ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾರ್ವಜನಿಕರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹಣಕಾಸು ಸಲಹೆಗಾರ ಕೆ.ಆನಂದ್ ಹೇಳಿದರು.ರೋಟರಿ ಕ್ಲಬ್ ಶಿವಮೊಗ್ಗ ಪೂರ್ವದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಣಕಾಸು ವಿಷಯ ಕುರಿತು ಉಪನ್ಯಾಸದಲ್ಲಿ ಮಾತನಾಡಿ, ಮೊದಲು ಜಾಲತಾಣಗಳಲ್ಲಿ ಹಣವನ್ನು ತೊಡಗಿಸಬಾರದು. ಯಾವುದೇ ಷೇರುಗಳ ಮೇಲೆ ಹಣ ಹೂಡಿಕೆ ಮಾಡುವಾಗ ಅಲ್ಪ ಮೊತ್ತ ತೊಡಗಿಸಬೇಕು. ಯಾವುದೇ ಅನಧಿಕೃತ ಸಂಸ್ಥೆಗಳಲ್ಲಿ ಹಣವನ್ನ ತೊಡಗಿಸಬಾರದು ಎಂದು ತಿಳಿಸಿದರು.
ಹಣ ತೊಡಗಿಸುವ ಮುನ್ನ ಕೆಲವೊಂದು ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಬೇಕು. ಷೇರುಗಳ ಮೇಲೆ ತೊಡಗಿಸುವಾಗ ಕಂಪನಿಯ ವಿವರಗಳನ್ನು ಪಡೆದು ಹಾಗೂ ಆರ್‌ಡಿಎ ರೆಗ್ಯುಲೇಶನ್ ಆ್ಯಕ್ಟ್ ಕಂಪನಿ ಹೊಂದಿದೆಯಾ ಎಂಬ ಅಂಶವನ್ನು ತಿಳಿದುಕೊಳ್ಳಬೇಕು. ನಂತರ ಹಣ ಹೂಡಿಕೆ ಮಾಡಬೇಕು. ಬರೀ ಲಾಭಕ್ಕೋಸ್ಕರ ಹಣವನ್ನು ತೊಡಗಿಸಿದರೆ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದರು.ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್ ಕುಮಾರ್ ಮಾತನಾಡಿ, ಷೇರುಗಳು ಮತ್ತು ಮ್ಯೂಚುಯಲ್ ಫಂಡ್‌ನಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಹೆಚ್ಚಿನ ಮಾಹಿತಿ ಹೊಂದಬೇಕು. ಕಷ್ಟಪಟ್ಟು ದುಡಿದ ಹಣದ ಬಗ್ಗೆ ಗಮನ ಇರಬೇಕು. ಹೆಚ್ಚು ಬಡ್ಡಿಗೋಸ್ಕರ ಹಣವನ್ನು ಬೇರೆಯವರಿಗೆ ಸಾಲ ನೀಡಿದರೆ ಹಣ ವಾಪಸ್ ಸಿಗುವ ಬಗ್ಗೆ ಯಾವುದೇ ಖಾತರಿ ಇರುವುದಿಲ್ಲ ಎಂದು ತಿಳಿಸಿದರು.
ಹಣಕಾಸು ಸಲಹೆಗಾರ ಎಸ್.ಎನ್.ಸಂಜೀವ್ ಮಾತನಾಡಿ, ಯಾವುದೇ ಮ್ಯೂಚುಯಲ್ ಫಂಡ್, ಷೇರು ಹೂಡಿಕೆ ಮಾಡುವುದು ಹಾಗೂ ಸಾಲ ಕೊಡುವ ಸಂದರ್ಭಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಅಧಿಕೃತ ಸಂಸ್ಥೆಗಳಲ್ಲಿ ಹಣವನ್ನು ತೊಡಗಿಸುವುದು ಸೂಕ್ತ ಎಂದು ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಹಕಾರ್ಯದರ್ಶಿ ಡಾ. ಎಂ.ಎಸ್.ಅರುಣ್ ಮಾತನಾಡಿ, ಕಷ್ಟಪಟ್ಟು ದುಡಿದ ಹಣವನ್ನು ತೊಡಗಿಸುವಾಗ ಜಾಗೃತ ಆಗಿರುವ ಜೊತೆಗೆ ಹಣಕಾಸು ಸಲಹೆಗಾರರನ್ನು ಭೇಟಿ ಮಾಡಿ ಸಲಹೆ ಪಡೆಯಬೇಕು. ನಂತರ ಹಣವನ್ನು ತೊಡಗಿಸುವುದು ಸೂಕ್ತ ಎಂದು ತಿಳಿಸಿದರು.
ರೋಟರಿ ಶ್ರೀಕಾಂತ್, ನಿಯೋಜಿತ ಸೇನಾನಿ ಎ.ಒ.ಮಹೇಶ್, ಕೇಶವಪ್ಪ, ಅರುಣ್ ದೀಕ್ಷಿತ್, ಗಣೇಶ್, ಶ್ರೀನಿವಾಸ್ ಗೌಡ, ಸುರೇಶ್, ಪರಮೇಶ್ವರಿ, ಗಂಗಪ್ಪ, ವೀಣಾ ಕಿಶೋರ್, ಕೀರ್ತನ, ನಿಯೋಜಿತ ಅಧ್ಯಕ್ಷ ಶೇಷಗಿರಿ.ಡಿ.ಕೆ ಮತ್ತು ನಿಯೋಜಿತ ಖಜಾಂಚಿ ಎಸ್.ಸುನೀಲ್ ಇತರರಿದ್ದರು.