ಪ್ರಿಯಾ ಕೆರ್ವಾಶೆ
ಕನ್ನಡಪ್ರಭ ವಾರ್ತೆ ಬೆಂಗಳೂರುಅಂಧ, ಶ್ರವಣದೋಷವುಳ್ಳ ವಿಶೇಷಚೇತನರೂ ಸಾಮಾನ್ಯ ಪ್ರೇಕ್ಷಕರಂತೆಯೇ ಸಿನಿಮಾ ಆಸ್ವಾದಿಸಬೇಕೆಂಬ ಉದ್ದೇಶದಿಂದ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಹೊರತಂದಿರುವ ಎಡಿಸಿಸಿ ನಿಯಮ ಕನ್ನಡ ನಿರ್ಮಾಪಕರ ಪಾಲಿಗೆ ಗಾಯದ ಮೇಲೆ ಬರೆ ಎಳೆದಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಾರದೆ ವಿಪರೀತ ನಷ್ಟ ಅನುಭವಿಸುತ್ತಿರುವ ಅವರಿಗೆ ಈ ನಿಯಮ ನುಂಗಲೂ ಆಗದ ಉಗುಳಲೂ ಆಗದ ಬಿಸಿತುಪ್ಪದಂತಾಗಿದೆ.
ಏನಿದು ಎಡಿಸಿಸಿ ನಿಯಮ?:ಎಡಿಸಿಸಿ ನಿಯಮ ಅಂದರೆ ಅಂಧ ಹಾಗೂ ಶ್ರವಣ ದೋಷವುಳ್ಳ ವಿಶೇಷಚೇತನರಿಗೆ ಸಿನಿಮಾ ನೋಡಲು ಬೇಕಾದ ವಿಶೇಷ ವ್ಯವಸ್ಥೆ. ದೃಷ್ಟಿ ಸಮಸ್ಯೆ ಇರುವವರು ಚಿತ್ರಮಂದಿರಕ್ಕೆ ಬಂದರೆ ಅವರಿಗೆ ಸಿನಿಮಾ ಡೈಲಾಗ್‌ಗಳು ಕೇಳಿಸುತ್ತಿರುತ್ತವೆ. ಆದರೆ ಕೆಲವೊಮ್ಮೆ ಭಾವನಾತ್ಮಕ ಸನ್ನಿವೇಶಗಳಲ್ಲಿ, ಎದುರು ಪ್ರಾಣಿ ಬಂದಾಗ ಸಂಭಾಷಣೆಗಳು ಇರುವುದಿಲ್ಲ. ಆಗ ಸಿನಿಮಾದಲ್ಲಿ ಏನು ನಡೆಯುತ್ತಿದೆ ಎಂಬುದು ಅರ್ಥವಾಗುವುದಿಲ್ಲ. ಇನ್ನೊಂದೆಡೆ ಶ್ರವಣ ಸಮಸ್ಯೆ ಇರುವವರಿಗೆ ದೃಶ್ಯ ಕಂಡರೂ ಡೈಲಾಗ್ ಕೇಳಿಸದ ಕಾರಣ ಕಥೆಯಲ್ಲೇನಾಗುತ್ತದೆ ಎಂಬುದು ತಿಳಿಯುವುದಿಲ್ಲ. ಎಡಿಸಿಸಿ ಡಿಸ್ಕ್ರಿಪ್ಶನ್‌ನಲ್ಲಿ ಇಡೀ ಸಿನಿಮಾದ ಕಥೆಯ ವಿವರಣೆ ನೀಡಲಾಗುತ್ತದೆ. ವಿಶೇಷಚೇತನರು ಹೆಡ್‌ಫೋನ್ ಮೂಲಕ ಈ ವಿವರಣೆ ಕೇಳಬಹುದು, ಅದೇ ರೀತಿ ಶ್ರವಣ ಸಮಸ್ಯೆ ಇರುವವರಿಗೆ ಅವರು ನೋಡುತ್ತಿರುವ ಸಿನಿಮಾದ ಭಾಷೆಯಲ್ಲಿ ಸಂಪೂರ್ಣ ಸ್ಕ್ರಿಪ್ಟ್ ನೀಡಲಾಗುತ್ತದೆ. ಸಬ್‌ಟೈಟಲ್ ರೀತಿ ಅವರು ಅದನ್ನು ಗ್ರಹಿಸಬಹುದು.
