ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿಭಿನ್ನ ಪ್ರಯೋಗವಾಗಿ ಮೂಡಿಬರುತ್ತಿರುವ ‘ವಾದಿರಾಜ ವಾಲಗ ಮಂಡಳಿ’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ.
ಮಂಗಳೂರು : ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ವಿಭಿನ್ನ ಪ್ರಯೋಗವಾಗಿ ಮೂಡಿಬರುತ್ತಿರುವ ‘ವಾದಿರಾಜ ವಾಲಗ ಮಂಡಳಿ’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ನಡೆಯುತ್ತಿವೆ. ಆಗಸ್ಟ್‌ನಲ್ಲಿ ರಾಜ್ಯವ್ಯಾಪಿ ತೆರೆ ಕಾಣುವ ನಿರೀಕ್ಷೆ ಹೊಂದಲಾಗಿದೆ ಎಂದು ಚಿತ್ರ ನಿರ್ಮಾಪಕ ಡಾ। ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂ.ಎನ್.ಆರ್. ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಯಮಯ ಕನ್ನಡ ಚಲನಚಿತ್ರ ವಿಭಿನ್ನ ಕಥಾಹಂದರ, ವಿಶಿಷ್ಟ ಶೀರ್ಷಿಕೆ ಹಾಗೂ ಕಲಾವಿದರ ಹೊಸ ಗೆಟಪ್ ಪ್ರಮುಖ ಆಕರ್ಷಣೆಗಳಾಗಿವೆ. ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳು ಸದಾ ಸ್ವಾಗತಾರ್ಹವಾಗಿದ್ದು, ‘ವಾದಿರಾಜ ವಾಲಗ ಮಂಡಳಿ’ ಕೂಡ ಅದೇ ದಾರಿಯಲ್ಲಿ ಗಮನ ಸೆಳೆಯುತ್ತಿದೆ. ಹಾಗಾಗಿ ಸಿನಿ ಪ್ರೇಮಿಗಳಲ್ಲಿ ಈಗಾಗಲೇ ಕುತೂಹಲ ಹಾಗೂ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದರು.
50 ದಿನದಲ್ಲಿ ಚಿತ್ರೀಕರಣ ಪೂರ್ಣ:
‘ವರಾಹ ರೂಪಂ’ ಹಾಡಿನ ಖ್ಯಾತಿಯ ಶಶಿರಾಜ್ ಕಾವೂರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಕಥೆ, ಚಿತ್ರಕತೆ ಮತ್ತು ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಈ ಸಿನಿಮಾ ಸುಮಾರು 50 ದಿನ 2 ಹಂತಗಳಲ್ಲಿ ಚಿತ್ರೀಕರಣ ಮುಗಿಸಿದೆ. ಈಗ ಸಂಕಲನ, ಹಿನ್ನೆಲೆ ಸಂಗೀತ ಮತ್ತು ಡಬ್ಬಿಂಗ್ ಕೆಲಸಗಳಲ್ಲಿ ಶಶಿರಾಜ್ ನಿರತರಾಗಿದ್ದಾರೆ.
ಜನಪ್ರಿಯ ಕಲಾವಿದರ ಗಡಣ:
ಚಿತ್ರದಲ್ಲಿ ಕರಾವಳಿಯ ಕಲಾವಿದರ ಸಮೂಹವಿದೆ. ಗುಂಡುಮಾಮ ಖ್ಯಾತಿಯ ನವೀನ್ ಪಡೀಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ತುಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ಹಾಗೂ ಪುಷ್ಪರಾಜ್ ಬೊಳ್ಳಾರ್ ವಿಭಿನ್ನ ಪಾತ್ರಗಳಲ್ಲಿ ಹಾಸ್ಯದ ಹೊನಲನ್ನು ಹರಿಸಲಿದ್ದಾರೆ. ಅರ್ಜುನ್ ವೇದಾಂತ ಮತ್ತು ಅಥರ್ವ ಪ್ರಕಾಶ್ ನಾಯಕ ನಟರಾಗಿ ಅಭಿನಯಿಸಿದ್ದು , ತನ್ವಿ ರಾವ್ ಮತ್ತು ವೇನ್ಯ ರೈ ನಾಯಕಿಯರಾಗಿದ್ದಾರೆ. ಇದಲ್ಲದೆ ಲಕ್ಷ್ಮಣ ಕುಮಾರ್ ಮಲ್ಲೂರು ಅಭಿನಯಿಸಿದ್ದಾರೆ ಎಂದರು.
ವಿಶೇಷ ಕ್ಯಾಮರಾ ಬಳಕೆ:
ಈ ಚಿತ್ರಕ್ಕೆ ‘Arri LF’ ಎನ್ನುವ ವಿಶೇಷವಾದ ಕ್ಯಾಮೆರಾ ಬಳಸಲ್ಪಟ್ಟಿದೆ. ತಮಿಳು ಚಲನಚಿತ್ರದ ಅನುಭವಿ ಛಾಯಾಚಿತ್ರಗಾರ ಎಸ್.ಚಂದ್ರಶೇಖರನ್ ಕ್ಯಾಮೆರದಲ್ಲಿ ಕೈಚಳಕ ತೋರಿಸಿದ್ದಾರೆ. ‘ಸವಾರಿ’ ಚಿತ್ರದ ಮೂಲಕ ಖ್ಯಾತರಾದ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಸ್ಟಂಟ್ ಮಾಸ್ಟರ್ ಟೈಗರ್ ಶಿವು ಸಾಹಸ ನಿರ್ದೇಶನ ಮಾಡಿದ್ದಾರೆ. ಸಾಯಿ ವಿಘ್ನೇಶ್, ಮೈಮ್ ರಾಮದಾಸ್ ಹಾಡುಗಳಿಗೆ ಜೀವ ತುಂಬಲಿದ್ದಾರೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.
