ಸಾರಾಂಶ
- ಜಿಲ್ಲಾ ಬಿಜೆಪಿ ನಗರ ಮಂಡಲದಿಂದ ಆಯೋಜಿಸಿದ್ಧ ಆತ್ಮನಿರ್ಭರ ಭಾರತ ಅಭಿಯಾನ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾರತ ಉತ್ಪಾದಕರ ರಾಷ್ಟ್ರವಾದರೆ, ದೇಶ ಶ್ರೀಮಂತವಾಗಲಿದೆ. ಪ್ರತಿಯೊಬ್ಬ ವ್ಯಕ್ತಿಯೂ ಆರ್ಥಿಕತೆಯಲ್ಲಿ ಒಂದೊಂದು ಹೆಜ್ಜೆ ಮುಂದೆ ಸಾಗುವ ಸಂಕಲ್ಪ ಮಾಡಬೇಕು. ಆಗ ಜಗತ್ತಿನ ಎದುರು ಭಾರತ ಬಲಿಷ್ಟವಾಗಿ ನೆಲೆಯೂರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಗರ ಮಂಡಲದಿಂದ ಆಯೋಜಿಸಿದ್ಧ ಆತ್ಮನಿರ್ಭರ ಭಾರತ ಅಭಿಯಾನದ ಕಾರ್ಯಾ ಗಾರದಲ್ಲಿ ಮಾತನಾಡಿದ ಅವರು, ಭಾರತೀಯರು ಸಕಾರಾತ್ಮಕವಾಗಿ ಯೋಚಿಸಿ ಗ್ರಾಹಕ ರಾಷ್ಟ್ರದಿಂದ, ಉತ್ಪಾದಕ ರಾಷ್ಟ್ರವಾಗುವ ಮೂಲಕ ಸ್ವದೇಶಿ ಬಳಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ತಿಳಿಸಿದರು.ಪ್ರತಿ ಕುಟುಂಬದಲ್ಲಿ ಮನುಷ್ಯ ದೈನಂದಿನ ಬಳಸುವ ಸ್ವದೇಶಿ ಹಾಗೂ ವಿದೇಶಿ ವಸ್ತುಗಳನ್ನು ಪಟ್ಟಿ ಮಾಡಬೇಕು. ಹಂತ ಹಂತವಾಗಿ ಸ್ವದೇಶಿ ಉತ್ಪಾದಕತೆಗೆ ಹೆಚ್ಚಿನ ಒತ್ತು ನೀಡಿದರೆ ಸಂಪೂರ್ಣ ಲಾಭಾಂಶ ದೇಶದ ನಾಗರಿಕರಿಗೆ ತಲುಪುತ್ತದೆ. ಹೆಚ್ಚು ವಿದೇಶಿ ವಸ್ತು ಬಳಸಿದರೆ ಲಾಭಾಂಶ ವಿದೇಶಕ್ಕೆ ತೆರಳಿ, ಭಾರತೀಯರು ಗ್ರಾಹಕರಾಗುತ್ತಾರೆ ಎಂದರು.ಪ್ರಪಂಚದ ಎದುರು ಭಾರತ 2ನೇ ಅತಿದೊಡ್ಡ ರಾಷ್ಟ್ರವಾಗಲಿದೆ ಎಂಬುದು ಮನಗಂಡ ಅಮೇರಿಕಾ ಅಧ್ಯಕ್ಷರು, ವಿಪರೀತ ತೆರಿಗೆ ಏರಿಸಿ ದುರ್ಬಲಗೊಳಿಸಲು ಮುಂದಾಗುತ್ತಿದ್ದಾರೆ. ಇದರಿಂದ ಭಾರತೀಯರು ಪರಿಹಾರ ಕಂಡುಕೊಳ್ಳಲು ಸ್ವದೇಶಿ ಯಾಗುವ ಮೂಲಕ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಭಾರತ ಕೃಷಿ ಪ್ರಧಾನಕ್ಕಿಂತ ಮೊದಲು ಉತ್ಪಾದನೆ ರಾಷ್ಟ್ರವಾಗಿತ್ತು. ಪ್ರತಿ ಮನೆಗಳಲ್ಲಿ ಉತ್ಪಾದಕತೆಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ನಿರುದ್ಯೋಗದ ಭೀತಿ ಹತ್ತಿರ ಸುಳಿಯುತ್ತಿರಲಿಲ್ಲ. ಇಂದಿನ ಕಾಲಮಾನದಲ್ಲಿ ಯುವಕರು ಸ್ವಉದ್ಯೋಗ ಚಿಂತನೆಯಡಿ ಹಿಂದಿನ ಗುಡಿ ಕೈಗಾರಿಕೆಗಳಂತ ಮಂತ್ರ ಅಳವಡಿಸಿಕೊಂಡು ಉತ್ಪಾದಕರಾಗಬೇಕು ಎಂದು ತಿಳಿಸಿದರು.