ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುವ ನೀರು ನಿರ್ವಾಹಕರುಗಳ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. ನಮಗೆ ₹8 ರಿಂದ ₹10 ಸಾವಿರ ಸಂಬಳ ಬರಲಿದ್ದು, ಒಮ್ಮೊಮ್ಮೆ ನಾಲ್ಕೈದು ತಿಂಗಳಾದರೂ ಸಂಬಳ ನೀಡುವುದಿಲ್ಲ. ನಾವು ಸಹ ಸಂಕಷ್ಟದಲ್ಲಿ ಜೀವನ ಮಾಡುತ್ತಿದ್ದು, ನೀರು ನಿರ್ವಾಹಕರ ಪಡಿತರ ಚೀಟಿಯನ್ನು ರದ್ದುಗೊಳಿಸದಂತೆ ಸರ್ಕಾರದ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ ಪಂಚ ಗ್ಯಾರಂಟಿ ಫಲಾನುಭವಿಗಳಿಗೆ ಕುಂದು- ಕೊರತೆಗಳಿದ್ದರೆ ಸ್ಥಳೀಯ ಪಿಡಿಒ ಅಥವಾ ಜನಪ್ರತಿನಿಧಿಗಳಿಗೆ ತಿಳಿಸಿದರೆ ಅಧಿಕಾರಿಗಳ ಮುಖಾಂತರ ನೆರವಾಗುತ್ತೇವೆ ಎಂದು ನೆಲಮಂಗಲ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ನಾಗರತ್ನಮ್ಮ ಹೇಳಿದರು. ಸೋಂಪುರ ಹೋಬಳಿಯ ನರಸೀಪುರ ಗ್ರಾಪಂ ವತಿಯಿಂದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಕುಂದು ಕೊರತೆಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದೆ ಜಿಲ್ಲಾ ಹಾಗೂ ತಾಲೂಕಿನ ಮಟ್ಟದಲ್ಲಿ ಕುಂದುಕೊರತೆ ಸಭೆ ನಡೆಸುತ್ತಿದ್ದೆವು, ಆದರೆ ಇದೀಗ ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕುಂದುಕೊರತೆ ಸಭೆ ನಡೆಸಲಾಗುತ್ತದೆ. ಗ್ಯಾರಂಟಿಗಳಿಂದ ಎಲ್ಲಾ ವರ್ಗದವರಿಗೂ ಅನುಕೂಲವಾಗಿದೆ, ಪ್ರತಿಯೊಬ್ಬ ನಾಗರಿಕರಿಗೂ ಈ ಯೋಜನೆಯ ಬಗ್ಗೆ ಮಾಹಿತಿ ತಲುಪಿಸಬೇಕಿದೆ, ಗ್ಯಾರಂಟಿ ಯೋಜನೆ ಬಗ್ಗೆ ಸಮಸ್ಯೆಗಳು ಎದುರಾದಲ್ಲಿ ನಮ್ಮ ಗಮನಕ್ಕೆ ತಂದರೆ ಪರಿಹರಿಸುತ್ತೇವೆ ಎಂದು ಹೇಳಿದರು.ಗ್ರಾಪಂ ಅಧ್ಯಕ್ಷ ರಾಮಾಂಜಿನೇಯ ಮಾತನಾಡಿ, ಗ್ಯಾರಂಟಿಗಳಿಂದ ಬಡವರು, ಮಧ್ಯಮ ವರ್ಗದವರು ಸೇರಿದಂತೆ ಮಹಿಳೆಯರ ತಲಾದಾಯದಲ್ಲಿ ಏರಿಕೆಯಾಗಿದೆ, ಜನರ ಕಷ್ಟಗಳಿಗೆ ಈ ಪಂಚ ಗ್ಯಾರಂಟಿಗಳು ಸಹಕಾರಿಯಾಗಿವೆ ಎಂದರು.
