ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಇಂಡಿಯನ್ ಜಿಯೋಟೆಕ್ನಿಕಲ್ ಸೊಸೈಟಿ (IGS), ಸುರತ್ಕಲ್ ಚಾಪ್ಟರ್ ಸಹಯೋಗದಲ್ಲಿ ಐ.ಆರ್.ಎಸ್.ಎಂ ( “Insights for Resilient Soil Mechanics: IRSM–2026” ) ಎಂಬ ರಾಷ್ಟ್ರೀಯ ಸಿಂಪೋಸಿಯಂ ನ್ನು ಗುರುವಾರ ನಿಟ್ಟೆಯ ಸಂಭ್ರಮ ಆಡಿಟೋರಿಯಂನಲ್ಲಿ ಆಯೋಜಿಸಿತು.

ಎನ್.ಐ.ಟಿ.ಕೆ ಸುರತ್ಕಲ್ ನ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ್. ಕೆ. ಯಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡಿ, ಭೂವಿಜ್ಞಾನ ಮತ್ತು ಜಿಯೋಟೆಕ್ನಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ತಾಂತ್ರಿಕ ಅನ್ವಯಿಕತೆಗಳ ಮಹತ್ವ ವಿವರಿಸಿದರು. ಸದೃಢ ಮೂಲಸೌಕರ್ಯ ನಿರ್ಮಾಣಕ್ಕೆ ಮಣ್ಣು ಮೆಕ್ಯಾನಿಕ್ಸ್ ಅಧ್ಯಯನ ಮತ್ತು ಆವಿಷ್ಕಾರಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಡಾ. ನಾಗೇಶ್ ಪ್ರಭು ವಹಿಸಿದ್ದರು. ಈ ಸಂದರ್ಭ ಐಜಿಎಸ್ ಸುರತ್ಕಲ್ ಚಾಪ್ಟರ್ ಅಧ್ಯಕ್ಷರು ಹಾಗೂ ಎನ್‌ಐಟಿಕೆ ಸುರತ್ಕಲ್‌ನ ಪ್ರಾಧ್ಯಾಪಕರಾದ ಪ್ರೊ. ಸುನಿಲ್ ಬಿ.ಎಂ., ಐಜಿಎಸ್ ಸುರತ್ಕಲ್ ಚಾಪ್ಟರ್ ನ ಕಾರ್ಯದರ್ಶಿ ಡಾ. ಬಬ್ಲು ಚೌದರಿ ಮತ್ತು ನಿಟ್ಟೆ ತಾಂತ್ರಿಕ ಕಾಲೇಜಿನ ಡೀನ್ ಅಕಾಡೆಮಿಕ್ಸ್ ಪ್ರೊ. ಐ.ಆರ್. ಮಿತ್ತಂತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರೊ. ಐ.ಆರ್. ಮಿತ್ತಂತಾಯ ಅವರ ಸಿವಿಲ್ ವಿಭಾಗದಲ್ಲಿನ 40 ವರ್ಷಗಳ ಸೇವೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.

ಸಿಂಪೋಸಿಯಂನಲ್ಲಿ ಜಿಯೋಟೆಕ್ನಿಕಲ್ ಇಂಜಿನಿಯರಿಂಗ್ ಕ್ಷೇತ್ರದ ಇತ್ತೀಚಿನ ಸಂಶೋಧನೆಗಳು, ತಾಂತ್ರಿಕ ಅಭಿವೃದ್ಧಿಗಳು ಹಾಗೂ ಕ್ಷೇತ್ರ ಅನುಭವಗಳ ಕುರಿತು ವಿವಿಧ ತಜ್ಞರು ಉಪನ್ಯಾಸಗಳನ್ನು ನೀಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಂಶೋಧಕರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.

ಕಾರ್ಯಕ್ರಮದ ಮುಖ್ಯ ಸಂಯೋಜಕರಾಗಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಕುಮಾರ್ ಭಟ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಶ್ರೀನಾಥ್ ಶೆಟ್ಟಿ ಕೆ. ಅವರು ಡಾ. ಐ ಆರ್ ಮಿತ್ತಂತಾಯರ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಶ್ರೀರಾಮ್ ಮರಾಠೆ ಸಿಂಪೋಸಿಯಂ ಬಗೆಗೆ ವಿವರಿಸಿದರು. ಸಂಯೋಜಕ ಪ್ರದೀಪ್ ಕಾರಂತ್ ವಂದಿಸಿದರು. ಎಂ.ಸಿ.ಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೇಮಿತಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.