‘ರಾಜ್ಯ ಸರ್ಕಾರವು ರಾಜ್ಯದ ಜನರಿಗಾಗಿ ಪಂಚ ಗ್ಯಾರಂಟಿಗಳನ್ನು ನೀಡುತ್ತಿದ್ದು, ಅನ್ಯ ರಾಜ್ಯದವರಿಗೆ ಈ ಯೋಜನೆಗಳನ್ನು ನೀಡುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಮತದಾನದ ಹಕ್ಕು ಇರುವ ಫಲಾನುಭವಿಗಳಿಗೆ ಮಾತ್ರ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು : ‘ರಾಜ್ಯ ಸರ್ಕಾರವು ರಾಜ್ಯದ ಜನರಿಗಾಗಿ ಪಂಚ ಗ್ಯಾರಂಟಿಗಳನ್ನು ನೀಡುತ್ತಿದ್ದು, ಅನ್ಯ ರಾಜ್ಯದವರಿಗೆ ಈ ಯೋಜನೆಗಳನ್ನು ನೀಡುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಮತದಾನದ ಹಕ್ಕು ಇರುವ ಫಲಾನುಭವಿಗಳಿಗೆ ಮಾತ್ರ ನೀಡುತ್ತೇವೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಆ ಮೂಲಕ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಗ್ಯಾರಂಟಿ ಯೋಜನೆಗಳಿಗೆ ಮತದಾರರ ಗುರುತಿನ ಚೀಟಿ ಕಡ್ಡಾಯ ಮಾಡುವ ಸುಳಿವು ನೀಡಿದ್ದಾರೆ.
ಜತೆಗೆ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ ಹೆಸರು ರದ್ದಾಗದಂತೆ ಉಳಿಸಿಕೊಳ್ಳುವುದು ಫಲಾನುಭವಿಗಳಿಗೆ ಅನಿವಾರ್ಯ ಎಂಬಂತಾಗಿದೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ ಅವರು, ‘ಸರ್ಕಾರವು ಕರ್ನಾಟಕದವರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದು, ಅನ್ಯ ರಾಜ್ಯದವರಿಗೆ ನೀಡುವುದಿಲ್ಲ. ಉಚಿತ ವಿದ್ಯುತ್ ಅನ್ನು ನಮ್ಮ ರಾಜ್ಯದ ಮತದಾರರಿಗೆ ನೀಡಬೇಕೇ ಹೊರತು, ಬೇರೆ ರಾಜ್ಯದವರಿಗೆ ಯಾಕೆ ಕೊಡಬೇಕು?’ ಎಂದು ಪ್ರಶ್ನಿಸಿದರು.
ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೂ ರಾಜ್ಯದಲ್ಲಿ ಯಾರಿಗೆ ಮತದಾನದ ಹಕ್ಕು ಇದೆಯೋ ಅವರಿಗೆ ಮಾತ್ರ ಗುರುತಿನ ಚೀಟಿ (ಸ್ಮಾರ್ಟ್ ಕಾರ್ಡ್) ವಿತರಣೆ ಮಾಡುವ ಬಗ್ಗೆ ಹಿಂದಿನ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ನಮ್ಮ ಗ್ಯಾರಂಟಿ ನಿಲ್ಲಲ್ಲ. ಪ್ರೀತಿ ಮತ್ತು ಹೃದಯಿಂದ ನಾವು ಗ್ಯಾರಂಟಿ ನೀಡುತ್ತಿದ್ದು, ಅರ್ಹರಿಗೆ ಸಿಕ್ಕೇ ಸಿಗುತ್ತದೆ. ಆದರೆ ಗ್ಯಾರಂಟಿಯನ್ನು ಯಾರು ಪಡೆಯುತ್ತಿದ್ದಾರೆ ಎಂಬ ಬಗ್ಗೆ ಫೋಟೋ, ಗುರುತಿನ ಚೀಟಿ ಬೇಕು. ಗೃಹಲಕ್ಷ್ಮೀ ಹಣ ಯಾರದ್ದೋ ಖಾತೆಗೆ ಹೋಗುತ್ತಿದೆ. ನೇರವಾಗಿ ಫಲಾನುಭವಿ ಖಾತೆಗೆ ಹಣ ಹೋಗಬೇಕು, ಅವರೇ ಡ್ರಾ ಮಾಡಬೇಕು. ಆದರೆ ಬೇರೆಯವರು ಡ್ರಾ ಮಾಡುತ್ತಿರುವ ಬಗ್ಗೆಯೂ ನಮ್ಮ ಬಳಿ ದಾಖಲೆ ಇದೆ. ಹೀಗಾಗಿಯೇ ಪರಿಷ್ಕರಣೆಗೆ ಮುಂದಾಗಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.
ವಿರೋಧಪಕ್ಷದವರು ಟೀಕೆ ಮಾಡುವುದಕ್ಕಾಗಿಯೇ ಇದ್ದಾರೆ. ಏನೇ ಒಳ್ಳೆಯದು ಮಾಡಿದರೂ ಅದನ್ನು ತಡೆಯಲು ಯತ್ನಿಸುತ್ತಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಚುನಾವಣೆ ಎದುರಿಸಿದ ಎಲ್ಲಾ ರಾಜ್ಯಗಳಲ್ಲೂ ನಮ್ಮ ಗ್ಯಾರಂಟಿಗಳನ್ನು ತಂದರು. ಹೀಗಾಗಿ ಅವರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದರು.
