- ಸಚಿನ್‌ ಗೋಧಳಿ ಸ್ಯಾಂಡಿ ರಮೇಶ, ರವಿ, ಸಂದೀಪ್‌ಗೆ ನ್ಯಾಯಾಂಗ ಬಂಧನ । ಎಸ್‌ಪಿ ಶ್ಲಾಘನೆ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಕಳೆದ ತಿಂಗಳಲ್ಲಿ ನ್ಯಾಮತಿ ತಾಲೂಕಿನ ಸವಳಂಗ ಶಿಕಾರಿಪುರ ರಸ್ತೆಯ ಮಾಚಿಗೊಂಡನಹಳ್ಳಿ ಕೆರೆ ಹತ್ತಿರ ಅಸಲಿ ಬಂಗಾರವೆಂದು ನಂಬಿಸಿ, ನಕಲಿ ಬಂಗಾರ ನೀಡಿ ಹಣ ಪಡೆದು ವಂಚಿಸಿದ್ದ ಆರೋಪಿಗಳನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದು, ಜಿಲ್ಲಾ ಪೊಲೀಸ್‌ ಅಧೀಕ್ಷಕರು ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಚಿನ್‌ ಗೋಧಳಿ ಅಲಿಯಾಸ್‌ ಸ್ಯಾಂಡಿ ರಮೇಶ (21), ನ್ಯಾಮತಿ ತಾಲೂಕಿನ ಸಂದೀಪ (38), ರವಿ (40) ಬಂಧಿತ ಆರೋಪಿಗಳಾಗಿದ್ದು, ₹62,25,000 ನಗದು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಪ್ರಕರಣದ ಹಿನ್ನೆಲೆ:

ಕಳೆದ ತಿಂಗಳಲ್ಲಿ ರಮೇಶ ಎಂಬ ವ್ಯಕ್ತಿ ವಿಜಯಕುಮಾರ್‌ ಎಂಬವರಿಗೆ ದೂರವಾಣಿ ಕರೆ ಮಾಡಿ, ನಮ್ಮ ಹಳೆಯ ಮನೆ ಕೆಡವಿ ಪಾಯ ತೆಗೆಯುವಾಗ ನಮಗೆ ಬಂಗಾರದ ನಿಧಿ ಸಿಕ್ಕಿದೆ. ಅದನ್ನು ಕಡಿಮೆ ಬೆಲೆಗೆ ನೀಡುತ್ತೇನೆ, ಪರೀಕ್ಷಿಸಿ ತೆಗೆದುಕೊಳ್ಳಿ ಎಂದು ತಿಳಿಸಿದ್ದಾನೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಶಿವಾನಂದಪ್ಪ ಎಂಬವರು ವಿಜಯಕುಮಾರ ಅವರ ಸ್ನೇಹಿತ. ಈ ಸ್ನೇಹಿತನ ಮೂಲಕ ವಿಷಯ ತಿಳಿದು ಇಬ್ಬರು ಬಂದು ಬಂಗಾರದ ಸ್ಯಾಂಪಲ್‌ ತೆಗೆದುಕೊಂಡು ಹೋಗಿ ಪರೀಕ್ಷಿಸಿದಾಗ ಅದು ಅಸಲಿ ಬಂಗಾರ ಎಂಬುದು ದೃಢಪಟ್ಟಿದೆ.

ಬಳಿಕ ಅಸಲಿ ಬಂಗಾರ ಎಂದು ನಂಬಿದ ಶಿವಾನಂದಪ್ಪ ಅವರು ರಮೇಶನೊಂದಿಗೆ ವ್ಯವಹಾರ ಮಾತನಾಡಿದ್ದಾರೆ. ರಮೇಶ್‌ ಸವಳಂಗ- ಶಿಕಾರಿಪುರ ರಸ್ತೆಯ ಮಾಚಿಗೊಂಡನಹಳ್ಳಿ ಕೆರೆ ಹತ್ತಿರದ ತೋಟಕ್ಕೆ ಕರೆದುಕೊಂಡು ಹೋಗಿ ಶಿವಾನಂದಪ್ಪ ಅವರಿಂದ ₹85 ಲಕ್ಷವನ್ನು ಪಡೆದುಕೊಂಡಿದ್ದಾನೆ. ಬಳಿಕ ಕವರ್‌ನಲ್ಲಿ ಅಂದಾಜು 1 ಕೆ.ಜಿ.ಯಷ್ಟು ತೂಕದ ಬಂಗಾರದ ತರಹದ ಬಿಲ್ಲೆಗಳನ್ನು ತೋರಿಸಿ, ಇವೇ ನಮಗೆ ಸಿಕ್ಕಿದ ನಿಧಿಯ ಬಂಗಾರ ಎಂದು ಹೇಳಿ, ನಕಲಿ ಚಿನ್ನ ನೀಡಿ ಅಲ್ಲಿಂದ ತೆರಳಿದ್ದಾನೆ.

