-ಶಿಶುಮರಣದ ಮಾಹಿತಿ ನೀಡುವಲ್ಲಿ ಮರೆಮಾಚಿದ ವಾಸ್ತವಾಂಶ: ಆರೋಪ । ತನಿಖಾ ತಂಡ ರಚನೆ: ತಜ್ಞವೈದ್ಯರು, ಸಿಬ್ಬಂದಿ ತಂಡದಿಂದ ಪರಿಶೀಲನೆ
----ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಲ್ಲಿ ಸಾವಿರಾರು ಗರ್ಭಗಳ ನಾಪತ್ತೆ, ಹೆಣ್ಣು ಭ್ರೂಣ ಹತ್ಯೆಗಳು ಜೊತೆಗೆ ಶಿಶುಮರಣಗಳ ಹೆಚ್ಚುತ್ತಿರುವ ಆತಂಕವೂ ವ್ಯಕ್ತವಾಗಿದೆ. ಆದರೆ, ಇಂತಹ ಪ್ರಕರಣಗಳನ್ನು ಆರೋಗ್ಯ ಇಲಾಖೆ ಮರೆ ಮಾಚುತ್ತಿದೆ ಎಂಬ ಆರೋಪಗಳೂ ಕೇಳೀ ಬರುತ್ತಿವೆ. ಈ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ 2025-26ನೇ ಸಾಲಿನ ಶಿಶುಮರಣಗಳ ದತ್ತಾಂಶಗಳ ಪರಿಶೀಲನೆ ವೇಳೆ, ಶಿಶು ಮರಣಗಳ ಪ್ರಕರಣಗಳ ವರದಿಯಲ್ಲಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ, ಪ್ರಕರಣಗಳ ವಾಸ್ತವಾಂಶಗಳನ್ನು ಸಮಗ್ರವಾಗಿ ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸುವ ಉದ್ದೇಶದಿಂದ, ವಿಷಯ ಪರಿಣಿತ ತಜ್ಞವೈದ್ಯರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ, ಸಮಗ್ರ ತನಖೆ ನಡೆಸಲು ಸರ್ಕಾರ ಆದೇಶಿಸಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಸೂಚನೆಯಂತೆ ಹಾಗೂ ಆಯುಕ್ತರ ಅನುಮೋದನೆಯಂತೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಯೋಜನಾ ನಿರ್ದೇಶಕರು (ಆರ್.ಸಿ.ಎಚ್) ಈ ಕುರಿತು ಆದೇಶ ಹೊರಡಿಸಿದ್ದು, ತಂಡ ಈಗಾಗಲೇ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಮಗ್ರ ಮಾಹಿತಿ ಪಡೆದು ತೆರಳಿದೆ.
ಶಿಶು ಮರಣ ಪ್ರಕರಣಗಳ ದಾಖಲೆಗಳು, ವರದಿ ವ್ಯವಸ್ಥೆ, ಆರ್‌ಸಿಎಚ್ ಪೋರ್ಟಲ್‌ನಲ್ಲಿ ಮಾಹಿತಿಯ ನಿಖರತೆ ಹಾಗೂ ಶಿಶುಮರಣಗಳ ಪ್ರಕರಣಗಳ ವರದಿಯಲ್ಲಿ ಕಂಡುಬಂದಿರುವ ವ್ಯತ್ಯಾಸಗಳ ಕುರಿತು ಸಮಗ್ರ ತನಿಖೆ ನಡೆಸಿ, ಲೋಪಗಳಿಗೆ ಕಾರಣಗಳು ಹಾಗೂ ಹೊಣೆಗಾರಿಕೆಯನ್ನು ಪರಿಶೀಲಿಸಿ ಅಗತ್ಯ ಶಿಫಾರಸ್ಸುಗಳೊಂದಿಗೆ ವಿವರವಾದ ತನಿಖೆಯನ್ನು ನಡೆಸಿ, ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ಆರ್‌ಸಿಎಚ್‌ನ ಯೋಜನಾ ನಿರ್ದೇಶಕರಾದ ಡಾ. ಬಿ. ಎನ್. ರಜನಿ, ಜಂಟಿ ನಿರ್ದೇಶಕರು (ಜನಸಂಖ್ಯಾತಜ್ಞರು) ಎಸ್. ಪ್ರಮೀಳಾ,
ಮಕ್ಕಳ ಆರೋಗ್ಯ ವಿಭಾಗದ ಉಪ ನಿರ್ದೇಶಕ ಡಾ. ಬಸವರಾಜ್ ಬಿ. ದಾಭಾಡೆ, ಮಕ್ಕಳ ಆರೋಗ್ಯ ವಿಭಾಗದ ಸಮಾಲೋಚಕರಾದ ಡಾ. ವನಿತಾ ಹಾಗೂ ಜನಸಂಖ್ಯಾ ತಜ್ಞರ ವಿಭಾಗದ ಸ್ಟೇಟ್ ಡೇಟಾ ಮ್ಯಾನೇಜರ್ ರಘುನಂದನ್ ಅವರನ್ನೊಳಗೊಂಡ ತಂಡ ಇದೇ ಜು.6 ಮತ್ತು 7 ರಂದು ಇಲ್ಲಿಗೆ ಭೇಟಿ ನೀಡಿತ್ತು.====ಬಾಕ್ಸ್====
* ಸಂಚಲನ ಮೂಡಿಸಿದ್ದ ಕನ್ನಡಪ್ರಭ ವರದಿಗಳುಯಾದಗಿರಿ ಜಿಲ್ಲೆಯಲ್ಲಿ ಶಿಶುಮರಣಗಳ ಪ್ರಕರಣಗಳಲ್ಲಿ ವಾಸ್ತವಾಂಶ ಮರೆಮಾಚಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ, ಈ ಕುರಿತು ಮಾಹಿತಿ ಸಂಗ್ರಹಿಸಿದ "ಕನ್ನಡಪ್ರಭ ", ಆರೋಗ್ಯ ಇಲಾಖೆಯಲ್ಲಿನ ಇಂತಹ ವ್ಯವಸ್ಥೆ ಬಗ್ಗೆ ಇದೇ ಏ.30 ರಂದು ವರದಿ ಪ್ರಕಟಿಸಿತ್ತು. ಜಿಲ್ಲೆಯಲ್ಲಿ ಸಾವಿರಾರು ಗರ್ಭಗಳ ನಾಪತ್ತೆ, ಹೆಣ್ಣು ಭ್ರೂಣ ಹತ್ಯೆಗಳು ಸೇರಿದಂತೆ ಶಿಶುಮರಣಗಳ ಕುರಿತು ಮಾ.18 ರಿಂದ ಪ್ರಕಟಗೊಂಡ ಸರಣಿ ವರದಿಗಳು ಸಂಚಲನ ಮೂಡಿಸಿದ್ದವು.
------ಶಿಶುಮರಣ ಪ್ರಮಾಣ: ಶಿಶುಮರಣಗಳ ಪ್ರಕರಣಗಳ ವರದಿಯಲ್ಲಿ ಆರೋಗ್ಯ ಇಲಾಖೆ ವಾಸ್ತವ ವರದಿ ಬಹಿರಂಗಪಡಿಸದೇ ಇರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಲವೀಶ ಒರಡಿಯಾ, ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ಸಭೆಗಳ ನಡೆಸಿ, ಸತ್ಯಾಸತ್ಯತೆ ಸಲ್ಲಿಸುವಂತೆ ಆದೇಶಿಸಿದ್ದರು.
ಶಿಶುಮರಣಗಳ ಪ್ರಮಾಣ ಹೆಚ್ಚುತ್ತಿದ್ದರೆ ಅದನ್ನು ಬೆಳಕಿಗೆ ತಂದು, ನಿಯಂತ್ರಿಸುವ ಬಗ್ಗೆ ಯೋಜನೆಗಳ ರೂಪಿಸಿ, ಸಾವುಗಳನ್ನು ತಡಯಬೇಕೇ ವಿನಹ, ಸತ್ಯವನ್ನು ಮರೆಮಾಚಿ ಇಲ್ಲೇನೂ ಆಗುತ್ತಿಲ್ಲವೆಂಬಂತೆ ಬಿಂಬಿಸಿ, ಶಿಶುಮರಣ ಪ್ರಮಾಣಗಳನ್ನು ಮುಚ್ಚಿಡುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಮೇ 6 ರವರೆಗೆ ಗಡುವು ನೀಡಿದ್ದರು.ಕನ್ನಡಪ್ರಭಕ್ಕೆ ಬಲ್ಲ ಮೂಲಗಳ ಪ್ರಕಾರ, ಸಿಇಒ ಎಚ್ಚರಿಕೆ ನಂತರ ಅಧಿಕಾರಿಗಳು ವಾಸ್ತವಾಂಶ ವರದಿಯನ್ನು ನೀಡುವಲ್ಲಿ ಮುಂದಾಗಿದ್ದಾರೆ. 2025-26ನೇ ಸಾಲಿನಲ್ಲಿ 250ಕ್ಕೂ ಹೆಚ್ಚು ಶಿಶುಮರಣಗಳು ಸಂಭವಿಸಿವೆ. ಜಿಲ್ಲೆಯಲ್ಲಷ್ಟೇ ಅಲ್ಲ, ಇಲ್ಲಿನ ಮಕ್ಕಳು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲೂ ಮೃತಪಟ್ಟ ಬಗ್ಗೆ ಮಾಹಿತಿಯೇ ಕಲೆ ಹಾಕಿರಲಿಲ್ಲ. ಈ ಎಲ್ಲಗಳ ಹಿನ್ನೆಲೆಯಲ್ಲಿ, ಜು.6 ಹಾಗೂ 7 ರಂದು ತನಿಖಾ ತಂಡ ಬಂದು ಹೋಗಿದೆ ಎನ್ನಲಾಗಿದೆ.
-17ವೈಡಿಆರ್8 : ಯಾದಗಿರಿ ಜಿಲ್ಲೆಯಲ್ಲಿ ಶಿಶು ಮರಣಗಳ ಪ್ರಕರಣಗಳಲ್ಲಿ ವ್ಯತ್ಯಾಸ ಕಂಡುಬಂದಿರುವುದರಿಂದ, ಸಮಗ್ರ ತನಖೆಗೆ ಸೂಚಿಸಿ, ವಿಷಯ ಪರಿಣಿತ ತಜ್ಞವೈದ್ಯರು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿದ ಕುರಿತ ಆದೇಶ.
17ವೈಡಿಆರ್9 : ಶಿಶುಮರಣ ಪ್ರಕರಣಗಳ ಮರೆಮಾಚುತ್ತಿರುವ ಕುರಿತು ಕನ್ನಡಪ್ರಭ ವಿಶೇಷ ವರದಿ.17ವೈಡಿಆರ್10 : ಶಿಶುಮರಣ ಪ್ರಕರಣಗಳ ಮರೆಮಾಚುತ್ತಿರುವ ಕುರಿತು ಕನ್ನಡಪ್ರಭ ವಿಶೇಷ ವರದಿ.
17ವೈಡಿಆರ್11 : ಶಿಶುಮರಣ ಪ್ರಕರಣಗಳ ಮರೆಮಾಚುತ್ತಿರುವ ಕುರಿತು ಕನ್ನಡಪ್ರಭ ವಿಶೇಷ ವರದಿ.---000---