ಸಂಘದ ಸ್ವಯಂ ಸೇವಕರಾಗುವದೇ ದೊಡ್ಡ ಸೌಭಾಗ್ಯ

| Published : Oct 22 2024, 12:16 AM IST

ಸಾರಾಂಶ

ಸರಸ್ವತಿ ಶಾಲಾ ಆವರಣದಲ್ಲಿ ನಡೆದ ವಿಜಯದಶಮಿ ಉತ್ಸವದಲ್ಲಿ ಬಸವರಾಜ ನಿಂಬೂರೆ

ಕನ್ನಡಪ್ರಭ ವಾರ್ತೆ ಬೀದರ್‌

ಸಂಘಕ್ಕೆ ರಾಷ್ಟ್ರವೇ ಸರ್ವೋಪರಿ. ಭಾರತ, ಭಾರತಾಂಬೆಯ ಗೌರವ ಹೆಚ್ಚಿಸಲು ಸಂಘ ಸಕ್ರೀಯ ಕೆಲಸ ಮಾಡುತ್ತಿದೆ. ಸಂಘದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವುದೇ ಭಾರತೀಯರಿಗೆ ಸಿಕ್ಕಿರುವ ದೊಡ್ಡ ಸೌಭಾಗ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಜಿಲ್ಲಾ ವ್ಯವಸ್ಥಾ ಪ್ರಮುಖ ಬಸವರಾಜ ನಿಂಬೂರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ ನಗರ ಘಟಕವು ಇಲ್ಲಿನ ಸರಸ್ವತಿ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಜಯದಶಮಿ ಉತ್ಸವದಲ್ಲಿ ಮಾತನಾಡಿದ ಅವರು, ಬೌದ್ಧಿಕ ನೀಡಿ, ಸಂಘ ತನ್ನ ತತ್ವ, ಚಿಂತನೆ, ಕಾರ್ಯಪದ್ಧತಿ, ಸಿದ್ಧಾಂತಗಳಿಂದ ಎಂದೂ ವಿಮುಖಗೊಂಡಿಲ್ಲ. ಜಾತಿ, ಧರ್ಮ, ಭಾಷೆ, ಪ್ರಾಂತಕ್ಕಿಂತಲೂ ಸಂಘಕ್ಕೆ ದೇಶ ಅತೀ ಮುಖ್ಯವಾಗಿದೆ. ಭಾರತ ಪರಮ ವೈಭವಕ್ಕೆ ಏನು ಬೇಕೋ ಅದನ್ನು ಮಾಡಲು ಸೇವೆ, ತ್ಯಾಗದಿಂದ ಸಂಘದ ಪ್ರತಿಯೊಬ್ಬ ಸ್ವಯಂ ಸೇವಕರು ದುಡಿಯುತ್ತಿದ್ದಾರೆ ಎಂದು ಹೇಳಿದರು.

*ದೇಶದ ಹಿತಕ್ಕಾಗಿ ದುಡಿಯುತ್ತಿರುವವರು ಜಗ್ಗಲ್ಲ: ಭಾರತದ ದಿಕ್ಕು, ದೆಸೆ ಸರಿಯಾಗಿ ನಡೆಯುವಲ್ಲಿ ಸಂಘದ ಪಾತ್ರ ಹಿರಿದಾಗಿದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸಂಘಕ್ಕೆ ಟೀಕಿಸುತ್ತಿದ್ದಾರೆ. ದೇಶದ ಹಿತಕ್ಕಾಗಿ ದುಡಿಯುತ್ತಿರುವವರು ಇಂಥ ಯಾವುದೇ ಆರೋಪ, ಟೀಕೆಗಳಿಗೆ ಜಗ್ಗಲ್ಲ. ಸಂಘದ ಗುರಿ, ಉದ್ದೇಶ ಸ್ಪಷ್ಟವಿದೆ. ದೇಶವನ್ನು ಪ್ರೀತಿಸುವವರು ಸಂಘಕ್ಕೆ ಪ್ರೀತಿಸುತ್ತಾರೆ, ಸಂಘಕ್ಕೆ ಸಾಥ್‌ ಕೊಡುತ್ತಾರೆ. ಇದು ಕಟು ಸತ್ಯ ಎಂದು ಪ್ರತಿಪಾದಿಸಿದರು.

*ಪ್ರತಿ ಮನೆಯಿಂದಲೇ ಸಂಸ್ಕಾರ ಬೆಳೆಯಲಿ:

ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿಕೊಳ್ಳಬೇಕು. ಮಹಾಪುರುಷರನ್ನು ಯಾವುದೇ ಜಾತಿ, ಕುಲಗಳಿಗೆ ಸೀಮಿತಗೊಳಿಸಬಾರದು. ಇಡೀ ಸಮಾಜ ಒಂದಾಗಿ ಸಾಮರಸ್ಯದಿಂದ ಹೆಜ್ಜೆ ಹಾಕಬೇಕಿದೆ. ಪ್ರತಿ ಮನೆಯಿಂದಲೇ ಸಂಸ್ಕಾರ ಬೆಳೆಯಬೇಕು. ಧರ್ಮವೇ ಈ ದೇಶದ ಪ್ರಾಣವಾಗಿದೆ. ಧರ್ಮದ ನೆಲೆಗಟ್ಟಿನಲ್ಲೇ ನಮ್ಮ ಬದುಕು ಸಾಗಬೇಕು ಎಂದರು.

ಬರುವ ವರ್ಷದ ವಿಜಯದಶಮಿಗೆ ಸಂಘವು ಶತಮಾನೋತ್ಸವ ಆಚರಿಸುತ್ತಿದೆ. ಕಳೆದ 99 ವರ್ಷಗಳಲ್ಲಿ ಸಂಘ ಸಮಾಜ, ದೇಶಕ್ಕೆ ಮಾಡಿದ ಕೆಲಸಕಾರ್ಯಗಳು ಅಮೋಘ, ಅವಿಸ್ಮರಣೀಯ. ಶತಮಾನೋತ್ಸವ ಸಂದರ್ಭದಲ್ಲಿ ನಾವೆಲ್ಲರೂ ವಿಶ್ವಗುರು ಭಾರತ, ಭವ್ಯ ಭಾರತ ಕಟ್ಟಲು ಸಂಕಲ್ಪ ಮಾಡಬೇಕು ಎಂದು ನಿಂಬೂರೆ ಕರೆ ನೀಡಿದರು.

ಈ ವೇಳೆ ಶರಣಬಸವೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸತೀಶ ಪರತಾಪುರ ಮಾತನಾಡಿದರು. ಆರ್‌ಎಸ್‌ಎಸ್‌ ವಿಭಾಗ ಸಂಘಚಾಲಕ ಹನುಮಂತರಾವ್‌ ಪಾಟೀಲ್‌, ಜಿಲ್ಲಾ ಸಂಘಚಾಲಕ ಶಿವರಾಜ ಹಲಶೆಟ್ಟಿ, ಪ್ರಮುಖರಾದ ಶಿವಲಿಂಗ ಕುಂಬಾರ, ನಾಗೇಶರೆಡ್ಡಿ, ಎನ್‌. ಕೃಷ್ಣಾರೆಡ್ಡಿ, ಮಾರುತಿರಾವ್‌ ಪಂಚಭಾಯಿ ಇತರರಿದ್ದರು.

ಹಿಂದು ಹಬ್ಬ, ಉತ್ಸವಕ್ಕೆ ವಿರೋಧ ಸಲ್ಲದು:

ಧರ್ಮದ ಆಧಾರದಲ್ಲೇ ಭಾರತ ವಿಭಜನೆಯಾಗಿದ್ದನ್ನು ನಾವ್ಯಾರೂ ಮರೆಯಕೂಡದು. ಭಾರತ ಹಿಂದುಗಳ ಪವಿತ್ರವಾದ ರಾಷ್ಟ್ರ, ಇಲ್ಲಿ ಹಿಂದುಗಳ ಹಬ್ಬ, ಉತ್ಸವಕ್ಕೆ ವಿರೋಧಿಸುವ ಬೆಳವಣಿಗೆಗಳು ನಡೆಯುತ್ತಿರುವುದು ಸಮರ್ಥನೀಯವಲ್ಲ. ಹಿಂದು ಸಮಾಜ ಇನ್ನಾದರೂ ಎಚ್ಚರವಾಗಿ ಸಂಘಟಿತರಾಗಬೇಕು ಎಂದರು.