ಈ ಸಂಬಂಧ 15 ದಿನಗಳ ಹಿಂದೆ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಶಿವಾನಂದಪ್ಪ ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳ ಕೃತ್ಯವನ್ನು ವಿವರಿಸಿ, ತಮಗೆ ಹಣ ವಾಪಸ್‌ ಕೊಡಿಸಬೇಕೆಂದು ಒತ್ತಾಯಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಎಸ್‌ಪಿ ಶೇಖರ್‌ ಎಚ್‌.ಟಿ. ಅವರು ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಚನ್ನಗಿರಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕ ಬಸವರಾಜ್‌ ಬಿ.ಎಸ್‌. ಉಸ್ತುವಾರಿ, ನ್ಯಾಮತಿ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಸಿದ್ದೇಗೌಡ ನೇತೃತ್ವದಲ್ಲಿ ಅಧಿಕಾರಿ- ಸಿಬ್ಬಂದಿ ಒಳಗೊಂಡ ತಂಡ ರಚನೆ ಮಾಡಿ ಪ್ರಕರಣ ತನಿಖೆಗೆ ತಿಳಿಸಿದ್ದರು.

ಅದರಂತೆ ತನಿಖೆ ಕೈಗೊಂಡು ತಂಡವು ಬಾತ್ಮಿದಾರರಿಂದ ಮಾಹಿತಿ ಕಲೆ ಹಾಕಿ ಪೂರಕವಾಗಿ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಇವುಗಳ ಆಧಾರದ ಮೇಲೆ ಚನ್ನಗಿರಿ ತಾಲೂಕಿನ ಸಚಿನ್‌ ಗೋಧಳಿ ಅಲಿಯಾಸ್‌ ಸ್ಯಾಂಡಿ ರಮೇಶ, ನ್ಯಾಮತಿ ತಾಲೂಕಿನ ಸಂದೀಪ ಹಾಗೂ ರವಿ ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ 62,25,000 ನಗದು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.

ಈ ಪ್ರಕರಣ ಭೇದಿಸಿದ ನ್ಯಾಮತಿ ಪೊಲೀಸ್‌ ಠಾಣೆ ನಿರೀಕ್ಷಕ.ಸಿದ್ದೇಗೌಡ, ಪಿಎಸ್‌ಐ ಹೊಳೆಬಸಪ್ಪ, ಶೋಭಾರಾಣಿ, ಸಿಬ್ಬಂದಿ ಮಲ್ಲೇಶಪ್ಪ, ವಿಕ್ರಂ, ಉಮೇಶ್‌, ಮಂಜಪ್ಪ, ಗಿರೀಶ ನಾಯ್ಕ, ರಂಗಪ್ಪ, ಸುರೇಶ್‌, ಶಿವರಾಜ್‌, ಆನಂದ, ನಾಗರಾಜ ನಾಯ್ಕ, ಮುರುಳಿ, ಪ್ರಸನ್ನ, ಪ್ರವೀಣ ಕುಮಾರ್‌, ರಾಮಪ್ಪ, ಪಂಪಾನಾಯ್ಕ, ಉಮೇಶ್‌, ಬಸವರಾಜ್‌, ಪ್ರಶಾಂತ್‌, ಮಹೇಶ ನಾಯ್ಕ, ಚಂದ್ರಶೇಖರ್‌, ಹೇಮರಾಜ್‌, ಚನ್ನೇಶ್‌, ರವಿಕುಮಾರ್‌ ಹಾಗೂ ಜಿಲ್ಲಾ ಪೊಲೀಸ್‌ ಕಚೇರಿಯ ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಎಸ್‌ಪಿ ಶೇಖರ್‌ ಎಚ್‌.ಟಿ. ಶ್ಲಾಘಿಸಿದ್ದಾರೆ.

- - -

-ಫೋಟೋ:

ನಕಲಿ ಬಂಗಾರ ನೀಡಿ ವಂಚಿಸಿದ್ದ ಆರೋಪಿಗಳನ್ನು ಬಂಧಿಸಿದ ನ್ಯಾಮತಿ ಪೊಲೀಸ್‌ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿ ತಂಡ.