ಮನರೇಗಾ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ಇದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವು ಸುಧಾರಣೆಗಳನ್ನು ತಂದು ‘ವಿಕಸಿತ ಭಾರತ’ದ ಪರಿಕಲ್ಪನೆಯಲ್ಲಿ ‘ವಿಬಿ ಜಿ ರಾಮ್ ಜಿ’ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನರೇಗಾ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು. ಇದಕ್ಕೆಲ್ಲಾ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವು ಸುಧಾರಣೆಗಳನ್ನು ತಂದು ‘ವಿಕಸಿತ ಭಾರತ’ದ ಪರಿಕಲ್ಪನೆಯಲ್ಲಿ ‘ವಿಬಿ ಜಿ ರಾಮ್ ಜಿ’ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.ಗುರುವಾರ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರೊಂದಿಗೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಎಂದರೆ ಕಮಿಷನ್, ಭ್ರಷ್ಟಾಚಾರ ಮತ್ತು ಕೆಟ್ಟ ಶಾಸನದ ಗ್ಯಾರಂಟಿ ಕೊಡುವ ಪಕ್ಷ. ಮನರೇಗಾದಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಡೆದ ಭ್ರಷ್ಟಾಚಾರವು ದೇಶ-ವಿದೇಶಗಳಲ್ಲಿ ಸುದ್ದಿಯಾಗಿತ್ತು. ಮನರೇಗಾ ಹಣವನ್ನು ಅಕ್ರಮವಾಗಿ ಪಡೆಯುವ ಉದ್ದೇಶದಿಂದ ಪುರುಷರು ಸೀರೆ ಧರಿಸಿ ಮಹಿಳೆಯರ ಸೋಗಿನಲ್ಲಿ ಫೋಟೋ ತೆಗೆಸಿಕೊಂಡಿದ್ದರು ಎಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಫೋಟೋವನ್ನು ಪ್ರದರ್ಶಿಸಿದರು.
ಇಂತಹ ನೂರಾರು ಭ್ರಷ್ಟಾಚಾರ ಪ್ರಕರಣಗಳು ಸೋಶಿಯಲ್ ಆಡಿಟ್ ಮುಖಾಂತರ ಬಹಿರಂಗವಾಗಿವೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ₹107.78 ಕೋಟಿ ವಸೂಲಿಗೆ ಅವಕಾಶವಿದ್ದರೂ 3,551 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಲ್ಲಿ ಯಾವುದೇ ಪಾರದರ್ಶಕತೆ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮನರೇಗಾದಲ್ಲಿ ವ್ಯಾಪಕ ಅವ್ಯವಹಾರ:
ಸಿಎಜಿ ವರದಿಯಲ್ಲಿ ಲೋಕಪಾಲರು ₹24.12 ಕೋಟಿ ವಸೂಲಿಗೆ ಸೂಚಿಸಿದ್ದರು. ಆದರೆ, ರಾಜ್ಯ ಸರ್ಕಾರವು ।2.47 ಕೋಟಿಗಳನ್ನು ಮಾತ್ರ ವಸೂಲಿ ಮಾಡಿದೆ. ಕಲಬುರಗಿ ಜಿಲ್ಲೆಯಲ್ಲಿ ಮನರೇಗಾ ಯೋಜನೆಯಲ್ಲಿ ಅವ್ಯವಹಾರದ ದೂರು ಬಂದಿತ್ತು. ಈ ಸಂಬಂಧ ಕೇಂದ್ರದಿಂದ ಒಂದು ತಂಡವನ್ನು ಅಲ್ಲಿಗೆ ಕಳುಹಿಸಲಾಗಿತ್ತು. 2024-25ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಐದು ಗ್ರಾಮ ಪಂಚಾಯಿತಿಗಳಲ್ಲಿ 21 ಕೆಲಸಗಳನ್ನು ಮನುಷ್ಯರ ಬದಲಾಗಿ ಯಂತ್ರದಿಂದ ಮಾಡಿಸಲಾಗಿತ್ತು. ಆದರೆ, ಮನುಷ್ಯರದಿಂದ ಮಾಡಿಸಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿರುವುದು ಪತ್ತೆಯಾಗಿತ್ತು. ಒಂದೇ ಕಾಮಗಾರಿಯನ್ನು ವಿಭಜಿಸಿ ಪ್ರತ್ಯೇಕ ಕಾಮಗಾರಿ ಎಂದು ತೋರಿಸಿ ಹಣ ಪಡೆದಿದ್ದಾರೆ. ದಾಖಲೆಯಲ್ಲಿ ಮಾತ್ರ ಕಾಮಗಾರಿ ತೋರಿಸಿ ಹಣ ಲೂಟಿ ಹೊಡೆದ ಅನೇಕ ಉದಾಹರಣೆಗಳಿವೆ ಎಂದು ಚೌಹಾಣ್ ದಾಖಲೆಗಳನ್ನು ಪ್ರದರ್ಶಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಉಪಸ್ಥಿತರಿದ್ದರು.ಎನ್‌ಡಿಎ ಅವಧಿಯಲ್ಲಿ ಹೆಚ್ಚಿನ ಅನುದಾನ:
ಯುಪಿಎ ಸರ್ಕಾರವು 2006-07ರಿಂದ 2013-14 ವರೆಗೆ ಕರ್ನಾಟಕಕ್ಕೆ ಮನರೇಗಾ ಯೋಜನೆಯಡಿ 8,739.32 ಕೋಟಿ ರು. ಬಿಡುಗಡೆ ಮಾಡಿತ್ತು. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 48,549.82 ಕೋಟಿ ರು.ನೀಡಿದೆ. ಯುಪಿಎ ಆಡಳಿತದಲ್ಲಿ ಮನರೇಗಾ ಯೋಜನೆಯಡಿ ಇಡೀ ದೇಶಕ್ಕೆ 2.13 ಲಕ್ಷ ಕೋಟಿ ರು.ಕೊಟ್ಟಿದ್ದರೆ, ಎನ್‌ಡಿಎ ಆಡಳಿತದಲ್ಲಿ 8.48 ಲಕ್ಷ ಕೋಟಿ ರು.ನೀಡಲಾಗಿದೆ. ಎನ್‌ಡಿಎ ಆಡಳಿತದಲ್ಲಿ ಅನುದಾನ ಹಲವು ಪಟ್ಟು ಹೆಚ್ಚಳವಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.ಕಾಂಗ್ರೆಸ್ ನಾಯಕರೇ ಭ್ರಷ್ಟಾಚಾರದ ಬಗ್ಗೆ ಮಾತು:ಯುಪಿಎ ಅವಧಿಯಲ್ಲಿ ಮನರೇಗಾ ಯೋಜನೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿತ್ತು. ಈ ಬಗ್ಗೆ ಬಹಳ ಚರ್ಚೆ ಹಾಗೂ ವಿಮರ್ಶೆ ಮಾಡಿದ ಬಳಿಕ ಯೋಜನೆಯಲ್ಲಿ ಕೆಲವು ಸುಧಾರಣೆಗಳನ್ನು ತಂದಿದ್ದೇವೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಈ ಯೋಜನೆಯ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು. ನಕಲಿ ಜಾಬ್ ಕಾರ್ಡ್ ಬಗ್ಗೆ ಸೋನಿಯಾ ಗಾಂಧಿ ಅವರೇ ಹೇಳಿದ್ದರು. ಇವೆಲ್ಲವನ್ನೂ ಮನಗಂಡು ಪ್ರಧಾನಿ ಮೋದಿ ನೇತೃತ್ವದಲ್ಲಿ ‘ವಿಕಸಿತ ಭಾರತ ಜಿ ರಾಮ್ ಜಿ ಯೋಜನೆ’ಯನ್ನು ಜಾರಿಗೊಳಿಸಿದೆ. ಆದರೆ, ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹರಿಹಾಯ್ದರು.ವಿಬಿಜಿ ರಾಮ್ ಜಿ ಅಡಿ 125 ದಿನಗಳ ಉದ್ಯೋಗ ಗ್ಯಾರಂಟಿ:
ಮನರೇಗಾದಲ್ಲಿ 100 ದಿನಗಳ ಉದ್ಯೋಗ ಗ್ಯಾರಂಟಿ ಇದ್ದರೆ, ವಿಬಿಜಿ ರಾಮ್ ಜಿ ಅಡಿ 125 ದಿನಗಳ ಉದ್ಯೋಗ ಗ್ಯಾರಂಟಿ ಕೊಡಲಾಗಿದೆ. ಸಕಾಲದಲ್ಲಿ ಕೂಲಿ ಪಾವತಿಗೆ ಕ್ರಮ ಕೈಗೊಂಡಿದ್ದೇವೆ. ವಿಕಸಿತ ಭಾರತಕ್ಕಾಗಿ ವಿಕಸಿತ ಗ್ರಾಮಗಳ ಅಗತ್ಯವಿದೆ. ಪಿಎಂ ಗತಿಶಕ್ತಿ ಮತ್ತು ತಂತ್ರಜ್ಞಾನ ಬಳಸಿಕೊಂಡು ಗ್ರಾಮ ಪಂಚಾಯಿತಿಗಳು ಯೋಜನೆ ಮಾಡಲಿವೆ. ಗ್ರಾಮ ಪಂಚಾಯಿತಿಯ ಅಧಿಕಾರವನ್ನು ಹೆಚ್ಚಿಸಿದ್ದೇವೆ. ವಿಕಸಿತ ಗ್ರಾಮ ಪಂಚಾಯಿತಿಯ ಯೋಜನೆಯನ್ನು ಗ್ರಾಮಸಭೆಯಲ್ಲಿ ರೂಪಿಸಲಾಗುತ್ತದೆ ಎಂದು ಸಚಿವರು ಹೇಳಿದರು.ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಾಗಾರಕ್ಕೆ ಚೌಹಾಣ್ ಸಲಹೆ:
ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಅಜೀವಿಕಾ ಮಿಷನ್(ಗ್ರಾಮೀಣ) ಕಾಯ್ದೆ(ವಿಬಿಜಿ ರಾಮ್ ಜಿ) ಕುರಿತು ಗುರುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ-ಜೆಡಿಎಸ್ ವಿಶೇಷ ಸಭೆ ಜರುಗಿತು.ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿವಿಜಿ ರಾಮ್ ಜಿ ಕುರಿತು ಕಾರ್ಯಾಗಾರ ಮಾಡಬೇಕು. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಮಾಡುತ್ತಿರುವ ಅಪಪ್ರಚಾರಕ್ಕೆ ತಿರುಗೇಟು ನೀಡಬೇಕು. ಗ್ರಾಪಂ ಮಟ್ಟದಲ್ಲೂ ವಿಭಿನ್ನ ಕಾರ್ಯಕ್ರಮ ರೂಪಿಸಿ ವಿಬಿ ಜಿ ರಾಮ್ ಜಿ ಬಗ್ಗೆ ತಿಳಿಸುವಂತೆ ಚೌಹಾಣ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಶೇಷ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿ ಬಿಜೆಪಿ-ಜೆಡಿಎಸ್ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಪಕ್ಷದ ಮುಖಂಡರು ಹಾಜರಿದ್ದರು.ನರೇಗಾ ಕುರಿತು ರಾಜ್ಯಪಾಲರಿಂದ ಸುಳ್ಳು ಹೇಳಿಸಲೆತ್ನ:
