ಮಾದಕ ವಸ್ತುಗಳ ಪ್ರಕರಣ ಹೆಚ್ಚಳ ಅಪಾಯಕಾರಿ

| Published : Oct 11 2025, 12:02 AM IST

ಸಾರಾಂಶ

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಕುರಿತಾದ ಜಿಲ್ಲಾ ಮಟ್ಟದ ಸಮನ್ವಯ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾದಕ ವಸ್ತುಗಳ ನಿಯಂತ್ರಣಕ್ಕಾಗಿ ಅಧಿಕಾರಿಗಳ ತಂಡ ರಚಿಸಲಾಗಿದ್ದರೂ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಅಪಾಯಕಾರಿಯಾಗಿದೆ. ಇದು ಶೈಕ್ಷಣಿಕ ಫಲಿತಾಂಶ ಕುಸಿತ, ಮಕ್ಕಳ ಮೇಲಿನ ಶೋಷಣೆ, ಬಾಲ್ಯ ವಿವಾಹ, ಹದಿ ಹರೆಯದವರ ಕಾನೂನು ಸಂಘರ್ಷದೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮಾದಕ ವಸ್ತುಗಳ ನಿಯಂತ್ರಣ ಕುರಿತಾದ ಜಿಲ್ಲಾ ಮಟ್ಟದ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಧಿಕಾರಿಗಳ ತಂಡ ನಿಯಮಿತವಾಗಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಶಿಕ್ಷಕರು, ಬೋಧಕರು, ಕಾಲೇಜು ಆಡಳಿತ ಮಂಡಳಿಗಳು ಶಾಲಾ ಕಾಲೇಜು ಕ್ಯಾಂಪಸ್‍ನಲ್ಲಿ ಮಾದಕ ವಸ್ತುಗಳ ಸರಬರಾಜು ಆಗುವುದನ್ನು ತಡೆಯಲು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಯಾವುದೇ ಅನುಮಾನಾಸ್ಪದ ಸಂಗತಿಗಳು ಕಂಡು ಬಂದರೆ ಕೂಡಲೆ ಮಾಹಿತಿ ನೀಡಬೇಕು. ಇದರೊಂದಿಗೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಎಲ್ಲ ವಸತಿ ನಿಲಯಗಳಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶಿಸಿದರು.

ಅಂಗಡಿಗಳ ತೆರವಿಗೆ ಸೂಚನೆ: ಶಾಲಾ ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶದಲ್ಲಿನ ಗೂಡು ಹಾಗೂ ಪೆಟ್ಟಿಗೆ ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಸೇರಿದಂತೆ ಇತರೆ ಮಾದಕ ವಸ್ತುಗಳ ಮಾರಾಟ ಹಾಗೂ ಅಪರಾಧಿಕ ಚಟುವಟಿಕೆಗಳು ಕಂಡುಬಂದರೆ ಪೊಲೀಸ್ ಹಾಗೂ ನಗರ ಸಭೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಗೂಡಂಗಡಿ ತೆರವುಗೊಳಿಸಬೇಕು. ಪೊಲೀಸರು ಶಾಲಾ ಕಾಲೇಜಿನ ಸುತ್ತಲಿನ ಗೂಡಂಗಡಿಗಳ ವಿವರವನ್ನು ಸಂಗ್ರಹಿಸಿ ಇವುಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಯುವ ಜನರು ಮಾದಕ ವಸ್ತುಗಳ ಬಲೆಗೆ ಬೀಳದಂತೆ ಎಚ್ಚರ ವಹಿಸಬೇಕು. ಶಿಕ್ಷಣ ಸಂಸ್ಥೆಗಳು ಕೂಡ ಆಂತರಿಕವಾಗಿ ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ವಹಿಸುವಂತಹ ವ್ಯವಸ್ಥೆಯನ್ನು ರೂಪಿಸಬೇಕು. ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಉಪನಿರ್ದೇಶಕರು ಈ ಬಗ್ಗೆ ಕ್ರಮ ವಹಿಸಬೇಕು. ಶಾಲಾ ಕಾಲೇಜಗಳ ಎನ್.ಎಸ್.ಎಸ್, ಎಸ್.ಸಿ.ಸಿ ಹಾಗೂ ಸ್ಕ್ವೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಮೂಲಕ ಮಾದಕ ಸೇವನೆ ಕುರಿತು ಜಾಗೃತಿ ಕೂಡಿಸಬೇಕು ಎಂದರು.

ಔಷಧ ಅಂಗಡಿಗಳ ಕಾಫ್ ಸಿರಫ್ ಸೇರಿದಂತೆ ನಶೆ ಇರುವ ಔಷಧಗಳನ್ನು ವೈದ್ಯರ ಶಿಫಾರಸ್ಸು ಇಲ್ಲದೆ ಮಾರಾಟ ಮಾಡಬಾರದು. ಈ ಬಗ್ಗೆ ಸಹಾಯಕ ಔಷಧ ನಿಯಂತ್ರಕರು ನಿಯಮಿತವಾಗಿ ತಪಾಸಣೆ ನಡೆಸಬೇಕು. ನಿಯಮ ಮೀರಿ ಇಂತಹ ಔಷಧಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ಪರವಾನಿಗೆ ರದ್ದು ಪಡಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಮಾದಕ ವಸ್ತುಗಳ ಸೇವನೆ ದುಷ್ಪರಿಣಾಮಗಳ ಕುರಿತು ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬರುವ ಭಾನುವಾರದಿಂದ ನಶಾ ಮುಕ್ತ ಅಭಿಯಾನವನ್ನು ಸಹ ಆರಂಭಿಸಲಾಗುವುದು. ಮಾದಕ ವಸ್ತುಗಳ ಮಾರಾಟ ಮಾಡುವ ಪೆಡ್ಲರ್‍ಗಳ ಕುರಿತು ಸ್ಥಳೀಯರು, ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಅಥವಾ ಸಾರ್ವಜನಿಕರು ಮಾಹಿತಿ ನೀಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ, ಪೊಲೀಸ್ ಉಪಾಧೀಕ್ಷಕ ದಿನಕರ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯಸ್ಥರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.