ಅಕ್ರಮ ಡ್ರಗ್ಸ್ ದಂಧೆ, ಅನ್ನ ಭಾಗ್ಯದ ಅಕ್ಕಿ ದಂಧೆ, ಇಸ್ಪೀಟ್- ಮಟ್ಕಾ ಜೂಜಾಟ, ಕೃಷಿ ಇಲಾಖೆ ಜಮೀನಿನ ಮಣ್ಣು ಲೂಟಿ ಮಾಡಿದವರ ಪರವಾಗಿ ನಿಮ್ಮ ಹೋರಾಟವೋ ಅಥವಾ ಅದರ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ಹೋರಾಟವೋ ಎಂಬುದನ್ನು ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ಜಿಲ್ಲೆಯ ಜನತೆ ಮುಂದೆ ಮೊದಲು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಒತ್ತಾಯಿಸಿದ್ದಾರೆ.
- ಬೂದಾಳ್ ಬಾಬುಗೆ ಸನ್ಮಾನಿಸಿದ್ದು ಯಾಕೆಂದು ಎಸ್ಪಿ, ಪಾಲಿಕೆ ಆಯುಕ್ತರು ಸ್ಪಷ್ಚಪಡಿಸಲಿ: ಯಶವಂತ ರಾವ್ ಆಗ್ರಹ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಅಕ್ರಮ ಡ್ರಗ್ಸ್ ದಂಧೆ, ಅನ್ನ ಭಾಗ್ಯದ ಅಕ್ಕಿ ದಂಧೆ, ಇಸ್ಪೀಟ್- ಮಟ್ಕಾ ಜೂಜಾಟ, ಕೃಷಿ ಇಲಾಖೆ ಜಮೀನಿನ ಮಣ್ಣು ಲೂಟಿ ಮಾಡಿದವರ ಪರವಾಗಿ ನಿಮ್ಮ ಹೋರಾಟವೋ ಅಥವಾ ಅದರ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ಹೋರಾಟವೋ ಎಂಬುದನ್ನು ಸಚಿವರು ಹಾಗೂ ಕಾಂಗ್ರೆಸ್ ಮುಖಂಡರು ಜಿಲ್ಲೆಯ ಜನತೆ ಮುಂದೆ ಮೊದಲು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಒತ್ತಾಯಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ಶಾಸಕ ಬಿ.ಪಿ.ಹರೀಶ ಕೃಷಿ ಇಲಾಖೆ ಜಾಗದ ಮಣ್ಣು ಲೂಟಿ, ಹಳ್ಳದ ಜಾಗವನ್ನು ಒತ್ತುವರಿ ವಿರುದ್ಧ ಧ್ವನಿ ಎತ್ತಿ ಹೋರಾಡುತ್ತಿದ್ದಾರೆ. ಆದರೆ, ಅಧಿಕಾರಸ್ಥರ ವಿರುದ್ಧ ಧ್ವನಿ ಎತ್ತಿದ ಶಾಸಕ ಹರೀಶ್ ವಿರುದ್ಧವೇ ಕಾಂಗ್ರೆಸ್ಸಿಗರು ಬೀದಿಗಿಳಿದು ಹೋರಾಟ ನಡೆಸುತ್ತೀರಿ. ಇದರಿಂದ ಕಾಂಗ್ರೆಸ್ ಪಕ್ಷ ಯಾವಾಗಲೂ ಸೆಕೆಂಡ್ ಲೈನ್ ದಂಧೆ ಮತ್ತು ಲೂಟಿಕೋರರ ಪರ ಎಂಬುದು ಜನರಿಗೂ ಅರ್ಥವಾಗಿದೆ ಎಂದು ಟೀಕಿಸಿದರು.
ದಾವಣಗೆರೆಯಲ್ಲಿ ಈಚೆಗೆ ಅಕ್ಕಿದಂಧೆಯಲ್ಲಿ ಸಿಲುಕಿದ್ದ ವ್ಯಕ್ತಿಯ ಜೊತೆಗೆ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಫೋಟೋಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದೆ. ಡ್ರಗ್ಸ್ ಕೇಸ್‌ನ ಶಾಮನೂರು ವೇದಮೂರ್ತಿ, ತುರ್ಚಘಟ್ಟ ಅನ್ವರ್, ಅನ್ನ ಭಾಗ್ಯ ಅಕ್ಕಿ ದಂಧೆಯ ಜಮೀರ್‌ರಂತಹವರ ಹಿನ್ನೆಲೆ ಸಚಿವರಿಗೇ ಗೊತ್ತಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದ ಅವರು, ಸ್ವತಃ ಡ್ರಗ್ಸ್ ಪೆಡ್ಲರ್‌ಗಳ ಮನೆಗಳಿಗೆ ಹೋಗಿ ಊಟೋಪಚಾರ ಮಾಡಿ ಬರುವವರು ನೀವು. ಡ್ರಗ್ಸ್ ದಂಧೆಯವರು, ಅನ್ನ ಭಾಗ್ಯದ ಅಕ್ಕಿ ಕಳ್ಳರನ್ನು ಸಾರ್ವಜನಿಕವಾಗಿ ವೇದಿಕೆಯಲ್ಲೇ ಶ್ಲಾಘಿಸುವವರು ಎಂದು ಕಿಡಿಕಾರಿದರು.ದಾವಣಗೆರೆಯಲ್ಲಿ ಯಾವ ಸೇವೆ ಮಾಡಿದ್ದಾರೆಂಬ ಕಾರಣಕ್ಕೆ ಬೂದಾಳ್ ಬಾಬು ಎಂಬ ವ್ಯಕ್ತಿಗೆ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವದಲ್ಲಿ ಸನ್ಮಾನಿಸುತ್ತಾರೆ? ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಸ್‌ಪಿ ಉಮಾ ಪ್ರಶಾಂತ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಸಚಿವರ ಸಮ್ಮುಖ ಸನ್ಮಾನಿಸುತ್ತಾರೆ. ಬೂದಾಳ್ ಬಾಬುನ ಯಾವ ಕೆಲಸಕ್ಕೆ ಇಷ್ಟೆಲ್ಲಾ ಸನ್ಮಾನ? ಪಾಲಿಕೆ ಆಯುಕ್ತರು, ಪೊಲೀಸ್ ಅಧೀಕ್ಷಕರು ನಮ್ಮ ಪ್ರಶ್ನೆಗೆ ಉತ್ತರ ನೀಡಬೇಕು ಎಂದರು.
ಲೋಕಸಭೆ ಚುನಾವಣೆ 2019ರಲ್ಲಿ ಮೋದಿ ಅಲಿ, ಏರ್ ಸ್ಟ್ರೈಕ್ ಹಿನ್ನೆಲೆ ಎಚ್.ಬಿ.ಮಂಜಪ್ಪಗೆ ಲೋಕಸಭೆ ಟಿಕೆಟ್ ಕೊಡಿಸಿದ್ದು ಇದೇ ಎಸ್.ಎಸ್. ಮಲ್ಲಿಕಾರ್ಜುನ. ಚುನಾವಣೆಯಲ್ಲಿ ಮಂಜಪ್ಪ ಸೋತರೂ 4.60 ಲಕ್ಷಕ್ಕೂ ಅಧಿಕ ಮತ ಪಡೆದಿದ್ದು ಕಡಿಮೆ ಸಾಧನೆಯಲ್ಲ. ಅಂತಹ ಮಂಜಪ್ಪಗೆ 2023ರ ಚುನಾವಣೆಯಲ್ಲಿ ಯಾಕೆ ಟಿಕೆಟ್ ಕೊಡಿಸಲಿಲ್ಲ? 2019ರ ಚುನಾವಣೆಗೆ ಮಂಜಪ್ಪ ಪರ ಎಲ್ಲೆಲ್ಲಿ ಪ್ರಚಾರ ಮಾಡಿದ್ದೀರಿ, ಎಷ್ಟು ಹಣಕಾಸು ನೆರವು ನೀಡಿದ್ದೀರೆಂಬ ಬಗ್ಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಶ್ವೇತಪತ್ರ ಹೊರಡಿಸಲಿ. ಜಿಪಂ, ತಾಪಂ, ನಗರಸಭೆ, ಪಾಲಿಕೆಗಷ್ಟೇ ಬೆಳೆಯಲು ಅವಕಾಶ. ಅದಕ್ಕಿಂದ ಮೇಲೆ ಬೆಳೆಯಬೇಕೆಂದರೆ ದಾವಣಗೆರೆ ಬಿಡಬೇಕೆಂಬುದಕ್ಕೆ ಸಾಕಷ್ಟು ಮುಖಂಡರೇ ನಿದರ್ಶನವಾಗಿದ್ದಾರೆ ಎಂದು ಯಶವಂತರಾವ್ ಕುಟುಕಿದರು.ಬಿಜೆಪಿ ಮುಖಂಡರಾದ ಬಿ.ರಮೇಶ ನಾಯ್ಕ, ಗೋವಿಂದರಾಜ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ, ಕಿಶೋರಕುಮಾರ ಇತರರು ಇದ್ದರು. - - -
(ಕೋಟ್) ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ, ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಹರಿಹರದ ಬಿಜೆಪಿ ಶಾಸಕ ಬಿ.ಪಿ. ಹರೀಶರನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೇಗೆಲ್ಲಾ ಟಾರ್ಗೆಟ್ ಮಾಡುತ್ತಾರೆ ಎಂಬುದನ್ನು ಇವತ್ತೇ, 28.2.2026ರಂದು ಹೇಳುತ್ತಿದ್ದೇನೆ, ಬರೆದಿಟ್ಟುಕೊಳ್ಳಿ. ಯಾರು ಯಾರನ್ನು ಸೋಲಿಸಲು ಪ್ರಯತ್ನಿಸುತ್ತಾರೆ ನೋಡುತ್ತಾ ಇರಿ.- ಯಶವಂತ ರಾವ್ ಜಾಧವ್, ಬಿಜೆಪಿ ಮುಖಂಡ.
- - --28ಕೆಡಿವಿಜಿ10:
ಡ್ರಗ್ಸ್ ದಂಧೆ, ಅಕ್ಕಿ ದಂಧೆಯ ಆರೋಪಿಗಳ ಜೊತೆಗೆ ಕಾಂಗ್ರೆಸ್ ನಾಯಕರಿರುವ ಫೋಟೋವನ್ನು ಬಿಜೆಪಿ ಮುಖಂಡ ಯಶವಂತ ರಾವ್ ಜಾಧವ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.