ಸಾರಾಂಶ
ಮುಂದಿನ ವರ್ಷದ ಫೆಬ್ರವರಿ 11ರಿಂದ 14 ರವರೆಗೆ ‘ಇನ್ವೆಸ್ಟ್ ಕರ್ನಾಟಕ -2025’ ಜಾಗತಿಕ ಹೂಡಿಕೆ ಸಮಾವೇಶ ನಡೆಯಲಿದ್ದು, ಕರ್ನಾಟಕವು ಹೂಡಿಕೆಗೆ ಅತ್ಯುತ್ತಮ ತಾಣ ಎಂಬುದನ್ನು ವಿಶ್ವಕ್ಕೆ ಮನದಟ್ಟು ಮಾಡುವ ರೀತಿಯಲ್ಲಿ ಸಮಾವೇಶವನ್ನು ಬಿಂಬಿಸಲಾಗುವುದು - ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು : ಮುಂದಿನ ವರ್ಷದ ಫೆಬ್ರವರಿ 11ರಿಂದ 14 ರವರೆಗೆ ‘ಇನ್ವೆಸ್ಟ್ ಕರ್ನಾಟಕ -2025’ ಜಾಗತಿಕ ಹೂಡಿಕೆ ಸಮಾವೇಶ ನಡೆಯಲಿದ್ದು, ಕರ್ನಾಟಕವು ಹೂಡಿಕೆಗೆ ಅತ್ಯುತ್ತಮ ತಾಣ ಎಂಬುದನ್ನು ವಿಶ್ವಕ್ಕೆ ಮನದಟ್ಟು ಮಾಡುವ ರೀತಿಯಲ್ಲಿ ಸಮಾವೇಶವನ್ನು ಬಿಂಬಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ `ಇನ್ವೆಸ್ಟ್ ಕರ್ನಾಟಕ-2025’ ಕುರಿತ ಉನ್ನತ ಅಧಿಕಾರಿಗಳು ಹಾಗೂ ಕೈಗಾರಿಕಾ ಸಂಘಗಳ ಪ್ರತಿನಿಧಿಗಳ ಜತೆ ಅವರು ಸಭೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶವು ಬಂಡವಾಳ ಹೂಡಿಕೆ, ಕೈಗಾರಿಕಾ ಕ್ಷೇತ್ರದ ಬೆಳವಣಿಗೆ, ಆರ್ಥಿಕ ಅಭಿವೃದ್ಧಿ ಹೀಗೆ ಹಲವು ದೃಷ್ಟಿಗಳಿಂದ ಮಹತ್ವದ್ದಾಗಿದೆ. ಸಮಾವೇಶದಲ್ಲಿ ದೇಶ-ವಿದೇಶಗಳ 5 ಸಾವಿರ ಪ್ರತಿನಿಧಿಗಳು ಮತ್ತು ತಾಂತ್ರಿಕ ಪರಿಣತರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ, ಮಹಿಳಾ ಉದ್ಯಮಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಫೆ.11ರಂದು ಉದ್ಘಾಟನೆ:
2025ರ ಫೆ.11ರ ಸಂಜೆ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಫೆ.12 ಮತ್ತು 13ರಂದು ಸಂಪೂರ್ಣವಾಗಿ ಎರಡು ದಿನ ಗಂಭೀರ ಚರ್ಚೆಗಳು ನಡೆಯಲಿವೆ. ಫೆ.14ರಂದು ಸಮಾವೇಶದ ಸಮಾರೋಪ ನಿಗದಿಯಾಗಿದೆ. ಸಮಾವೇಶ ಯಶಸ್ವಿಗೊಳಿಸಲು ಈಗಾಗಲೇ ಅಮೆರಿಕ ಮತ್ತು ಜಪಾನಿನಲ್ಲಿ ರೋಡ್ ಶೋ ನಡೆಸಲಾಗಿದೆ. ಸದ್ಯದಲ್ಲೇ ಯೂರೋಪಿನಲ್ಲೂ ರೋಡ್-ಶೋ ನಡೆಯಲಿದೆ ಎಂದರು.
ಇನ್ನು ಆಹ್ವಾನಿತರಿಗೆ ಸುಗಮ ಸಂಚಾರ, ವಸತಿ ಮತ್ತು ಆತಿಥ್ಯ, ಕಾನೂನು ಮತ್ತು ಸುವ್ಯವಸ್ಥೆ ಯಾವುದರಲ್ಲೂ ಕಿಂಚಿತ್ತೂ ಲೋಪವಾಗದಂತೆ ಆಯಾಯ ಇಲಾಖೆಗಳು ನೋಡಿಕೊಳ್ಳಬೇಕು. ಈ ಸಮಾವೇಶದ ಮೂಲಕ ರಾಜ್ಯದ ವರ್ಚಸ್ಸು ಹೆಚ್ಚಾಗುವಂತೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಎಂ.ಬಿ.ಪಾಟೀಲ್ ತಿಳಿಸಿದರು.
ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.
ಪ್ರವಾಸೋದ್ಯಮಕ್ಕೆ ಉತ್ತೇಜನ
ಆಮಂತ್ರಿತ ಉದ್ಯಮಿಗಳು ಬಯಸಿದರೆ ರಾಜ್ಯದ ಖ್ಯಾತ ಪ್ರವಾಸಿ ತಾಣಗಳಿಗೆ ಅವರನ್ನು ಕರೆದೊಯ್ಯಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಪ್ರವಾಸೋದ್ಯಮ ಇಲಾಖೆಗೆ ಸೂಚಿಸಲಾಗಿದೆ. ತನ್ಮೂಲಕ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲು ಪ್ರಯತ್ನಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.