ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆ ಜಾರಿಗೆ ತಂದಿದ್ದ 33 ಕಾರ್ಯಕ್ರಮಗಳನ್ನು ಈಗಿನ ಬಿಜೆಪಿ ನೇತೃತ್ವದ ಸರ್ಕಾರ ರದ್ದು ಮಾಡಿದೆ. ಈಚೆಗೆ ಮನರೇಗಾ ಯೋಜನೆಯನ್ನು ರದ್ದು ಮಾಡಿ ಗ್ರಾಪಂಗಳ ಅಧಿಕಾರವನ್ನು ಸಂಪೂರ್ಣವಾಗಿ ಕಿತ್ತುಕೊಂಡಿದೆ.

ಹುಬ್ಬಳ್ಳಿ:

ದೇಶದ ಇತಿಹಾಸದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರವನ್ನೇ ನಾನು ನೋಡಿಲ್ಲ. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧೀಜಿ ಹೆಸರನ್ನು ಇತಿಹಾಸದಿಂದ ಅಳಿಸಿ ಹಾಕುವ ಹುನ್ನಾರ ನಡೆಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ ಸೊರಕೆ ಆರೋಪಿಸಿದರು.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಮಹಾನಗರ ಹಾಗೂ ಗ್ರಾಮೀಣ ಜಿಲ್ಲೆಗಳ ಪ್ರಚಾರ ಸಮಿತಿ ಸದಸ್ಯರಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದ ವೇಳೆ ಜಾರಿಗೆ ತಂದಿದ್ದ 33 ಕಾರ್ಯಕ್ರಮಗಳನ್ನು ಈಗಿನ ಬಿಜೆಪಿ ನೇತೃತ್ವದ ಸರ್ಕಾರ ರದ್ದು ಮಾಡಿದೆ. ಈಚೆಗೆ ಮನರೇಗಾ ಯೋಜನೆಯನ್ನು ರದ್ದು ಮಾಡಿ ಗ್ರಾಪಂಗಳ ಅಧಿಕಾರವನ್ನು ಸಂಪೂರ್ಣವಾಗಿ ಕಿತ್ತುಕೊಂಡು ಗ್ರಾಮಗಳ ಅಭಿವೃದ್ಧಿಯನ್ನು ದೆಹಲಿಯ ಕಾರ್ಪೋರೇಟ್ ಕೈಗೆ ನೀಡಿದ್ದಾರೆ ಎಂದು ಆರೋಪಿಸಿದರು.

ಪ್ರಚಾರದಲ್ಲಿ ನಾವು ಹಿಂದೆ:

ರಾಜ್ಯದಲ್ಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಆದರೆ, ಪ್ರಚಾರ ಪಡೆಯುವಲ್ಲಿ ಹಿಂದೆ ಬಿದ್ದಿದ್ದೇವೆ. ಆದರೆ, ಪ್ರತಿಪಕ್ಷದವರು ಶೇ. 5ರಷ್ಟು ಕೆಲಸ ಮಾಡಿ ಶೇ. 95ರಷ್ಟು ಪ್ರಚಾರ ಪಡೆಯುತ್ತಾರೆ. ಈ ಕುರಿತು ಕಾರ್ಯಕರ್ತರು ಜಾಗೃತಿ ಹೊಂದಬೇಕಿದೆ ಎಂದರು.

ಲಕ್ಷ ಸದಸ್ಯರ ಗುರಿ:

ರಾಜ್ಯದಲ್ಲಿ ಪ್ರಚಾರ ಸಮಿತಿ ಅಡಿಯಲ್ಲಿ ಒಂದು ಲಕ್ಷ ಸದಸ್ಯರಾಗಿಸುವ ಗುರಿ ಹೊಂದಲಾಗಿದೆ. ಈ ಕುರಿತು ಕಾರ್ಯಕರ್ತರು ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು. ಎಲ್ಲರೂ ಒಗ್ಗೂಡಿದಾಗ ಮಾತ್ರ ಜನದ್ರೋಹಿ ಪಕ್ಷಗಳನ್ನು ಅಧಿಕಾರದಿಂದ ದೂರವಿರಿಸಲು ಸಾಧ್ಯ ಎಂದು ಹೇಳಿದರು.ಕಾರ್ಯಾಗಾರ ಉದ್ಘಾಟಿಸಿದ ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ಜನರ ಸಮಸ್ಯೆಗೆ ಸ್ಪಂದಿಸುವ ಪಕ್ಷ ಕಾಂಗ್ರೆಸ್‌. ದೇಶದಲ್ಲಿ ಸುಖ, ಶಾಂತಿ ನೆಲೆಸಿ ಜನರ ಕಲ್ಯಾಣ ಸಾಧ್ಯವಾಗಿರುವುದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ದೇಶದಲ್ಲಿ ಸುದೀರ್ಘ ಆಡಳಿತದಲ್ಲಿ ಸೋಲು-ಗೆಲವು ಕಂಡಿದ್ದೇವೆ. ಸೋತಾಗ ಕುಗ್ಗಿದೇ ಗೆದ್ದಾಗ ಹಿಗ್ಗದೇ ಆಡಳಿತ ನಡೆಸಿದ ಪಕ್ಷ ನಮ್ಮದು ಎಂದರು.

ಭಟ್ಕಳ ಮಾಜಿ ಶಾಸಕ ಜೆ.ಡಿ. ನಾಯ್ಕ, ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಪ್ರಚಾರ ಸಮಿತಿ ಸಹ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ, ಕೆಪಿಸಿಸಿ ಮುಖ್ಯ ಸಂಯೋಜಕ ಸುಧೀರಕುಮಾರ ಮುರೊಳ್ಳಿ, ಸಮಿತಿ ಉಪಾಧ್ಯಕ್ಷ ಅಬ್ದುಲ್ ಮುನೀರ್ ಮಾತನಾಡಿದರು. ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ ಸನದಿ, ಮುಖಂಡರಾದ ಸದಾನಂದ ಡಂಗನವರ, ಮೋಹನ ಲಿಂಬಿಕಾಯಿ, ರಾಜಾದೇಸಾಯಿ, ಚಂದ್ರಶೇಖರ ಜುಟ್ಟಲ್, ಮೋಹನ ಹಿರೇಮನಿ, ಸುನಿತಾ ಹುರಕಡ್ಲಿ, ಜ್ಯೊತಿ ಪಾಟೀಲ, ಸುರೇಖಾ ಸೇರಿದಂತೆ ಹಲವರಿದ್ದರು.