ಶಿವಾನಂದ ಗೊಂಬಿ

ಹುಬ್ಬಳ್ಳಿ:

ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗಿ "ಹುಬ್ಬಳ್ಳಿ-ಧಾರವಾಡದಲ್ಲಿ ಕೈಗಾರಿಕಾ ನೋಡ್‌ " ಮಾಡುವುದಾಗಿ ಸರ್ಕಾರದ ಘೋಷಣೆ ಕಾರ್ಯಗತವಾಗಿಯೇ ಇಲ್ಲ. ಬಜೆಟ್‌ ಆಗಿ ಬರೋಬ್ಬರಿ ಏಳೆಂಟು ತಿಂಗಳಾದರೂ ಎಳ್ಳಷ್ಟು ಕೆಲಸವಾಗಿಲ್ಲ.

ಉತ್ತರ ಕರ್ನಾಟಕದಲ್ಲೂ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಬೇಕು. ಬಿಯಾಂಡ್ ಬೆಂಗಳೂರು ಭಾಷಣಕ್ಕಷ್ಟೇ ಸೀಮಿತವಾಗಬಾರದೆಂಬ ಉದ್ದೇಶದಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಧಾರವಾಡಕ್ಕೆ ಕೈಗಾರಿಕಾ ನೋಡ್‌ ಮಾಡುವುದಾಗಿ ಘೋಷಿಸಿದ್ದರು. ಕೇಂದ್ರ ಸರ್ಕಾರದ ಮುಂಬೈ- ಬೆಂಗಳೂರು ಕಾರಿಡಾರ್‌ಗೆ ಪೂರಕವಾಗಿ ಈ ಭಾಗದಲ್ಲಿ 1000 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿ ಪಡಿಸುವುದು. ಭೂಸ್ವಾಧೀನಕ್ಕಾಗಿ ₹ 600 ಕೋಟಿ ಅನುದಾನ ನೀಡುವುದಾಗಿ ಘೋಷಿಸಿತ್ತು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ₹ 200 ಕೋಟಿ ಮೀಸಲಿಡುವುದಾಗಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಿದ್ದರು. ಇದರಿಂದ 30 ಸಾವಿರ ಕೋಟಿ ಹೂಡಿಕೆಯಾಗುತ್ತದೆ. 75 ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ಬಿಯಾಂಡ್‌ ಬೆಂಗಳೂರು ಘೋಷಣೆಗೆ ಅರ್ಥ ಬರುತ್ತದೆ ಎಂದೆಲ್ಲ ಹೇಳಿದ್ದರು.

ಕೈಗಾರಿಕಾ ನೋಡ್‌ ಆದರೆ ಕೈಗಾರಿಕೆಗಳಿಗೆ ಉತ್ತೇಜನ ದೊರೆಯುತ್ತದೆ. ರಿಯಾಯಿತಿ ದರದಲ್ಲಿ ಉದ್ಯಮಿಗಳಿಗೆ ಭೂಮಿ, ವಿದ್ಯುತ್‌ ಲಭ್ಯವಾಗುತ್ತದೆ. ಕೈಗಾರಿಕೆಗಳ ಅನುಮತಿಗೆ ಅಷ್ಟೊಂದು ಕಷ್ಟವಾಗಲ್ಲ. ಬಂಡವಾಳ ಹೂಡಿಕೆದಾರರಿಗೆ ಸರ್ಕಾರ ಸೌಲಭ್ಯ ಕಲ್ಪಿಸುತ್ತದೆ. ಬಜೆಟ್‌ನಲ್ಲೇ ಘೋಷಿಸಿದ್ದರಿಂದ ಈ ಭಾಗದಲ್ಲೂ ಕೈಗಾರಿಕೆಗಳು ಬರುತ್ತವೆ. ಈ ಭಾಗದ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಪುಣೆ, ಗೋವಾ ಸೇರಿದಂತೆ ಮತ್ತಿತರೆಡೆ ಹೋಗುವುದು ತಪ್ಪುತ್ತದೆ ಎಂಬ ಭಾವನೆ ಉದ್ಯಮಿಗಳು, ಯುವ ಸಮುದಾಯದಲ್ಲಿ ಬೇರೂರಿತ್ತು.