ಬಸ್ ನಿಲ್ಲಿಸುತ್ತಿಲ್ಲ ಎಂದು ಅಧಿಕಾರಿಗೆ ತರಾಟೆ:ನರಸೀಪುರ, ಮಾಕೇನಹಳ್ಳಿ ಗ್ರಾಮದಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳಿಗೆ ನಿಲುಗಡೆಯಿದ್ದರೂ ನಿಲ್ಲಿಸುತ್ತಿಲ್ಲ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಯಾಗುತ್ತಿದೆ. ಹಲವು ಬಾರಿ ಮನವಿ ಮಾಡುತ್ತಾ ಬರುತ್ತಿದ್ದರೂ ನಮ್ಮ ಮನವಿಗಳಿಗೆ ಕ್ಯಾರೆ ಎನ್ನುತ್ತಿಲ್ಲ. ಬರೀ ಭರವಸೆ ನೀಡುತ್ತಾ ಕಾಲಹರಣ ಮಾಡುತ್ತಿದ್ದೀರಿ ಎಂದು ಕಾರ್ಯಕ್ರಮದಲ್ಲಿ ಆಸೀನರಾಗಿದ್ದ ಕೆಎಸ್‍ಆರ್ ಟಿಸಿ ಸಹಾಯಕ ಸಂಚಾರ ಅಧೀಕ್ಷಕ ಲಕ್ಷ್ಮೇಗೌಡ ಅವರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಮಧ್ಯ ಪ್ರವೇಶಿಸಿದ ಗ್ರಾಪಂ ಅಧ್ಯಕ್ಷ ರಾಮಾಂಜಿನೇಯ ಊರ್ಡುಗೆರೆಯಿಂದ ದಾಬಸ್‍ಪೇಟೆ ಮೂಲಕ ಬೆಂಗಳೂರಿಗೆ ಬಿಎಂಟಿಸಿ ಬಸ್ ಗಳನ್ನು ಒದಗಿಸುವಂತೆ ಮನವಿ ಮಾಡಿದರು.
ಪಡಿತರ ಚೀಟಿ ರದ್ದುಗೊಳಿಸಬೇಡಿ:ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುವ ನೀರು ನಿರ್ವಾಹಕರುಗಳ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. ನಮಗೆ ₹8 ರಿಂದ ₹10 ಸಾವಿರ ಸಂಬಳ ಬರಲಿದ್ದು, ಒಮ್ಮೊಮ್ಮೆ ನಾಲ್ಕೈದು ತಿಂಗಳಾದರೂ ಸಂಬಳ ನೀಡುವುದಿಲ್ಲ. ನಾವು ಸಹ ಸಂಕಷ್ಟದಲ್ಲಿ ಜೀವನ ಮಾಡುತ್ತಿದ್ದು, ನೀರು ನಿರ್ವಾಹಕರ ಪಡಿತರ ಚೀಟಿಯನ್ನು ರದ್ದುಗೊಳಿಸದಂತೆ ಸರ್ಕಾರದ ಗಮನಕ್ಕೆ ತರಬೇಕೆಂದು ಸಭೆಯಲ್ಲಿ ಅಧಿಕಾರಿಗಳನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಪಿಡಿಒ ಮಂಜುನಾಥ್, ಸದಸ್ಯರಾದ ಶೋಭಾರಾಣಿ, ರಂಗನಾಥಸ್ವಾಮಿ, ಜಿಪಂ ಮಾಜಿ ಸದಸ್ಯ ವೆಂಕಟೇಶ್, ಆಹಾರ ಶಿರಸ್ತೇದಾರ ಕೃಷ್ಣಮೂರ್ತಿ, ಸಿಡಿಪಿಒ ಇಲಾಖೆಯ ನಾಗೇಶ್, ಬೆಸ್ಕಾಂ ಇಲಾಖೆಯ ಜೆಇ ತಿಮ್ಮಯ್ಯ, ಸಾರಿಗೆ ಇಲಾಖೆ ನಿಯಂತ್ರಕ ಮೇಲ್ವಿಚಾರಕ ರಘುರಾಮ್, ಬಿಎಂಟಿಸಿ ಇಲಾಖೆಯ ನಿಯಂತ್ರಕ ಶ್ರೀಕಾಂತ್, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನೀರು ನಿರ್ವಾಹಕರು ಫಲಾನುಭವಿಗಳು ಇದ್ದರು.