ಕನ್ನಡಪ್ರಭ ವಾರ್ತೆ ಪಾವಗಡ
ಪ್ರಸಕ್ತ ಸಾಲಿಗೆ ಮಳೆಯ ಅಭಾವದಿಂದ ತಾಲೂಕಿನಾದ್ಯಂತ ಬರಗಾಲದ ಸ್ಥಿತಿ ಎದುರಾಗಿದೆ.ಇದನ್ನು ಸಮರ್ಪಕವಾಗಿ ನಿಭಾಯಿಸಲು ಇಲಾಖಾವಾರು ಅಧಿಕಾರಿಗಳು ಸಜ್ಜಾಗುವಂತೆ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಅವರು ಸಲಹೆ ನೀಡಿದರು.ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಪಟ್ಟಣದ ಎಸ್‌ಎಸ್‌ಕೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ವಿವರ ಪಡೆದರು.
ಮುಂಗಾರು ಮಳೆಯಿಂದ ಹಿಡಿದು ಇದುವರೆವಿಗೂ ವಾಡಿಕೆಯ ಮಳೆಯ ಪ್ರಮಾಣದ ಕೊರತೆಯಿಂದ ತಾಲೂಕಿನಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ ಜಾನುವಾರುಗಳಿಗೆ ಮೇವು ಪೂರೈಕೆ, ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಇತರೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆಗಳನ್ನು ನಿರಂತರವಾಗಿ ಒದಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸೂಚನೆ ನೀಡಿದರು. ತಾಲೂಕಿನ ಬರ ಪರಿಸ್ಥಿತಿ ಕುರಿತು ಈಗಾಗಲೇ ತಹಸೀಲ್ದಾರ್ ತಾಪಂ ಇಒ ಹಾಗೂ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಸಂಗ್ರಹಿಸಲಾಗಿದೆ. ಅಲ್ಲದೇ ಪ್ರಸಕ್ತ ಸಾಲಿಗೆ ಶೇಂಗಾ ಇತರೆ ದ್ವಿದಳ ಬೆಳೆಗಳ ಬಿತ್ತನೆ, ತೋಟಗಾರಿಕೆ ಬೆಳೆಗಳ ಸ್ಥಿತಿ ಗತಿ ಮತ್ತು ರೈತರ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಸೇರಿದಂತೆ ಇತರೆ ವಿವರದ ಬಗ್ಗೆ ದಾಖಲೆ ಸಮೇತ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂಬಂಧ ತಾಲೂಕಿನ ಬರದ ಸ್ಥಿತಿಗತಿಯ ಬಗ್ಗೆ ಸಿಎಂ ಹಾಗೂ ಸರ್ಕಾರದ ಸಚಿವರಿಗೆ ವರದಿ ಸಲ್ಲಿಸಲಿದ್ದೇನೆ. ತ್ವರಿತವಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಬೇಕು. ಜತೆಗೆ ಜಾನುವಾರುಗಳಿಗೆ ಮೇವು ಹಾಗೂ ರೈತರಿಗೆ ಉಪಯುಕ್ತವಾಗುವ ಕೆಲಸವಾಗಬೇಕು.ಈ ನಿಟ್ಟಿನಲ್ಲಿ ನಾವೆಲ್ಲಾ ಸಜ್ಜಾಗಬೇಕು.ಈ ವಿಚಾರದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವಂತೆ ಸೂಚಿಸಿದರು.ಇದೇ ವೇಳೆ ತಹಸೀಲ್ದಾರ್ ವೈ ರವಿ,ತಾಲೂಕು ಪಂಚಾಯಿತಿ ಇಒ ಮಧುಸೂದನ್, ಸರ್ಕಲ್ ಇನ್ಸಪೆಕ್ಟರ್ ಕೆ.ಸುರೇಶ್,ಕೃಷಿ ಹಾಗೂ ತೋಟಗಾರಿಕೆ ಇತರೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.