ಎಸ್.ಎಂ. ಸೈಯದ್
ಗಜೇಂದ್ರಗಡ: ಬೇಸಿಗೆ ಮುನ್ನವೇ ಪಟ್ಟಣದಲ್ಲಿ ಪುರಸಭೆಯು ವಾರಕೊಮ್ಮೆ ನೀರು ಪೂರೈಸುತ್ತಿದೆ. ಹೀಗಾಗಿ ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂಬ ಆತಂಕ ಎದುರಾಗಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ನವಿಲುತೀರ್ಥದಿಂದ ನೀರನ್ನು ಪಟ್ಟಣದ ಕೆರೆಗೆ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.ಪಟ್ಟಣದಲ್ಲಿ ಅಮೃತ ಯೋಜನೆ ಅಡಿ ನೀರು ಪೂರೈಕೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈ ವರ್ಷಾಂತ್ಯದಲ್ಲಿ ಪೂರ್ಣವಾಗುವ ಸಾಧ್ಯತೆಯಿದೆ. ಪಟ್ಟಣದಲ್ಲಿ ಈ ಹಿಂದೆ ಬೇಸಿಗೆ ಸಂದರ್ಭದಲ್ಲಿ ೨೩ ವಾರ್ಡಗಳಿಗೆ ನೀರು ಪೂರೈಸಲು ಪುರಸಭೆ ಆಡಳಿತ ಖಾಸಗಿ ಹಾಗೂ ಸರ್ಕಾರಿ ಕೊಳವೆ ಬಾವಿಗಳ ಮೂಲಕ ನೀರನ್ನು ಸಂಗ್ರಹಿಸಿ ಪೂರೈಸುತ್ತಿದೆ. ಜತೆಗೆ ವಾರ್ಡಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿತ್ತು. ಆದರೆ ಈಗ ಪಟ್ಟಣದ ಜನತೆಯ ದಾಹ ನೀಗಿಸಲು ಶೇ. ೯೦ರಷ್ಟು ಜಿಗಳೂರು ಕೆರೆ ನೀರೇ ಆಸರೆ. ಈ ಕೆರೆಯಿಂದ ಪಟ್ಟಣಕ್ಕೆ ಪೂರೈಕೆಯಾಗುವ ನೀರಿನ ಪೈಪಲೈನ್‌ನಲ್ಲಿ ತೊಂದರೆ ಕಂಡುಬಂದರೆ ಕೊಳವೆ ಬಾವಿಗಳ ನೀರನ್ನು ಬಡಾವಣೆಗಳಿಗೆ ಪುರಸಭೆ ಪೂರೈಸುತ್ತಿದೆ.ಪಟ್ಟಣದ ೨೩ ವಾರ್ಡಗಳಿಗೆ ಪ್ರತಿನಿತ್ಯ ಪ್ರತಿ ೨೨ ಲಕ್ಷ ಲೀಟರ್ ನೀರು ಪೂರೈಕೆಯಾಗಬೇಕಿದೆ. ಆದರೆ ಬೇಸಿಗೆ ಸಂದರ್ಭದಲ್ಲಿ ಪಟ್ಟಣದ ಜನತೆಗೆ ನೀರಿನ ಸಮಸ್ಯೆ ಉಲ್ಬಣವಾಗಬಾರದು ಎಂದು ಕಳೆದ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯಾಪಾಲಕ ಜಿಲ್ಲಾ ಅಭಿಯಂತರರು ಜಿಲ್ಲಾಧಿಕಾರಿಗಳಿಗೆ ನವಿಲುತೀರ್ಥದಿಂದ ೪೦೮.೧೬ ಕ್ಯುಸೆಕ್ ನೀರನ್ನು ಪೂರೈಸಲು ಪತ್ರ ಬರೆದಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪುರಸಭೆ ಅಧಿಕಾರಿಗಳು ಜನತೆಗೆ ಅಭಯ ನೀಡುತ್ತಿದ್ದಾರೆ.ಪಟ್ಟಣದಲ್ಲಿ ಬಹು ನಿರೀಕ್ಷಿತ ಕುಡಿಯುವ ನೀರಿನ ಯೋಜನೆಯಾದ ಅಮೃತ್ ೨.೦ ಯೋಜನೆ ಅಡಿ ನಡೆಯುತ್ತಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಗಜೇಂದ್ರಗಡ ಪಟ್ಟಣದ ೨೩ ವಾರ್ಡಗಳಲ್ಲಿ ಅಂದಾಜು ೯೬ ಕಿಮೀ ಕಾಮಗಾರಿ ಪೂರ್ಣವಾಗಬೇಕು. ಆದರೆ ಕಾಮಗಾರಿ ಆರಂಭವಾಗಿ ವರ್ಷ ಸಮೀಪಿಸುತ್ತಿದ್ದರೂ ಕೇವಲ ೨೯ ಕಿಮೀ ಮಾತ್ರ ಪೂರ್ಣವಾಗಿದೆ.
ಬೇಸಿಗೆ ವೇಳೆ ಅಮೃತ್ ೨.೦ ಯೋಜನೆಯ ನೀರು ಜನತೆಗೆ ತಲುಪುವುದು ಅನುಮಾನ. ಅಲ್ಲದೆ ಕಾಮಗಾರಿ ನಡೆಸುತ್ತಿರುವ ಜಾಗದಲ್ಲಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಿದ ಸಿಸಿ ರಸ್ತೆ ಹಾಗೂ ಡಾಂಬರ್ ರಸ್ತೆಗಳನ್ನು ಒಡೆದು ಹಾಕಿ ಪೈಪ್ ಅಳವಡಿಕೆ ಬಳಿಕ ಮಣ್ಣಿನಿಂದ ತೆಗ್ಗುಗಳನ್ನು ಮುಚ್ಚಲಾಗತ್ತಿದೆ.ಪರಿಣಾಮ ಮಳೆಗಾಲದಲ್ಲಿ ಬೀಳುವ ತೆಗ್ಗು, ದಿನ್ನೆಗಳನ್ನು ಮುಚ್ಚಲು ಪುರಸಭೆಯಿಂದ ಮತ್ತೆ ಕ್ರಿಯಾಯೋಜನೆ ರೂಪಿಸಿ ಹಣವನ್ನು ವ್ಯಯ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತದೆ ಎಂಬ ವ್ಯಾಪಕ ದೂರುಗಳು ಕೇಳಿಬಂದಿವೆ. ಹೀಗಾಗಿ ಆಡಳಿತ ಹಾಗೂ ಅಧಿಕಾರಿಗಳು ಅಮೃತ್ ೨.೦ ಯೋಜನೆಯ ಗುತ್ತಿಗೆದಾರರಿಂದಲೇ ಕಾಮಗಾರಿ ನಡೆಸಿದ ಬಳಿಕ ಯಥಾಸ್ಥಿತಿಯ ರಸ್ತೆಯ ನಿರ್ಮಾಣಕ್ಕೆ ತಾಕೀತು ಮಾಡಬೇಕು ಎನ್ನುವ ಆಗ್ರಹಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
ಮುಂಜಾಗ್ರತಾ ಕ್ರಮ: ಪಟ್ಟಣದ ೨೩ ವಾರ್ಡಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವವಾಗದಂತೆ ಪುರಸಭೆಯಿಂದ ಮೇಲಧಿಕಾರಿಗಳ ಜತೆಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ತಿಳಿಸಿದರು.
ನೀರಿನ ಅಭಾವ: ಪಟ್ಟಣದಲ್ಲಿ ೬-7 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಯಿದ್ದು, ತಾಲೂಕಾಡಳಿತ ಹಾಗೂ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಮುಖಂಡ ಮಾರುತಿ ಚಿಟಗಿ ತಿಳಿಸಿದರು.