ಸ್ವಾತಂತ್ರ್ಯ ಪೂರ್ವದ ಹಿಂದೆ ರಾಷ್ಟ್ರದಲ್ಲಿ ತಯಾರಿಸುವ ಬಟ್ಟೆಗಳು ವಿದೇಶಿಗರನ್ನು ಸೆಳೆಯುತ್ತಿದ್ದವು. ಗುಣಮಟ್ಟದ ಕಬ್ಬಿಣ ಭಾರತದಿಂದ ಕೊಂಡೊಯ್ಯುತ್ತಿದ್ದರು. ಆದರೆ ಪರಕೀಯರ ಆಳ್ವಿಕೆ, ಕಾನೂನು ಏರಿಕೆಯ ಪರಿಣಾಮ ಭಾರತದ ಉತ್ಪಾದ ಕತೆ ನಾಶಗೊಂಡಿದ್ದಲ್ಲದೇ, ದೇಶಿಯ ವಸ್ತುಗಳಿಗೆ ತೆರಿಗೆ ವಿಧಿಸಿ, ವಿದೇಶಿ ವಸ್ತುಗಳ ಆಮದಿಗೆ ಶೂನ್ಯ ತೆರಿಗೆ ವಿಧಿಸಲಾಯಿತು ಎಂದರು.ಭಾರತೀಯರೆಲ್ಲರೂ ದೃಢಮನಸ್ಸಿನಿಂದ ನಿರ್ಧಾರ ಕೈಗೊಂಡು ಪರಾವಲಂಬಿಯಿಂದ ಸ್ವಾವಲಂಬಿ ಕಡೆಗೆ ಹೆಜ್ಜೆ ಹಾಕಬೇಕು. ಸ್ವದೇಶಿ ವಸ್ತುಗಳ ಖರೀದಿ ಜೊತೆಗೆ ಪ್ರಚಾರ ಕಾರ್ಯ ಕೈಗೊಂಡಾಗ ರಾಷ್ಟ್ರ ಶ್ರೀಮಂತವಾಗಲಿದೆ. ಸ್ವದೇಶಿ ಸಂಪೂರ್ಣ ಲಾಭಾಂಶ ದೇಶಕ್ಕೆ ವ್ಯಯವಾಗಿ ಆತ್ಮನಿರ್ಭರ ಆಂದೋಲನಕ್ಕೆ ಮುನ್ನುಡಿ ಬರೆಯಲು ಸನ್ನದ್ಧರಾಗಬೇಕು ಎಂದು ಹೇಳಿದರು.ಪ್ರಪಂಚದ ಎದುರು ಭಾರತ 3ನೇ ಆರ್ಥಿಕ ಶಕ್ತಿಯಾಗಿ ನೆಲೆಕಂಡಿದೆ. ಅಮೇರಿಕಾ ಹಾಗೂ ಚೀನಾದ ಮುಂದೆ ಗಟ್ಟಿಯಾಗಿ ನಿಲ್ಲಲು ಆತ್ಮನಿರ್ಭರ ಅಳವಡಿಸಿ ಸ್ವದೇಶಿ ಆಂದೋಲನದ ಅಸ್ತ್ರವಾಗಿಸಬೇಕು. ಆ ನಿಟ್ಟಿನಲ್ಲಿ ಅಧಿಕಾರ ಅಭಿಲಾಷೆಗೆ ಒಳಗಾಗದೇ, ರಾಷ್ಟ್ರ ವೈಭವದ ಗುರಿಯೆಡೆಗೆ ಭಾಜಪ ಕಾರ್ಯಪ್ರವೃತ್ತ ವಾಗಿದೆ ಎಂದು ತಿಳಿಸಿದರು. ರಾಷ್ಟ್ರದ ಬಹುಸಂಖ್ಯಾತರ ಆಚರಣೆಗೆ ಸ್ಪಂದಿಸದ ರಾಜ್ಯದ ಮುಖ್ಯಮಂತ್ರಿಗಳು ಕುಂಕುಮ, ಕೇಸರಿ ಶಾಲು ಧರಿಸುತ್ತಿಲ್ಲ. ಅಲ್ಪಸಂಖ್ಯಾತರ ಒಲೈಕೆಗೆ ಟೋಪಿ ಹಾಕಿಕೊಂಡು ಮಂಕುಬೂದಿ ಎರಚುತ್ತಿದೆ. ಗಾಂಧೀಜಿಯವರ ಸ್ವದೇಶಿ ಬಳಕೆಗೆ ಒತ್ತು ನೀಡುತ್ತಿಲ್ಲ. ಅವರ ವಾರಸುದಾರರು ಕೂಡಾ ಗಾಂಧಿ ತತ್ವಾದರ್ಶಗಳನ್ನು ನಾಮಕಾವಸ್ಥೆ ಮಾಡಿಕೊಂಡಿದ್ದಾರೆ ಎಂದರು.