ಹಾಗಿದ್ದರೆ ಸಮಸ್ಯೆ ಏನು?:
ಈಗಾಗಲೇ ಸಿನಿಮಾಗಳು ಸೋತು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವ ನೋವಿನಲ್ಲಿರುವ ನಿರ್ಮಾಪಕರ ಪಾಲಿಗೆ ಈ ನಿಯಮ ಹೊಸ ಹೊರೆಯಾಗಿ ಪರಿಣಮಿಸಿದೆ. ಎಡಿಸಿಸಿ ವ್ಯವಸ್ಥೆ ಅಳವಡಿಕೆಯಿಂದ ಪ್ರತಿ ಸಿನಿಮಾ ನಿರ್ಮಾಪಕರಿಗೂ ಅಂದಾಜು 1 ಲಕ್ಷಕ್ಕೂ ಅಧಿಕ ಹೊರೆ ಬೀಳುತ್ತದೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವ ವಿಶೇಷಚೇತನ ವ್ಯಕ್ತಿಗಳ ಸಂಖ್ಯೆ ಬೆರಳೆಣಿಕೆಯಷ್ಟು. ಅಂದರೆ ನಿರ್ಮಾಪಕ ಹಾಕಿದ 1 ಲಕ್ಷ ರು. ಆತನಿಗೆ ವಾಪಸ್ ಬರಬೇಕೆಂದರೆ 200 ರು. ಟಿಕೆಟ್ ಖರೀದಿಸಿದ 1000 ವಿಕಲಚೇತನರು ಈ ಸಿನಿಮಾ ನೋಡಬೇಕು. (ಟಿಕೆಟ್ ಬೆಲೆ 200 ರು. ಇದ್ದರೆ ನಿರ್ಮಾಪಕನ ಕೈಸೇರುವುದು 100 ರು. ಮಾತ್ರ.) ಕನ್ನಡ ಸಿನಿಮಾಮಟ್ಟಿಗೆ ಇದು ಸಾಧ್ಯವಾಗದ ಮಾತು. ಬೇರೆ ಭಾಷೆಗಳಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ:ನಮ್ಮ ಚಿತ್ರಮಂದಿರಗಳಲ್ಲಿ ಎಡಿಸಿಸಿ ಸೌಲಭ್ಯ ಒದಗಿಸುವಂಥ ಸಾಧನಗಳು ಇನ್ನೂ ಬಂದಿಲ್ಲ. ಇಂಥ ವ್ಯವಸ್ಥೆ ವಿದೇಶಗಳಲ್ಲಷ್ಟೇ ಇವೆ. ಈ ಸಾಧನಗಳು ದುಬಾರಿ, ಮೊದಲೇ ಸಮಸ್ಯೆಯಲ್ಲಿರುವ ಥಿಯೇಟರ್ ಮಾಲೀಕರು ಈ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಿರ್ಮಾಪಕರು ಎಡಿಸಿಸಿ ಮಾಡಿಸಿದರೂ ಅದು ಫಲಾನುಭವಿಗಳನ್ನು ತಲುಪುತ್ತಿಲ್ಲ. ಇದನ್ನು ಮನಗಂಡು ಸದ್ಯಕ್ಕೆ ನಿರ್ಮಾಪಕ ಅವಿನಾಶ್ ಶೆಟ್ಟಿ ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ.