ಈ ಸಿನಿಮಾದಲ್ಲಿ ಜಯಪ್ರಕಾಶ್ ತುಂಬೆ ಸಹ ನಿರ್ಮಾಪಕರಾದರೆ, ಸಂತೋಷ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಮತ್ತು ರಾಜೇಶ್ ಕುಡ್ಲ ಮತ್ತು ಕಾರ್ತಿಕ್ ಪ್ರೊಡಕ್ಷನ್ ಮೆನೇಜರ್ ಆಗಿ ಸಹಕರಿಸಿದ್ದಾರೆ.ಚಿತ್ರ ನಿರ್ದೇಶಕ ಶಶಿರಾಜ್ ಕಾವೂರು, ಸಹ ನಿರ್ಮಾಪಕರಾದ ಮೇಘರಾಜ್ ಜೈನ್, ಜಯಪ್ರಕಾಶ್ ತುಂಬೆ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಲಕ್ಷ್ಮಣ ಕುಮಾರ್ ಮಲ್ಲೂರು, ನಾಯಕ ನಟ ಅರ್ಜುನ್ ವೇದಾಂತ, ನಾಯಕಿ ನಟಿ ರಿನ್ಯಾ, ಮೈಮ್ ರಾಮದಾಸ್, ರಾಜೇಶ್ ಕುಡ್ಲ, ಅಕ್ಷತ್ ವಿಟ್ಲ, ಶೋಭರಾಜ್, ಚೇತನ್ ರೈ ಮಾಣಿ, ಗೋಪಿನಾಥ ಭಟ್, ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ, ಭಾಸ್ಕರ ಕೋಟ್ಯಾನ್, ಎಸ್.ಎನ್. ಮನ್ಮಥ, ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಕುಶಾಲಪ್ಪ ಗೌಡ ಇದ್ದರು.
ಆಗಸ್ಟ್‌ನಲ್ಲಿ ಚಿತ್ರ ಭರ್ಜರಿ ಬಿಡುಗಡೆ:
ಕರಾವಳಿ ಭಾಷೆಯ ನೈಜತೆಯನ್ನು ಉಳಿಸಿಕೊಂಡು, ಅದನ್ನು ಎಲ್ಲ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗುವಂತೆ ‘ವಾದಿರಾಜ ವಾಲಗ ಮಂಡಳಿ’ ಹಾಸ್ಯಮಯ ಸಿನಿಮಾ ಚಿತ್ರಿಕರಣಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದ ಮೇಲೆ ಈಗಾಗಲೇ ಸಿನಿಪ್ರೇಮಿಗಳಲ್ಲಿ ಉತ್ತಮ ನಿರೀಕ್ಷೆ ನಿರ್ಮಾಣವಾಗಿದ್ದು, ಬಿಡುಗಡೆಯ ನಂತರ ಉತ್ತಮ ಪ್ರತಿಕ್ರಿಯೆ ಸಿಗುವ ವಿಶ್ವಾಸ ಚಿತ್ರತಂಡಕ್ಕಿದೆ.
ತಮಿಳು, ತೆಲುಗು, ಮಲಯಾಳಂಗೂ ಡಬ್:
‘ಈ ಚಿತ್ರದ ಕಥೆ ನನಗೆ ತುಂಬ ಇಷ್ಟವಾಯಿತು’, ನಿರ್ದೇಶಕರು ಕಥೆ ಹೇಳುತ್ತಿದ್ದಂತೆಯೇ ಒಪ್ಪಿಗೆ ನೀಡಿದೆ. ಕರಾವಳಿ ಕನ್ನಡದ ಸೊಗಡಿದ್ದರೂ, ರಾಜ್ಯದ ಎಲ್ಲ ಭಾಗದ ಪ್ರೇಕ್ಷಕರಿಗೂ ಈ ಸಿನಿಮಾ ತಲುಪುತ್ತದೆ ಎಂಬ ವಿಶ್ವಾಸ ಇದೆ. ಚಿತ್ರವು ಹಾಸ್ಯ, ಭಾವನಾತ್ಮಕ ಅಂಶಗಳು ಮತ್ತು ಸಾಮಾಜಿಕ ಹಿನ್ನೆಲೆ ಒಟ್ಟುಗೂಡಿಸಿ ಮನೋರಂಜನಾ ಪ್ಯಾಕೇಜ್ ಆಗಿದೆ. ಈ ಸಿನಿಮಾವನ್ನು ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಚನೆಯೂ ಇದೆ ಎಂದು ರಾಜೇಂದ್ರ ಕುಮಾರ್ ಹೇಳಿದರು.