ಆತ್ಮನಿರ್ಭರತೆ ದೇಶದಲ್ಲಿ ಯಶಸ್ಸು ಕಂಡಲ್ಲಿ ನಿರುದ್ಯೋಗ ಶೂನ್ಯವಾಗಿ, ಸಮಾಜದ ಅಸ್ಪೃಶ್ಯತೆ, ಸಾಮಾಜಿಕ ಪಿಡುಗು ದೂರವಾಗಲಿದೆ. ಸೈದ್ದಾಂತಿಕ ಬದ್ಧತೆ ಹೊಂದಿರುವ ಬಿಜೆಪಿ ಆಳ್ವಿಕೆಯಲ್ಲಿ 2-3 ವರ್ಷಗಳಲ್ಲಿ ಭಾರತ ಆತ್ಮನಿರ್ಭರದಿಂದ ವಿಶ್ವದ ಮುಂದೆ ಒಂದು ಅಥವಾ 2ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಕಳೆದ 2020ರಲ್ಲಿ ಪ್ರಧಾನಮಂತ್ರಿ ಮೋದಿಯವರು ಆತ್ಮನಿರ್ಭರ ಭಾರತ ಘೋಷಣೆ ಜಾರಿಗೆ ತಂದು ಸ್ವದೇಶಿ ವಸ್ತುಗಳ ಬಳಸಲು ಕೋರಿಕೊಂಡಿದ್ದಾರೆ. ಹೀಗಾಗಿ ಜನತೆ ಸ್ವದೇಶಿ ವಸ್ತುಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ರಾಷ್ಟ್ರಾಭಿವೃದ್ದಿಗೆ ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಜಿಲ್ಲಾ ಸಂಚಾಲಕ ಮಧುಕುಮಾರ್ ರಾಜ್ ಅರಸ್, ಬಿಜೆಪಿ ರಾಷ್ಟ್ರೀಯ ಪ್ರಕೋಷ್ಟ ರಾಜ್ಯ ಸಂಚಾಲಕ ಪ್ರೇಮ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ನರೇಂದ್ರ, ಮಹಿಳಾ ಘಟಕದ ಜಿಲ್ಲಾ ಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ನಗರಾಧ್ಯಕ್ಷೆ ಪವಿತ್ರ ಮಧುಗುಂಡಿ, ಮುಖಂಡ ಬಸವರಾಜ್ ಉಪಸ್ಥಿತರಿದ್ದರು.-- ಬಾಕ್ಸ್--
ಸ್ವದೇಶಿ ಆಂದೋಲನ:ಸೆಪ್ಟೆಂಬರ್‌ನಿಂದ ಡಿಸೆಂಬರ್ ಅಂತ್ಯದವರೆಗೆ ಕೈಗೊಂಡಿರುವ ಸ್ವದೇಶಿ ಆಂದೋಲನವನ್ನು ಬೂತ್‌ಮಟ್ಟದಿಂದ ಯಶಸ್ಸವಿಗೊಳಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ತಿಳಿಸಿದರು. ಆ ನಿಟ್ಟಿನಲ್ಲಿ ಕೇಂದ್ರದ ಸಾಧನೆ, ಸ್ವದೇಶಿ ಬಳಕೆ ಬಗ್ಗೆ ಶಾಲೆಗಳಲ್ಲಿ ಚಿತ್ರಕಲೆ ಸ್ಪರ್ಧೆ, ಮಹಿಳಾ, ಯುವ ಸಮ್ಮೇಳನ, ಬೀದಿ ನಾಟಕ, ಭಾಷಣ ಸ್ಫರ್ಧೆ ಹಮ್ಮಿಕೊಂಡು ರಾಷ್ಟ್ರದ ಏಳಿಗೆಗೆ ಶ್ರಮಿಸಿ ಎಂದರು.10 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಗರ ಮಂಡಲದಿಂದ ಆಯೋಜಿಸಿದ್ಧ ಆತ್ಮನಿರ್ಭರ ಭಾರತ ಅಭಿಯಾನದ ಕಾರ್ಯಾಗಾರದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿದರು.