ನರಸಿಂಹರಾಜಪುರಭದ್ರಾಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ಗಡಿಯನ್ನು ಪರಿಷ್ಕರಿಸುವಂತೆ ಶಾಸಕ ಟಿ.ಡಿ.ರಾಜೇಗೌಡರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಅರಣ್ಯ ಸಚಿವರಿಗೆ ಶಾಸಕ ಟಿ.ಡಿ.ರಾಜೇಗೌಡ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಭದ್ರಾಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ಗಡಿಯನ್ನು ಪರಿಷ್ಕರಿಸುವಂತೆ ಶಾಸಕ ಟಿ.ಡಿ.ರಾಜೇಗೌಡರು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದಾರೆ.ಮನವಿಯಲ್ಲಿ, ಮೈಸೂರು ಸರ್ಕಾರವು 1951ರಲ್ಲಿ ಜಾಗರ ಕಣಿವೆಯನ್ನು ಜಾಗರ ಗೇಮ್ ಅಭಯಾರಣ್ಯ ಎಂದು ಘೋಷಿಸಿದ್ದು, 1974ರಲ್ಲಿ ಆ ಅಭಯಾಣ್ಯವನ್ನು ಭದ್ರಾ ವನ್ಯ ಜೀವಿ ಅಭಯರಣ್ಯ ಎಂದು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ವ್ಯಾಪ್ತಿಯ 492.46 ಚ.ಕಿ.ಮೀ ಪ್ರದೇಶವನ್ನು ಘೋಷಿಸಲಾಗಿದೆ. 1998 ರಲ್ಲಿ ಭದ್ರಾ ವನ್ಯಜೀವಿ ಅಭಯಾರಣ ವನ್ನು ಸರ್ಕಾರಿ ಆದೇಶ ಸಂಖ್ಯೆ ಎಫ್ ಇಇ 299 ಎಫ್.ಡಬ್ಲ್ಯೂ ಎಲ್ 2007 ರಂತೆ ಭದ್ರಾಹುಲಿ ಸಂರಕ್ಷಿತ ಪ್ರದೇಶದ 571.84 ಚ.ಕಿ.ಮೀ ಪ್ರದೇಶವನ್ನು ಅಧಿಸೂಚಿಸಲಾಯಿತು.

2011 ರ ಜ. 29 ರ ಅಧಿಸೂಚನೆಯಲ್ಲಿ ಬಫರ್ ವಲಯ ಘೋಷಿಸುವಾಗ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನ ಸಭಾ ಕ್ಷೇತ್ರಗಳಲ್ಲಿ ಅನೇಕ ಜನವಸತಿ ಪ್ರದೇಶಗಳು, ಕಂದಾಯ ಭೂಮಿ ಮತ್ತು ಹಿಡುವಳಿ ಜಮೀನುಗಳನ್ನು ಸೇರ್ಪಡೆ ಗೊಳಿಸಿ ಬಫರ್ ವಲಯ ಎಂದು ಘೋಷಣೆ ಮಾಡಲಾಗಿದೆ. ಆದರೆ, ರಾಜ್ಯದ ಇತರೆ ವನ್ಯಜೀವಿ ಅಭಯಾರಣ್ಯ/ ಹುಲಿ ಸಂರಕ್ಷತ ಪ್ರದೇಶಗಳಾದ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ, ಕಾಳಿ ಇತ್ಯಾದಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿನ ಬಫರ್ ವಲಯಗಳನ್ನು ಘೋಷಿಸುವಾಗ ಅರಣ್ಯ ಸ್ವರೂಪ ಹೊಂದಿರುವ ಪ್ರದೇಶಗಳನ್ನು ಮಾತ್ರ ಪರಿಗಣಿಸಿ ಜನವಸತಿ ಪ್ರದೇಶಗಳು, ಕಂದಾಯ ಭೂಮಿಗಳು ಮತ್ತು ಹಿಡುವಳಿ ಜಮೀನುಗಳನ್ನು ಕೈಬಿಡಲಾಗಿದೆ.

ಆದರೆ, ಭದ್ರಾಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯ ಘೋಷಣೆಯಲ್ಲಿ ಮೇಲ್ಕಂಡ ಅಂಶಗಳನ್ನು ಪರಿಗಣಿಸದೆ ಶೃಂಗೇರಿ ಕ್ಷೇತ್ರದ ನರಸಿಂಹರಾಜಪುರ ತಾಲೂಕಿನ ಆಡುವಳ್ಳಿ, ಕೊಳಲೆ, ಅಳೇಹಳ್ಳಿ, ಬಿ.ಕಣಬೂರು, ಸಾರ್ಯ,ಸಾಲೂರು, ಮಧು ಗುಣಿ, ದಂಡುಬಿಟ್ಟಹಾರ, ನಂದಿಗಾವೆ, ಬೈರಾಪುರ, ಚಿಕ್ಕಮಗಳೂರು ತಾಲ್ಲೂಕಿನ ಬಿದರೆ, ಬೊಗಸೆ, ಬಾಸಾಪುರ, ಶಿರಗೊಳ, ಕಡವಂತಿ, ದೇವದಾನ ಪ್ರದೇಶಗಳು ಸೇರಿದಂತೆ ರೈತರ ಹಿಡುವಳಿ ಜಮೀನುಗಳನ್ನು ಬಫರ್ ವಲಯಕ್ಕೆ ಸೇರಿಸಲಾಗಿದೆ. ಆದ್ದರಿಂದ ನಾಗರಹೊಳೆ, ಬಂಡೀಪುರ,ಬಿಳಿಗಿರಿ ರಂಗನಬೆಟ್ಟ, ಕಾಳಿ ಇತ್ಯಾದಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಫರ್ ವಲಯಗಳನ್ನು ಘೋಷಿಸುವಾಗ ಜನವಸತಿ ಪ್ರದೇಶ, ಕಂದಾಯ ಭೂಮಿಗಳು, ಹಿಡುವಳಿ ಪ್ರದೇಶ ಗಳನ್ನು ಹೊರತುಪಡಿಸಿ ಘೋಷಿಸಿರುವಂತೆ, ಭದ್ರಾಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯಗಳಿಗೆ ಒಳಪಟ್ಟ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಜನವಸತಿಪ್ರದೇಶ, ಕಂದಾಯ ಭೂಮಿಗಳು ಹಾಗೂ ಹಿಡುವಳಿ ಜಮೀನುಗಳನ್ನು ಕೈಬಿಟ್ಟು ಅರಣ್ಯ ಸ್ವರೂಪ ಹೊಂದಿರುವ ಪ್ರದೇಶಗಳನ್ನು ಮಾತ್ರ ಸೇರಿಸಿ ಬಫರ್ ವಲಯದ ನಕಾಶೆ ಪರಿಷ್ಕರಿಸುವಂತೆ ಸಂಬಂಧಿಸಿದವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.