ರಾಮನಗರ: ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಇಡೀ ದೇಶದಲ್ಲಿರುವ ಹಸ್ತಪ್ರತಿಗಳ ಮಾಹಿತಿಯನ್ನು ಕೇಂದ್ರ ಸರ್ಕಾರವು ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸಂಗ್ರಹಣೆಗೊಳ್ಳುವ ರಾಷ್ಟ್ರೀಯ ಭಂಡಾರವು (National Repository) ದತ್ತಾಂಶದ ಮಾಹಿತಿಯನ್ನು ವಿಶ್ವಕ್ಕೆ ಹಂಚಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಯೋಜನೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ರಾಷ್ಟ್ರಾದಾದ್ಯಂತ ಶತಮಾನಗಳಷ್ಟು ಹಳೆಯ ಕೈಬರಹ ಪಠ್ಯಗಳು, ಹಸ್ತ ಪ್ರತಿಗಳು ಮತ್ತು ದಾಖಲೆಗಳ ಇಂದಿನ ತಂತ್ರಜ್ಞಾನ ಮೂಲಕ ಶಾಶ್ವತವಾಗಿ ಉಳಿಸಲು ಇವುಗಳ ಸಮೀಕ್ಷೆ, ಸಂರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆ ಮೂಲಕ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ರಾಷ್ಟ್ರೀಯ ವೇದಿಕೆಯ ಸಾರ್ವಜನಿಕ ಪ್ರವೇಶವನ್ನು ಒದಗಿಸಿ ಭವಿಷ್ಯದ ಪೀಳಿಗೆಗಾಗಿ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಡಿಜಿಟಲೀಕರಣ ಯೋಜನೆ ಹಮ್ಮಿಕೊಂಡಿದೆ ಎಂದರು.

ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಪ್ರತಿನಿಧಿ ಪ್ರೇಮಪುರಿ ಶಿವಂ ಮಾತನಾಡಿ, ನಮ್ಮ ಬಳಿ ಕೆಲವು ಹಸ್ತ ಪ್ರತಿಗಳು ಇರಬಹುದು ಇದರ ಬಗ್ಗೆ ಕೂಡಲೇ ಪರಿಶೀಲಿಸಿ ಮಾಹಿತಿಯನ್ನು ಪ್ರವಾಸೋದ್ಯಮ ಇಲಾಖೆಗೆ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಚುಂಚನಗಿರಿ ಮಠ ರಾಮನಗರ ಶಾಖೆ ಆಡಳಿತಾಧಿಕಾರಿಗಳು ಹಾಗೂ ಕನಕಪುರ ದೇಗುಲ ಮಠದವರ ತಮ್ಮ ಬಳಿ ಯಾವುದೇ ರೀತಿಯ ಹಸ್ತ ಪ್ರತಿಗಳು ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

ಚುಂಚನಗಿರಿ ಮಠದವರು ಹಸ್ತ ಪ್ರತಿಗಳನ್ನು ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಮಠದಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದಾಗ ಅಪರ ಜಿಲ್ಲಾಧಿಕಾರಿಗಳು ಯಾವುದಾದರೂ ಹಸ್ತ ಪ್ರತಿಗಳು ಲಭ್ಯವಾದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದರು.


ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಮರಳೆ ಗವಿ ಮಠ, ದೇಗುಲ ಮಠ, ಅಬ್ಬೂರು ಮಠ, ವಾದಿರಾಜರ ಮಠ, ಅಪ್ರಮೇಯ ದೇವಾಲಯ, ಹಳೆ ಬ್ರಾಹ್ಮಣರ ಮನೆಗಳು, ಹಳೇ ದೇವಾಲಯಗಳಲ್ಲಿ ಹಸ್ತ ಪ್ರತಿಗಳು ಲಭ್ಯವಿರುವ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು.

ಜಾನಪದ ಲೋಕದ ಕ್ಯೂರೇಟರ್ ರವಿ ಮಾತನಾಡಿ, ಜಾನಪದ ಲೋಕದಲ್ಲಿ 150 ಹೆಚ್ಚು ತಾಳೆಗರಿ ಹಸ್ತಪ್ರತಿಗಳು, 5 ಕಡತಗಳು, ಜಾನಪದ ಲೋಕದ ನಿರ್ಮಾತೃ ನಿವೃತ ಐ.ಎ.ಎಸ್ ಅಧಿಕಾರಿ ನಾಗೇಗೌಡ ಎಚ್. ಎನ್ ಅವರ ಕೈಬರಹದ 12 ದಿನಚರಿ ಡೈರಿಗಳು, ಭೂಮಿಗೆ ಬಂದ ಗಂಧರ್ವ, ಸೋಬಾನೆ ಚಿಕ್ಕಮ್ಮನ ಪದಗಳು, ಪ್ರವಾಸಿ ಕಂಡ ಇಂಡಿಯಾ, ಡೊಡ್ಡ ಮನೆ ಪುಸ್ತಕಗಳು ಲಭ್ಯವಿದೆ ಎಂದು ಹೇಳಿದರು.

2ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಯೋಜನೆ ಕುರಿತು ಅಪರ ಜಿಲ್ಲಾಧಿಕಾರಿ ಚಂದ್ರಯ್ಯರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.