ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ವನ್ಯಜೀವಿ ಧಾಮ ಹಾಗೂ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಾಲಕನ ಬಲಿ ಪಡೆದ ಚಿರತೆ ಉಪಟಳ ಒಂದೆಡೆಯಾದರೆ, ಹಲಸಿನ ಆಸೆಗೆ ಗ್ರಾಮಗಳತ್ತ ಬರುತ್ತಿರುವ ಕಾಡಾನೆಗಳ ಭೀತಿ ಮತ್ತೊಂದೆಡೆಯಾಗಿದೆ.ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಸುತ್ತಮುತ್ತಲು ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದ್ದರೆ ಹಲಸು ಮತ್ತು ಮಾವಿನ ಆಸೆಗೆ ಇಂಡಿಗನತ್ತ ಗ್ರಾಮಕ್ಕೆ ಕಾಡಾನೆಗಳು ಲಗ್ಗೆ ಇಡುತ್ತಿವೆ.
ಬಾಲಕ ಮೃತಪಟ್ಟ ಬಳಿಕ ಅಲ್ಲಿನ ಗ್ರಾಮದ ಜನರು ಮನೆಯಿಂದ ಹೊರಬರಲಾರದಷ್ಟು ಭಯಭೀತರಾಗಿದ್ದಾರೆ. ಇದರೊಟ್ಟಿಗೆ ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯೂ ಹೆಚ್ಚಾಗಿದೆ.ಗ್ರಾಮದ ಸಿದ್ದರಾಜು ಎಂಬುವರ ಮನೆ ಬಳಿ ಇರುವ ಹಲಸಿನ ಮರದಲ್ಲಿ ಹಣ್ಣುಗಳನ್ನು ತಿನ್ನಲು ಇಡೀ ರಾತ್ರಿ ಆನೆ ಬೀಡುಬಿಟ್ಟಿದ್ದರಿಂದ ಗ್ರಾಮಸ್ಥರು ಮತ್ತಷ್ಟು ಚಿಂತೆಗೀಡಾಗಿದ್ದಾರೆ. ಮತ್ತೊಂದೆಡೆ ಮಂಗಳವಾರ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿ ಮೇಕೆ ಮೇಯಿಸಲು ಬಿಟ್ಟಿದ್ದಾಗ ಚಿರತೆ ದಾಳಿ ಮಾಡಿ ಮೇಕೆಯನ್ನು ಕೊಂದು ಹಾಕಿದೆ. ಗ್ರಾಮದ ಮಹಿಳೆ ಪಾರ್ವತಮ್ಮ ಜೀವನಕ್ಕೆ ಆಧಾರವಾಗಿದ್ದ ಮೇಕೆ ಚಿರತೆ ಪಾಲಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಪಾಲಾರ್ ರಸ್ತೆಯಲ್ಲೂ ಕಾಡಾನೆಗಳ ಓಡಾಟ:
ತಾಲೂಕಿನ ಪಾಲಾರ್ ರಸ್ತೆ ಬದಿಯಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ಓಡಾಟ ನಡೆಸಿದ್ದು, ವಾಹನ ಸವಾರರಿಗೆ ಭಯದ ವಾತಾವರಣ ಉಂಟು ಮಾಡಿದೆ. ವಾಹನ ಸವಾರರ ಮೊಬೈಲ್ ನಲ್ಲಿ ಕಾಡಾನೆಗಳ ಓಡಾಟದ ದೃಶ್ಯ ಸೆರೆಯಾಗಿದ್ದು, ಅರಣ್ಯಾಧಿಕಾರಿಗಳು ಮುಖ್ಯರಸ್ತೆಗೆ ಬರುತ್ತಿರುವ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸಲು ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಮಾನವ- ಪ್ರಾಣಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಗಾಯಗೊಂಡ ಆನೆ ದೃಶ್ಯ ಸೆರೆ:ಪಾಲಾರ್ ರಸ್ತೆಯಲ್ಲಿ ಆನೆಗಳು ಓಡಾಟ ನಡೆಸಿದ ಸಂದರ್ಭದಲ್ಲಿ ಆನೆಯೊಂದರ ಸೊಂಡಿಲಿಗೆ ಗಾಯವಾಗಿರುವ ದೃಶ್ಯವನ್ನು ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಗಾಯಗೊಂಡ ಆನೆ ಮೇಲೆ ಅರಣ್ಯ ಇಲಾಖೆ ನಿಗಾ ಇಟ್ಟು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ..