95 ಲಕ್ಷ ರು. ವೆಚ್ಚದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ

| Published : Oct 22 2024, 12:15 AM IST / Updated: Oct 22 2024, 12:16 AM IST

95 ಲಕ್ಷ ರು. ವೆಚ್ಚದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಕಷ್ಟು ಬಾರಿ ಚರ್ಚಿಸಿ, ಪರಿಷ್ಕರಿಸಿ ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿದೆ. ನಮ್ಮ ಸಮಿತಿಗೆ ಎಷ್ಟು ಅನುದಾನ ನೀಡುತ್ತಾರೆ ಎನ್ನುವ ಮಾಹಿತಿಯಿಲ್ಲ. ಆದಾಗ್ಯೂ, ಸಭೆಯು ಅನುಮೋದಿಸಿರುವ ಅಂದಾಜು ಮೊತ್ತದ ಮಾಹಿತಿಯನ್ನು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಿ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಡಿ.20ರಿಂದ ಮೂರು ದಿನ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮೆರವಣಿಗೆಯನ್ನು ವ್ಯವಸ್ಥಿತ ಮತ್ತು ವರ್ಣರಂಜಿತವಾಗಿ ಸಂಘಟಿಸಲು ಒಟ್ಟು 95 ಲಕ್ಷ ರು. ತಾತ್ಕಾಲಿಕ ಅಂದಾಜು ವೆಚ್ಚದ ಬಜೆಟ್‌ನ್ನು ಮೆರವಣಿಗೆ ಸಮಿತಿಯ ಉಪ ಸಮಿತಿಗಳು ಮಂಡಿಸಿದವು.

ಮೆರವಣಿಗೆ ಸಮಿತಿ ಅಧ್ಯಕ್ಷರೂ ಆದ ಶಾಸಕ ಮಧು ಜಿ.ಮಾದೇಗೌಡ ಅವರು ಸಮಿತಿಗೆ ಬೇಕಾಗಬಹುದಾದ ಅನುದಾನ ಕೋರಲು ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉಪ ಸಮಿತಿಗಳ ಸಂಚಾಲಕರ ಸಭೆ ನಡೆಸಿದರು.

ಈ ವೇಳೆ 10 ವಿವಿಧ ಉಪ ಸಮಿತಿಗಳ ಸಂಚಾಲಕರು ವಿವಿಧ ಚಟುವಟಿಕೆ ನಿರ್ವಹಿಸಲು ತಮ್ಮ ಸಮಿತಿಗಳಿಗೆ ಬೇಕಾಗಬಹುದಾದ ಅಂದಾಜು ವೆಚ್ಚದ ಮಾಹಿತಿ ನೀಡಿದರು.

ಕಲಾತಂಡ ಆಯ್ಕೆ ಉಪ ಸಮಿತಿ 31.45 ಲಕ್ಷ ರು., ಸ್ತಬ್ಧಚಿತ್ರ ಉಪ ಸಮಿತಿ 21 ಲಕ್ಷ ರು., ಪೂರ್ಣಕುಂಭ ಉಪ ಸಮಿತಿ 1 ಲಕ್ಷ ರು., ಸ್ಕೌಟ್ಸ್ ಮತ್ತು ಗೈಡ್ಸ್ ಉಪ ಸಮಿತಿ 1.30 ಲಕ್ಷ ರು., ದೈಹಿಕ ಶಿಕ್ಷಣ ಶಿಕ್ಷಕರ ಮತ್ತು ಎನ್‌ಸಿಸಿ ತಂಡಗಳ ಸಂಯೋಜನಾ ಉಪ ಸಮಿತಿ 1.50 ಲಕ್ಷ ರು., ಎತ್ತಿನಗಾಡಿ ಮತ್ತು ಆನೆಗಳ ಸಂಯೋಜನಾ ಉಪ ಸಮಿತಿ 6 ಲಕ್ಷ ರು., ಆಟೋರಿಕ್ಷಾ ಮೆರವಣಿಗೆ ಉಪ ಸಮಿತಿ 1.75 ಲಕ್ಷ ರು., ಸಂಘ-ಸಂಸ್ಥೆಗಳ ಸಂಯೋಜನಾ ಉಪ ಸಮಿತಿ 50 ಸಾವಿರ ರು., ಶಾಲಾ-ಕಾಲೇಜುಗಳ ಸಂಯೋಜನಾ ಉಪ ಸಮಿತಿ 50 ಸಾವಿರ ರು., ಹಾಗೂ ಸಮ್ಮೇಳನ ಅಧ್ಯಕ್ಷರ ರಥ, ಜಿಲ್ಲಾ ಅಧ್ಯಕ್ಷರ ರಥ ಸೇರಿದಂತೆ ಇನ್ನಿತರೆ ವೆಚ್ಚ ಸೇರಿ 30 ಲಕ್ಷ ಸೇರಿದಂತೆ ಒಟ್ಟು 95 ಲಕ್ಷ ರು. ತಾತ್ಕಾಲಿಕ ಅಂದಾಜು ವೆಚ್ಚದ ಮಾಹಿತಿಯನ್ನು ಉಪ ಸಮಿತಿಗಳ ಸಂಚಾಲಕರು ಮಂಡಿಸಿದರು.

ಸಮಿತಿಯ ಅಧ್ಯಕ್ಷ, ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಸಾಕಷ್ಟು ಬಾರಿ ಚರ್ಚಿಸಿ, ಪರಿಷ್ಕರಿಸಿ ಅಂದಾಜು ವೆಚ್ಚವನ್ನು ಸಿದ್ಧಪಡಿಸಲಾಗಿದೆ. ನಮ್ಮ ಸಮಿತಿಗೆ ಎಷ್ಟು ಅನುದಾನ ನೀಡುತ್ತಾರೆ ಎನ್ನುವ ಮಾಹಿತಿಯಿಲ್ಲ. ಆದಾಗ್ಯೂ, ಸಭೆಯು ಅನುಮೋದಿಸಿರುವ ಅಂದಾಜು ಮೊತ್ತದ ಮಾಹಿತಿಯನ್ನು ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮಂಡಿಸಿ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಲಾಗುವುದು ಎಂದರು.

ಸಮಿತಿಯ ಕಾರ್ಯಾಧ್ಯಕ್ಷ, ನಗರಸಭೆ ಉಪಾಧ್ಯಕ್ಷ ಎಂ.ಪಿ.ಅರುಣ್ ಕುಮಾರ್, ಸದಸ್ಯ ಕಾರ್ಯದರ್ಶಿ ನಂದೀಶ್ ಬಿ.ವಿ. ಸಂಚಾಲಕ ಕಾರಸವಾಡಿ ಮಹದೇವು ಸೇರಿದಂತೆ ವಿವಿಧ ಉಪ ಸಮಿತಿಗಳ ಸಂಚಾಲಕರು ಸಭೆಯಲ್ಲಿ ಹಾಜರಿದ್ದರು.