ಮೂಢನಂಬಿಕೆಯಿಂದ ದೂರಾಗಿ ವೈಜ್ಞಾನಿಕವಾಗಿ ಚಿಂತನೆ ನಡೆಸಿ: ನಯನಾ ಮೋಟಮ್ಮ ಸಲಹೆ

| Published : Oct 11 2025, 12:02 AM IST

ಮೂಢನಂಬಿಕೆಯಿಂದ ದೂರಾಗಿ ವೈಜ್ಞಾನಿಕವಾಗಿ ಚಿಂತನೆ ನಡೆಸಿ: ನಯನಾ ಮೋಟಮ್ಮ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜನರು ಜೀವನದಲ್ಲಿ ಮೂಢನಂಬಿಕೆಯಿಂದ ದೂರ ಉಳಿದು ವೈಜ್ಞಾನಿಕವಾಗಿ ಚಿಂತನೆ ನಡೆಸಿ ಪೌಷ್ಟಿಕ ಆಹಾರ ಸೇವನೆ ಯೊಂದಿಗೆ ಉತ್ತಮ ಜೀವನ ಪದ್ದತಿ ಅಳವಡಿಸಿಕೊಳ್ಳಬೇಕೆಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕಿವಿಮಾತು ಹೇಳಿದರು.

- ಅಂಬಳೆ ಎ.ಆರ್.ಕೃಷ್ಣಶಾಸ್ತ್ರಿ ಸಭಾ ಭವನದಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚರಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜನರು ಜೀವನದಲ್ಲಿ ಮೂಢನಂಬಿಕೆಯಿಂದ ದೂರ ಉಳಿದು ವೈಜ್ಞಾನಿಕವಾಗಿ ಚಿಂತನೆ ನಡೆಸಿ ಪೌಷ್ಟಿಕ ಆಹಾರ ಸೇವನೆ ಯೊಂದಿಗೆ ಉತ್ತಮ ಜೀವನ ಪದ್ದತಿ ಅಳವಡಿಸಿಕೊಳ್ಳಬೇಕೆಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕಿವಿಮಾತು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಅಂಬಳೆಯ ಎ.ಆರ್. ಕೃಷ್ಣಶಾಸ್ತ್ರಿ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಪದ್ಧತಿ ಬಗ್ಗೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಗಳು ಸಾಕಷ್ಟು ಅರಿವು ಮೂಡಿಸುತ್ತಾ ಬಂದಿದ್ದರೂ ಜನರಲ್ಲಿ ಮಾತ್ರ ಬದಲಾವಣೆಗಳಾಗದಿರುವುದು ವಿಷಾದನೀಯ. ಇನ್ನೂ ಕೂಡ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಅಪೌಷ್ಟಿಕತೆ ಕಾಣುತ್ತಿದ್ದೇವೆ. ಜನರು ಮೂಢನಂಬಿಕೆ ತೊಡೆದು ವೈಜ್ಞಾನಿಕವಾಗಿ ಚಿಂತನೆ ನಡೆಸಿ ವೈಜ್ಞಾನಿಕ ಪದ್ಧತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ರಂಗನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಪೌಷ್ಟಿಕ ಕರ್ನಾಟಕವನ್ನು ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಪೋಷಣ್ ಅಭಿಯಾನ ಯೋಜನೆ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ತಲೆತಲಾಂತರ ದಿಂದ ಭಾರತವನ್ನು ಕಾಡುತ್ತಿದ್ದ ಅಪೌಷ್ಟಿಕತೆ ತೊಡೆದು ಹಾಕುವ ನಿಟ್ಟಿನಲ್ಲಿ ಪ್ರಮುಖವಾಗಿ 5 ಗುರಿಗಳನ್ನು ಹೊಂದಿದ್ದು, ಇದರಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಕಿಶೋರಿಯರು ಅಪೌಷ್ಟಿಕತೆ ನಿವಾರಣೆ, ರಕ್ತ ಹೀನತೆ ತಡೆಗಟ್ಟುವಿಕೆ, ಬೆಳವಣಿಗೆ ಕುಂಠಿತ, ಜನನ ತೂಕ ಕಡಿಮೆಯಾಗುವಿಕೆ ಇವುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿದ್ಯಾಸಾಗರ್ ಉಪನ್ಯಾಸ ನೀಡಿ, ಆಧುನಿಕ ಸಮಾಜದಲ್ಲಿ ಜನರು ಹೆಚ್ಚು ತೊಂದರೆಗೆ ಒಳಗಾಗುತ್ತಿರುವುದು ಅವರು ಸೇವಿಸುತ್ತಿರುವ ಆಹಾರ ಕ್ರಮದಿಂದ. ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ, ಸುಲಭವಾಗಿ ಸಿಗುವ ಉತ್ತಮ ಪೋಷಕಾಂಶಯುಕ್ತ ಆಹಾರ ಕ್ರಮ ರೂಢಿಸಿಕೊಂಡಲ್ಲಿ ಆರೋಗ್ಯವಂತರಾಗಿ ಜೀವನ ನಡೆಸಬಹುದು ಎಂದರು.

ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಊಟದಲ್ಲಿ ಮೊಳಕೆ ಕಾಳುಗಳು, ಸೊಪ್ಪು, ಬಣ್ಣ ಬಣ್ಣದ ತರಕಾರಿಗಳು ಹಾಗೂ ಹಣ್ಣು ಗಳನ್ನು ಸೇವಿಸಬೇಕು. ದಿನಕ್ಕೆ 3-4 ಲೀ. ನೀರನ್ನು ಕುಡಿಯಬೇಕು. ಪ್ರತಿನಿತ್ಯ ವ್ಯಾಯಾಮ ಮಾಡಬೇಕು. 8 ಗಂಟೆಗಳ ಕಾಲ ನಿದ್ರಿಸಬೇಕು ಎಂದು ತಿಳಿಸಿದರು. ಹದಿಹರೆಯದ ಹೆಣ್ಣು ಮಕ್ಕಳು ಉತ್ತುಮ ಆಹಾರ ಸೇವಿಸಬೇಕು. ಶುಚಿತ್ವದ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು. ಋತುಸ್ರಾವದ ಸಮಯದಲ್ಲಿ ಪ್ರತಿನಿತ್ಯ ಸ್ನಾನ ಮಾಡಬೇಕು ಹಾಗೂ ವೈಯಕ್ತಿಕ ಸ್ವಚ್ಛತೆ ಕಡೆ ಗಮನಹರಿಸಬೇಕು ಎಂದು ತಿಳಿ ಹೇಳಿದರು.

ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕ ಶ್ರೀನಿವಾಸ್ ವೈ.ಆಲದಾರ್ತಿ ಮಾತನಾಡಿ, ಎಷ್ಟೇ ಅರಿವು ಮೂಡಿಸಿದರೂ ಜನರಲ್ಲಿ ಅಪೌಷ್ಟಿಕತೆ ದೂರ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜನರ ಸಹಭಾಗಿತ್ವವೂ ಅತಿ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಅಂಬಳೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಮಲ್ಲಮ್ಮ, ವಿಜಯಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಸಂತೋಷ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಜೆ.ರೂಪಾಕುಮಾರಿ, ಅಂಬಳೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಎನ್.ಕೆ.ಶೋಭಾ, ಹಿರಿಯ ಮೇಲ್ವಿಚಾರಕಿ ಸಿ.ಎಂ.ಲೀಲಾವತಿ, ಪೋಷಣ್ ಅಭಿಯಾನದ ಯೋಜನಾ ಸಂಯೋಜಕಿ ಕೆ.ದಿವ್ಯ ಉಪಸ್ಥಿತರಿದ್ದರು.

10 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕು ಅಂಬಳೆ ಎ.ಆರ್.ಕೃಷ್ಣಶಾಸ್ತ್ರಿ ಸಭಾ ಭವನದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು.