ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವದಲ್ಲಿಯೇ ಬಲಿಷ್ಠವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ಹೇಳಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಅಂತರಾಷ್ಟ್ರೀಯ ಪ್ರಜಾಪ್ರಬುತ್ವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶ ಸ್ವಾತಂತ್ರ್ಯ ಪಡೆದ ಬಗೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮಹತ್ವವನ್ನು ಯುವಪೀಳಿಗೆ ಸಮಗ್ರವಾಗಿ ಅರಿತುಕೊಳ್ಳಬೇಕು ಎಂದರು.
ಭಾರತ ಜಗತ್ತಿನಲ್ಲಿಯೇ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೊಡ್ಡ ದೇಶವಾಗಿದೆ. ದೇಶದ ಜನಸಂಖ್ಯೆ ಸುಮಾರು 140 ಕೋಟಿ ಇದ್ದು, ಮತದಾನದ ಹಕ್ಕು ಹೊಂದಿರುವ ಸುಮಾರು 100 ಕೋಟಿಗೂ ಹೆಚ್ಚು ಜನ ನಮ್ಮಲ್ಲಿದ್ದಾರೆ. ಜನರೇ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ. ಮತದಾನದ ಮೂಲಕ ನಾವು ಆಯ್ಕೆ ಮಾಡಿರುವ ನಾಯಕರೇ ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಇಂತಹ ನಾಯಕರು ಯಾವ ರೀತಿ ಇರಬೇಕು ಎಂಬುದನ್ನು ಜನರೇ ನಿರ್ಧರಿಸುವುತ್ತಾರೆಂದರು.ಡಾ.ಬಿ.ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದು, ಅಧಿಕೃತವಾಗಿ ಜಾರಿಗೊಂಡ ದಿನವಾದ ಜನವರಿ 26 ಅನ್ನು ನಾವು ಗಣರಾಜ್ಯ ದಿನವನ್ನಾಗಿ ಆಚರಿಸುತ್ತೇವೆ. “ನಮ್ಮ ಮತ- ನಮ್ಮ ಹಕ್ಕು” ಎಂಬ ಘೋಷ ವಾಕ್ಯದೊಂದಿಗೆ ಈ ಬಾರಿ ಪ್ರಜಾ ಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. ಯುವಪೀಳಿಗೆ ತಮ್ಮ ವಿಧ್ಯಾಭ್ಯಾಸದ ಅವಧಿಯಲ್ಲಿ ನಮ್ಮ ದೇಶ ಸ್ವಾತಂತ್ರ್ಯ ಪಡೆದ ಬಗೆ, ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳು, ದೇಶ, ರಾಜ್ಯದಲ್ಲಿನ ಪೌರನೀತಿಗಳ ಬಗ್ಗೆ ಸಮಗ್ರವಾದ ಅರಿವು ಹೊಂದಬೇಕು ಎಂದು ಡಾ. ಎಸ್. ಆಕಾಶ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ಅವರು ಮಾತನಾಡಿ, . ಪ್ರಜಾಪ್ರಭುತ್ವ ಹಾಗೂ ಮತದಾನದ ಮೌಲ್ಯ ಅರಿಯದಿದ್ದರೆ ಮತ್ತೆ ನಾವು ಹಿಂದಿನ ಯುಗಕ್ಕೆ ಹಿಂದಿರುಗಬೇಕಾಗುತ್ತದೆ. ದೇಶದಲ್ಲಿ ಜಾತಿ, ಧರ್ಮದ ಆಧಾರಗಳಲ್ಲಿ ಮತ ಚಲಾವಣೆ ಆಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಅಭಿವೃದ್ಧಿಯ ದೃಷ್ಟಿಕೋನವನ್ನಿಟ್ಟಿಕೊಂಡು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಾಗಬೇಕು. ಬೇರೆ ದೇಶಗಳಿಗೆ ಹೋಲಿಸಿದಾಗ, ನಮ್ಮ ದೇಶ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಹೀಗಾಗಿ ದೇಶದ ಭವಿಷ್ಯ ಯುವ ಪೀಳಿಗೆಯ ಕೈನಲ್ಲಿದೆ. ಅಂಬೇಡ್ಕರ್ ಅವರು ಸಂವಿಧಾನ, ಪ್ರಜಾಪ್ರಭುತ್ವ ಎಂಬ ಅಸ್ತ್ರವನ್ನು ನಮಗೆ ಕೊಟ್ಟಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದಲ್ಲಿ ನಮ್ಮ ದೇಶದ ಭವಿಷ್ಯ ಉಜ್ವಲವಾಗಲಿದೆ ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಜನಪರವಾಗಿರಬೇಕು. ಸರ್ಕಾರದ ಆಳ್ವಿಕೆ ಯಾವ ರೀತಿ ಇರಬೇಕು ಎನ್ನುವುದನ್ನು ಪ್ರಜೆಗಳೇ ನಿರ್ಧರಿಸಬೇಕು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಮತದಾನಕ್ಕೆ ಇದ್ದಂತಹ 21 ವರ್ಷ ವಯಸ್ಸಿನ ಅರ್ಹತೆಯ ಮಿತಿಯನ್ನು 18 ವರ್ಷಕ್ಕೆ ಇಳಿಸುವ ಮೂಲಕ ಯುವಜನರಿಗೆ ಮತದಾನದ ಹಕ್ಕನ್ನು ನೀಡಿದರು. ಚುನಾವಣೆ ಸಂದರ್ಭಗಳಲ್ಲಿ ಯುವ ಪೀಳಿಗೆ, ಸಮಾಜಮುಖಿ ಆಡಳಿತ ಮಾಡುವವರನ್ನು ನಿರ್ಭಯದಿಂದ ಮತದಾನ ಮಾಡುವ ಮೂಲಕ ಆಯ್ಕೆ ಮಾಡಬೇಕು ಎಂದರು.
ಚಳ್ಳಕೆರೆಯ ಸಹಾಯಕ ಪ್ರಾಧ್ಯಾಪಕ ಸಂಜೀವ್ ಕುಮಾರ್ ಪೋತೆ ಉಪನ್ಯಾಸ ನೀಡಿ, ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸುವ ಮತ್ತು ಎತ್ತಿ ಹಿಡಿಯುವ ಉದ್ದೇಶದಿಂದ 2007ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಸೆಪ್ಟೆಂಬರ್ 15 ಅನ್ನು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲು ನಿರ್ಧರಿಸಿತು ಮತ್ತು ಸಾರ್ವಜನಿಕ ಜಾಗೃತಿ ಮೂಡಿಸಲು ಕರೆಕೊಟ್ಟಿತು ಎಂದರು.ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಸಂವಿಧಾನದ ಪೀಠಿಕೆಯನ್ನು ವಾಚಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಇದಕ್ಕೂ ಮುನ್ನ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಎಲ್ಲ ಗಣ್ಯಮಾನ್ಯರು ಪುಷ್ಪನಮನ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾ ರಮೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಗಣ್ಯರಾದ ರಮೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ ಉಪಸ್ಥಿತರಿದ್ದರು.