ಸಿನಿಮಾ ಎಡಿಸಿಸಿ ಆ್ಯಪ್:ಅವಿನಾಶ್ ಶೆಟ್ಟಿ ಅವರು ಸಿನಿಮಾ ಎಡಿಸಿಸಿ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಗೂಗಲ್‌ನಲ್ಲಿ www.cinemaadcc.com ಎಂದು ಹುಡುಕಿದರೆ ಈ ಆ್ಯಪ್ ತೆರೆದುಕೊಳ್ಳುತ್ತದೆ. ಇದರಲ್ಲಿರುವ ಸಿನಿಮಾ ಟೈಟಲ್ ಮೇಲೆ ಕ್ಲಿಕ್ ಮಾಡಿ ಸ್ಟಾರ್ಟ್ ಸಿಂಕ್ ಅಂತ ಕೊಟ್ಟು ಬೇಕಾದ ಭಾಷೆ ಆಯ್ಕೆ ಮಾಡಿದರೆ ಸಿನಿಮಾ ಧ್ವನಿ ವಿವರಣೆ ಸಿಗುತ್ತದೆ. ಶ್ರವಣದೋಷ ಇರುವವರಿಗೆ ಉಚಿತವಾಗಿ ಸಂಪೂರ್ಣ ವಿವರಗಳ ಸ್ಕ್ರಿಪ್ಟ್ ಸಿಗುತ್ತದೆ. ಅವರು ಸ್ಟಾಂಡ್‌ನಲ್ಲಿ ಮೊಬೈಲ್ ಸೆಟ್ ಮಾಡಿ ಸಿನಿಮಾ ಜೊತೆಗೆ ಈ ವಿವರಣೆ ನೋಡಬಹುದು. ಎಐ ನೆರವು ಬಳಸಿ ಇದು ಜಗತ್ತಿನ ಎಲ್ಲ ಭಾಷೆಗಳಲ್ಲೂ ಲಭ್ಯವಾಗುವಂತೆ ಅವಿನಾಶ್ ಶೆಟ್ಟಿ ವಿನ್ಯಾಸ ಮಾಡಿದ್ದಾರೆ. ಕನ್ನಡದಲ್ಲಿ ಸದ್ಯ 20 ನಿರ್ಮಾಣ ಸಂಸ್ಥೆಗಳು ಈ ಆ್ಯಪ್ ಮೂಲಕ ಎಡಿಸಿಸಿ ಸೌಲಭ್ಯ ಒದಗಿಸಿವೆ.
ಗುಣಮಟ್ಟದ ಬಗ್ಗೆ ಚಿಂತೆ ಇಲ್ಲ:ಇದೀಗ ಕೇಂದ್ರ ಸರ್ಕಾರ ಎಡಿಸಿಸಿ ನಿಯಮ ಜಾರಿಗೆ ತಂದರೂ ಅದರ ಗುಣಮಟ್ಟ ಪರೀಕ್ಷಿಸುವ ಯಾವುದೇ ಮಾನದಂಡವಿಲ್ಲ. ಇದು ದೃಷ್ಟಿದೋಷ ಮತ್ತು ಶ್ರವಣದೋಷ ಇರುವ ವಿಶೇಷಚೇತನರಿಗೆ ನಿಜಕ್ಕೂ ಉಪಯೋಗವಾಗುವಂತಿದೆಯಾ ಎಂಬುದನ್ನೂ ಗಮನಿಸುವ ವ್ಯವಸ್ಥೆ ಇಲ್ಲ. ಇದು ಕಾರ್ಯಸಾಧುವಾಗಬೇಕಿದ್ದರೆ ಸಿಬಿಎಫ್‌ಸಿ(ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್)ಯಲ್ಲಿ ಪ್ರತಿ ಸಿನಿಮಾವನ್ನೂ ದೃಷ್ಟಿ ಹಾಗೂ ಶ್ರವಣದೋಷವಿರುವವರಿಗೆ ತೋರಿಸಿ ಮೌಲ್ಯಮಾಪನ ಮಾಡಬೇಕಾಗುತ್ತದೆ. ಇದು ಆಗುವ ಹೋಗುವ ಮಾತಲ್ಲ. ಇಂಥ ಅನೇಕ ಕಾರಣಗಳಿಗೆ ಈ ವ್ಯವಸ್ಥೆ ಕೇವಲ ನಾಮ್‌ಕೇ ವಾಸ್ತೆ ಅಷ್ಟೇ ಆಗಿ ಉಳಿದಂತಿದೆ.