ಬಜೆಟ್‌ ಘೋಷಣೆಯಾಗಿ ಆಗಲೇ ಎಂಟು ತಿಂಗಳು ಆಗಿದೆ. ಹಾಗೆ ಎಂಟು ತಿಂಗಳು 1000 ಎಕರೆ ಸ್ವಾಧೀನ ಪಡಿಸಿಕೊಳ್ಳುವುದು ಅಸಾಧ್ಯದ ಮಾತು. ಆದರೆ, ಕನಿಷ್ಠ ಪಕ್ಷ ಒಂದೇ ಒಂದು ಜಿಲ್ಲಾಡಳಿತಕ್ಕಾಗಲಿ, ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಪತ್ರ ವ್ಯವಹಾರ ಕೂಡ ಆಗಿಲ್ಲ. ಭೂಸ್ವಾಧೀನಕ್ಕೆ ಭೂಮಿ ಹುಡುಕಿ ಎಂದು ಸರ್ಕಾರ ಹೇಳಿಲ್ಲ. ಬಜೆಟ್‌ನಲ್ಲಿ ಘೋಷಣೆಯಾಗಿದ್ದಷ್ಟೇ. ಉಳಿದಂತೆ ಎಳ್ಳಷ್ಟು ಕೆಲಸ ಈ ನಿಟ್ಟಿನಲ್ಲಿ ಆಗಿಲ್ಲ. ಈ ಬಗ್ಗೆ ಕೈಗಾರಿಕಾ ಕೇಂದ್ರದ ಅಧಿಕಾರಿಗಳನ್ನು ಕೇಳಿದರೆ ತಮಗೇನೂ ಬಂದಿಲ್ಲ. ಈ ವಿಷಯವಾಗಿ ಏನೊಂದು ಪ್ರಕ್ರಿಯೆ ಆಗಿಲ್ಲ ಎಂದು ತಿಳಿಸುತ್ತಾರೆ.

ಕೈಗಾರಿಕೆಗಳನ್ನು ಆಕರ್ಷಿಸಲು ಕೈಗಾರಿಕಾ ನೋಡ್‌ ಮಾಡುವುದಾಗಿ ಹೇಳಿರುವುದು ಬರೀ ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿ-ಧಾರವಾಡ ಜನರ ಮೂಗಿಗೆ ತುಪ್ಪ ಸವರುವ ಕೆಲಸವಾದಂತಾಗಿದೆ ಎಂದು ಯುವಸಮೂಹ ಟೀಕಿಸಿದೆ. ಇನ್ನಾದರೂ ಇದಕ್ಕೆ ಸಂಬಂಧಪಟ್ಟಂತೆ ಕೈಗಾರಿಕಾ ನೋಡ್‌ ಕಾರ್ಯರೂಪಕ್ಕೆ ಬರಲು ಭೂಸ್ವಾಧೀನ, ಯೋಜನಾ ವರದಿ ಸಿದ್ಧಪಡಿಸಬೇಕು. ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕೆ ಕಾಲಮಿತಿಯ ಕ್ರಿಯಾ ಯೋಜನೆ ರೂಪಿಸಬೇಕು. ಅನುದಾನ ಬಿಡುಗಡೆಗೆ ಕ್ರಮ, ಭೂಸ್ವಾಧೀನದ ಪ್ರಗತಿ ಹಾಗೂ ಯೋಜನೆಯ ಮುಂದಿನ ಹಂತಗಳ ಕುರಿತು ಸರ್ಕಾರ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಬಜೆಟ್‌ ಘೋಷಣೆ ಬರೀ ಘೋಷಣೆಯಾಗದೇ ಕಾರ್ಯರೂಪಕ್ಕೆ ಬರುವಂತೆ ಈಗಿನ ಮುಖ್ಯಮಂತ್ರಿಗಳು ದಿಟ್ಟ ಹೆಜ್ಜೆ ಇಡಬೇಕು. ಬಿಯಾಂಡ್‌ ಬೆಂಗಳೂರು ಘೋಷಣೆ ಬರೀ ಘೋಷಣೆಯಲ್ಲ ಎಂಬುದನ್ನು ಸಾಬೀತುಪಡಿಸಬೇಕು ಎಂಬುದು ಯುವಕರ ಆಗ್ರಹ.

ಕೈಗಾರಿಕಾ ನೋಡ್‌ ಮಾಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಏಳೆಂಟು ತಿಂಗಳಾದರೂ ಯಾವುದೇ ಕೆಲಸವಾಗಿಲ್ಲ. ಇನ್ನಾದರೂ ಕೈಗಾರಿಕಾ ನೋಡ್‌ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು. ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಈ ಭಾಗದ ಪ್ರತಿಭಾ ಪಲಾಯನ ತಪ್ಪುವಂತೆ ಮಾಡಬೇಕು.

ಸಂದೀಪ ಬಿಡಸಾರಿಯಾ, ಅಧ್ಯಕ್ಷರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