ನಕಲಿ ಫೈನಾನ್ಸ್‌ಗಳಿಗೆ ಕಡಿವಾಣ:
ಕೆಲವರು ಗೃಹಲಕ್ಷ್ಮಿ ಹಣವನ್ನು ನಕಲಿ ಫೈನಾನ್ಸ್ ವ್ಯವಹಾರಕ್ಕೆ ಬಳಸುತ್ತಿದ್ದಾರೆ. ಬೆಳಗಾವಿಯ ಪ್ರಕರಣವನ್ನು ನೋಡಿದ್ದೇವೆ. 30-35% ಬಡ್ಡಿ ಆಸೆಗೆ ಗೃಹ ಲಕ್ಷ್ಮೀ ಹಣವನ್ನು ಬೇರೆ ಸ್ಕೀಂಗಳಿಗೆ ಹಾಕುತ್ತಿದ್ದಾರೆ. ಇದಕ್ಕಾಗಿ ಗ್ರಾಮ ಪಂಚಾಯ್ತಿಯಿಂದ ತಾಲ್ಲೂಕು ಪಂಚಾಯ್ತಿವರೆಗೆ ಎಲ್ಲೆಲ್ಲಿ ಇಂತಹ ಸ್ಕೀಂಗಳಿವೆಯೋ ಅವುಗಳಿಗೆ ಕಡಿವಾಣ ಹಾಕಲು ನಾವು ನಿರ್ದೇಶನ ನೀಡಿದ್ದೇವೆ. ಹೆಣ್ಣು ಕುಟುಂಬದ ಕಣ್ಣು ಎಂದು ಅವರಿಗೆ ಆರ್ಥಿಕ ಶಕ್ತಿ ಸಿಗಬೇಕು, ಅವರ ಮನೆಗಳು ಬೆಳಗಬೇಕು ಎಂದು ಯೋಜನೆಯನ್ನು ನೀಡಲಾಗಿದೆ. ವಿರೋಧ ಪಕ್ಷಗಳು ಹೀಗೆ ಮಾತನಾಡುತ್ತಿರಲಿ, ನಾವು ನಮ್ಮ ಗ್ಯಾರಂಟಿ ಮುಂದುವರೆಸುತ್ತೇವೆ ಎಂದು ಶಿವಕುಮಾರ್ ಹೇಳಿದರು.
ಗ್ಯಾರಂಟಿ ಹೆಸರಲ್ಲಿ ಜನರಿಗೆ ಮೋಸ
ಗ್ಯಾರಂಟಿ ನೀಡಿದ ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿ ಈಗ ಸರ್ಕಾರಿ ನೌಕರರಿಗೂ ಸಂಬಳ ಸಿಗುತ್ತಿಲ್ಲ. ಕರ್ನಾಟಕದಲ್ಲಿಯೂ ಅದೇ ಪರಿಸ್ಥಿತಿ ಬರಲಿದೆ. ಮತಕ್ಕಾಗಿ ಗ್ಯಾರಂಟಿ ಘೋಷಿಸಿ, ಈಗ ಅದಕ್ಕೆ ಕತ್ತರಿ ಹಾಕಿ, ಕುಂಟು ನೆಪ ಹೇಳುತ್ತಿರುವುದು ಜನರಿಗೆ ಮಾಡಿದ ಮೋಸ. ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸತ್ಯವನ್ನು ಜನರ ಮುಂದಿಡಬೇಕು.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.
ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ
ಪಂಚ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯೋಜನೆ ಅನುಷ್ಠಾನದಲ್ಲಿನ ದೋಷ ಸರಿಪಡಿಸುವ ಕೆಲಸ ಪ್ರಾರಂಭದಿಂದಲೂ ನಡೆಯುತ್ತಿದ್ದು, ಈಗಲೂ ಮುಂದುವರೆದಿದೆ. ಮುಂದಿನ ಎರಡು ವರ್ಷ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬಂದು ಗ್ಯಾರಂಟಿ ಮುಂದುವರೆಸುತ್ತೇವೆ.
ಸಿದ್ದರಾಮಯ್ಯ, ಮಾಜಿ ಸಿಎಂ
ಗ್ಯಾರಂಟಿ ಹಣಕ್ಕೆ ಕೇಂದ್ರಕ್ಕೆ ಕೈ ಚಾಚಿಲ್ಲ
ಗ್ಯಾರಂಟಿ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ನಾವು ಅನುದಾನವನ್ನೇ ಕೇಳಿಲ್ಲ. ಅವರ ಮುಂದೆ ನಾವು ಕೈ ಚಾಚಿಲ್ಲ. ಕೇಂದ್ರ ಪುರಸ್ಕೃತ ಯೋಜನೆಯ ಬಾಕಿ ಇರುವ ಹಣ ನೀಡಿ ಎಂದು ಕೇಳುತ್ತಿದ್ದೇವೆ. ನಮಗೆ ನ್ಯಾಯಯುತವಾಗಿ ನೀಡಬೇಕಾದ ಅನುದಾನವನ್ನು ಕೊಡಲಿ ಸಾಕು.
ಪ್ರಿಯಾಂಕ್ ಖರ್ಗೆ, ಗೃಹ ಸಚಿವ