‘ವಿಬಿ ಜಿ ರಾಮ್ ಜಿ’ ಯೋಜನೆ ಕುರಿತು ರಾಜ್ಯಪಾಲರ ಮುಖಾಂತರ ಸುಳ್ಳು ಹೇಳಿಸಲು ಬಯಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ತನ್ನ ವೈಫಲ್ಯ ಹಾಗೂ ಅಸಫಲತೆ ಮುಚ್ಚಿಡಲು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಆಕ್ರೋಶ ವ್ಯಕ್ತಡಿಸಿದ್ದಾರೆ.ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಸುಳ್ಳಿನ ಯಂತ್ರ ಮತ್ತು ಭ್ರಮೆಯ ಅಂಗಡಿಯಾಗಿದೆ. ವಿಧಾನಸಭೆಯಲ್ಲಿ ಇಂದು ಪ್ರಜಾಸತ್ಮಾತ್ಮಕ ಮೌಲ್ಯಗಳ ಕೊಲೆಯಾಗಿದೆ. ಸಂವಿಧಾನಕ್ಕೂ ಧಕ್ಕೆಯಾಗಿದೆ. ರಾಜ್ಯಪಾಲರ ಭಾಷಣದಲ್ಲಿ ಸುಳ್ಳುಗಳಿದ್ದವು. ಹೀಗಾಗಿ ರಾಜ್ಯಪಾಲರು ಅದನ್ನು ಓದಿಲ್ಲ ಎಂದು ರಾಜ್ಯಪಾಲರ ನಡೆಯನ್ನು ಸಮರ್ಥಿಸಿದರು.ಕಾಂಗ್ರೆಸ್‌ನಿಂದ ಬಾಪು ಸಿದ್ಧಾಂತಗಳ ಹತ್ಯೆ:ಕಾಂಗ್ರೆಸ್ ಪಕ್ಷವು ತನ್ನ ಯೋಚನೆ, ಚಿಂತನೆ, ಆದರ್ಶವನ್ನು ಮರೆತಿದೆ. ದೇಶದ ವಿಕಾಸಕ್ಕೂ, ಕಾಂಗ್ರೆಸ್ಸಿಗೂ ಏನೂ ಸಂಬಂಧವಿಲ್ಲ. ಕರ್ನಾಟಕದಲ್ಲಿ ಅಭಿವೃದ್ಧಿ ಸ್ಥಗಿತವಾಗಿದೆ. ಜನಕಲ್ಯಾಣದ ಚಿಂತನೆಯ ಕಡೆಗೂ ಕಾಂಗ್ರೆಸ್ ಗಮನ ಕೊಡುತ್ತಿಲ್ಲ. ಮಹಾತ್ಮ ಗಾಂಧೀಜಿ ತಮಗೆ ಆದರ್ಶ ಎನ್ನುವ ಕಾಂಗ್ರೆಸ್ ಪಕ್ಷವು, ಬಾಪು ಅವರ ಸಿದ್ಧಾಂತವನ್ನು ಹತ್ಯೆ ಮಾಡುವ ಪಾಪ ಮಾಡಿದೆ. ಸುಳ್ಳನ್ನು ತನ್ನ ಜೊತೆ ಇರಿಸಿಕೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಎಂಜಿನ್ ಇಲ್ಲದ ಸರ್ಕಾರಕ್ಕೆ ಡಬಲ್ ಸ್ಟೇರಿಂಗ್:ಮನರೇಗಾ ಹೆಸರು ಬದಲಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅನೇಕ ಯೋಜನೆಗಳು ಬರುತ್ತವೆ. ಹೆಸರು ಬದಲಾದರೆ ಸಮಸ್ಯೆ ಏನು?. ಯುಪಿಎ ಸರ್ಕಾರದ ಅವಧಿಯಲ್ಲಿ ಅನೇಕ ಯೋಜನೆಗಳ ಹೆಸರನ್ನು ಬದಲಿಸಲಾಗಿದೆ. ಅವರು ಬದಲಿಸಬಹುದು, ನಾವು ಬದಲಿಸಬಾರದಾ?. ‘ಸಿದ್ಧರಾಮಯ್ಯನವರೇ, ಇದು ಪಾರ್ಲಿಮೆಂಟಿನಲ್ಲಿ ಮಾಡಿರುವ ಕಾಯ್ದೆ. 125 ದಿನಗಳ ಉದ್ಯೋಗ ಗ್ಯಾರಂಟಿ ನೀಡಿದ್ದೇವೆ’. ಡಿ.ಕೆ.ಶಿವಕುಮಾರ್ ಅವರ ಕಾರಣದಿಂದ ಸಿದ್ಧರಾಮಯ್ಯ ಅವರ ಮನಸ್ಥಿತಿ ಹೀಗಾಗಿರಬಹುದು. ಇಂಜಿನ್ ಇಲ್ಲದ ಈ ಸರ್ಕಾರದಲ್ಲಿ ಎರಡು ಸ್ಟೇರಿಂಗ್‌ಗಳಿವೆ ಎಂದು ಮುಖ್ಯಮಂತ್ರಿ ಖುರ್ಚಿ ಕಾಳಗದ ಬಗ್ಗೆ ವ್ಯಂಗ್ಯವಾಡಿದರು.