆಯಾದ ಎಲ್ಲ ಅರ್ಹ ಮತದಾರರ ಹೆಸರನ್ನು ಗುರುತಿಸಿ, ತಿದ್ದುಪಡಿಗೆ ಕ್ರಮ ಕೈಗೊಳ್ಳಬೇಕು. ಇಂತಹ ಗಂಭೀರ ಲೋಪ, ಪ್ರಮಾದಕ್ಕೆ ಕಾರಣರಾದಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ದೋಷಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ಕೈಗೊಳ್ಳಬೇಕು ಎಂದು ಎಸ್ಐಆರ್‌ನ ಎಸ್‌ಡಿಪಿಐ ರಾಜ್ಯ ಉಸ್ತುವಾರಿಯೂ ಆದ ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಎ.ಆರ್.ತಾಹೀರ್, ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್, ಹಶಮ್ ಪೀರ್ ದರ್ಗಾ, ಮುಜಾವರ್ ಹಜ್ರತ್ ಅಲಿ, ಜಿಕ್ರಿಯಾ, ದಾದಾಪೀರ್ ಖಾನ್, ನಗೀನಾ ಬಾನು, ಹಸೀನಾ ಬಾನು ಇತರರು ಇದ್ದರು.

- - -

(ಬಾಕ್ಸ್‌) * ರಾಜ್ಯದಲ್ಲಿ ಐದೂವರೆ ಕೋಟಿ ಅರ್ಹ ಮತದಾರರ ಪೈಕಿ ಸುಮಾರು 1 ಕೋಟಿ ಜನರಿಗೆ ಎಸ್‌ಐಆರ್‌ ಬಿಸಿ ತಟ್ಟಲಿದೆ. ಈಗಾಗಲೇ 10 ಲಕ್ಷ ಅರ್ಹ ಮತದಾರರು ಅತಂತ್ರರಾಗಿದ್ದಾರೆ. ಇದು ಕಣ್ತಪ್ಪಿನಿಂದ ಆಗುತ್ತಿರುವ ಪ್ರಮಾದವಲ್ಲ, ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ಜನರ ಪೌರತ್ವ ಕೇಳಲು ಸಂವಿಧಾನಕ ಹಕ್ಕು ಇಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಎಸ್ಐಆರ್ ಪ್ರಕ್ರಿಯೆ ಆರಂಭವಾದಾಗಲೇ ನಾವು ಈ ಬಗ್ಗೆ ದೂರು ನೀಡಿದ್ದೆವು. ಅನಕ್ಷರಸ್ಥರು, ಬಡವರು, ಶ್ರಮಿಕರು ಯಾಕೆ ಪಾರ್ಸ್ ಪೋರ್ಟ್ ಮಾಡಿಸುತ್ತಾರೆ? 11 ದಾಖಲೆ ಹೊಂದುವುದು ಕಷ್ಟ. ಎಸ್ಐಆರ್ ಪ್ರಕ್ರಿಯೆ ವಿರುದ್ಧ ಜನರನ್ನು ಸಂಘಟಿಸಿ ಹೋರಾಡುವ ಜೊತೆಗೆ ಕಾನೂನು ಹೋರಾಟಕ್ಕೂ ಎಸ್‌ಡಿಪಿಐ ಮುಂದಾಗಲಿದೆ ಎಂದು ಅಫ್ಸರ್ ಕೊಡ್ಲಿಪೇಟೆ ಹೇಳಿದರು.

- - -

(ಕೋಟ್‌) ದಾವಣಗೆರೆ ಮುಸ್ತಫಾ ನಗರದ ಅರ್ಹ ಮತದಾರರಿಗೆ ಅನ್ಯಾಯವಾದ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯಲು ಹೋಗಿದ್ದೆವು. ಆಗ ಜಿಲ್ಲಾಧಿಕಾರಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಿರತರಾಗಿದ್ದ ಕಾರಣ ಅವರ ಪರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದಾಗ, ಮನವಿ ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅದು ಕೇವಲ ಭರವಸೆ ಮಾತ್ರ ಆಗದೇ, ಕಾರ್ಯರೂಪಕ್ಕೆ ಬರಬೇಕು. ಅರ್ಹರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬುದು ನಮ್ಮದು ಉದ್ದೇಶ. - ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ.

- - -

-18ಕೆಡಿವಿಜಿ1, 2:

ದಾವಣಗೆರೆಯಲ್ಲಿ ಶನಿವಾರ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.