ಇಷ್ಟು ದಿನ ಇಲ್ಲದ್ದು ಈಗ ಯಾಕೆ?:ಇದು ಭಾರತ ಮಾತ್ರವಲ್ಲ, ವಿಶ್ವಾದ್ಯಂತ ನಡೆಯುತ್ತಿರುವ ವಿದ್ಯಮಾನ. ಈ ಬಗ್ಗೆ ವಿವರ ನೀಡುವ ನಿರ್ಮಾಪಕ ಅವಿನಾಶ್ ಶೆಟ್ಟಿ, ‘ಕೇಂದ್ರದ ಈ ನೀತಿಯಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿರುವುದನ್ನು ಮನದಟ್ಟು ಮಾಡಿಸಲು ವಿಶೇಷ ಚೇತನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೆವು. ಆಗ ಅವರು ತಿಳಿಸಿದ್ದು, ವಿಶೇಷ ಚೇತನ ವ್ಯಕ್ತಿಗಳಿಗೂ ಎಲ್ಲರೊಂದಿಗೆ ಕೂತು ಸಿನಿಮಾ ಆಸ್ವಾದಿಸುವ ಹಕ್ಕಿದೆ. ಯಾಕೆ ನಮ್ಮನ್ನು ಪ್ರತ್ಯೇಕವಾಗಿ ನೋಡುತ್ತೀರಿ. ಹಾಗೆ ಮಾಡುವುದು ಅಪರಾಧ. ವಿಶೇಷ ಚೇತನರು ಎಂದು ಪರಿಗಣಿಸಿದ ಮೇಲೆ ಅದಕ್ಕೆ ತಕ್ಕ ಸೌಲಭ್ಯವನ್ನು ಸಿನಿಮಾ ತಂಡಗಳು ಮಾಡಬೇಕು ಎಂಬ ವಿಚಾರ’ ಎನ್ನುತ್ತಾರೆ.
-ಕೋಟ್-ನಿರ್ಮಾಪಕರ ನಷ್ಟ ಹೆಚ್ಚಾಗುತ್ತಲೇ ಇದೆ
ಆರಂಭದಿಂದಲೇ ಕೇಂದ್ರ ಹೊಸ ನೀತಿಯ ವಿರುದ್ಧ ದನಿ ಎತ್ತುತ್ತಲೇ ಬಂದಿದ್ದೇವೆ. ಸದ್ಯ ಭಾರತೀಯ ಸಿನಿಮಾರಂಗವೇ ಬಹಳ ಸಂಕಷ್ಟದಲ್ಲಿದೆ. ಕನ್ನಡ ಚಿತ್ರರಂಗ ಸ್ಥಿತಿಯಂತೂ ಹೇಳುವುದೇ ಬೇಡ. ಹೀಗಿರುವಾಗ ಎಡಿಸಿಸಿಯಂಥ ವ್ಯವಸ್ಥೆ ಕಡ್ಡಾಯ ಮಾಡಿದರೆ ನಿರ್ಮಾಪಕನ ನಷ್ಟ ಮತ್ತಷ್ಟು ಏರುತ್ತದೆ. ಕೇಂದ್ರದ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿರುವ ಕಾರಣ ನಾವು ಏನು ಮಾಡಲೂ ಸಾಧ್ಯವಾಗದೇ ಅಸಹಾಯಕರಾಗಿದ್ದೇವೆ.- ಜಿ. ರಾಮಮೂರ್ತಿ, ನಿರ್ಮಾಪಕರ ಸಂಘದ ಅಧ್ಯಕ್ಷ