Hospital chaos: Minister, MLAs clash - Satish Sail walks out of KDP meeting

ಶಾಸಕರು-ಸಚಿವರ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾದ ಕೆಡಿಪಿ ಸಭೆ

ಅಧಿಕಾರಿಗಳಿಂದ ತಪ್ಪು ಮಾಹಿತಿಗೆ ಆಕ್ರೋಶ, ನಾವೇನು ಹೆಬ್ಬೆಟ್ಟು ಗಿರಾಕಿಗಳಲ್ಲ ಎನ್ನುತ್ತಾ ಹೊರ ನಡೆದ ಶಾಸಕ

ಕನ್ನಡಪ್ರಭ ವಾರ್ತೆ ಕಾರವಾರ

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕೆಡಿಪಿ ಸಭೆಯು ಶಾಸಕರು ಮತ್ತು ಸಚಿವರ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಹಾಗೂ ಅಧಿಕಾರಿಗಳು ನೀಡುತ್ತಿರುವ ತಪ್ಪು ಮಾಹಿತಿಯ ವಿರುದ್ಧ ರೊಚ್ಚಿಗೆದ್ದ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್, ನಾವು ಇಲ್ಲಿ ನಾಮಕಾವಸ್ಥೆ ಕೂರಲು ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ಅರ್ಧದಲ್ಲೇ ಹೊರನಡೆದ ಘಟನೆ ನಡೆದಿದೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇಲ್ಲ, ಪೂರ್ಣ ಪ್ರಮಾಣದ ದಾಸ್ತಾನು ಇದೆ ಎಂದು ವರದಿ ನೀಡಿದರು. ಈ ಮಾತಿನಿಂದ ಕೆರಳಿದ ಶಾಸಕ ಸೈಲ್, ತಾಲೂಕಿನ ಹಳಗಾದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಿರುವಾಗ, ಆ ಔಷಧಿಗಳನ್ನು ರೋಗಿಗಳಿಗೆ ಯಾರು ಕೊಡುತ್ತಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಂಕಾಳ ವೈದ್ಯ, ವೈದ್ಯರ ಕೊರತೆ ಇದ್ದರೆ ನೀವೇ ಕರೆತರಬೇಕು ಎಂದಿದ್ದಲ್ಲದೇ, ತಾಲೂಕು ಮಟ್ಟದ ವಿಚಾರಗಳನ್ನು ಇಲ್ಲಿ ಚರ್ಚಿಸಬೇಡಿ ಎಂದು ಸೂಚಿಸಿದರು. ಸಚಿವರ ಈ ಮಾತಿನಿಂದ ಮತ್ತಷ್ಟು ಆಕ್ರೋಶಗೊಂಡ ಶಾಸಕ ಸೈಲ್, ಅಧಿಕಾರಿಗಳು ಹೇಳಿದ್ದನ್ನೆಲ್ಲ ತಲೆ ಅಲ್ಲಾಡಿಸಿಕೊಂಡು ಕೇಳಲು ನಾವೇನು ಅಂಗೂಟಾ ಛಾಪ್ (ಹೆಬ್ಬೆಟ್ಟು ಗಿರಾಕಿ) ಅಲ್ಲ. ಜನರ ಸಮಸ್ಯೆಗಳಿಗೆ ನಾವು ಉತ್ತರ ಕೊಡಬೇಕಾಗುತ್ತದೆ ಎಂದು ಸಚಿವರಿಗೆ ತಿರುಗೇಟು ನೀಡಿದರು. ಈ ರೀತಿ ಸಭೆಯಲ್ಲಿ ನಾನು ಕೂರುವುದಿಲ್ಲ, ನೀವು ಮುಂದುವರೆಸಿ ಎಂದು ಹೇಳಿ ಎದ್ದು ಹೊರನಡೆದರು. ಈ ವೇಳೆ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಕೂರುವಂತೆ ಮನವಿ ಮಾಡಿದರಾದರೂ ಸೈಲ್ ನಡೆದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಸೈಲ್, ಹಳಗಾ, ಕೈಗಾ ಹಾಗೂ ಮಲ್ಲಾಪುರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಕೋಟ್ಯಂತರ ಮೌಲ್ಯದ ಎಂಆರ್‌ಐ ಯಂತ್ರವಿದ್ದರೂ ಅದನ್ನು ನಿರ್ವಹಿಸಲು ಟೆಕ್ನಿಷಿಯನ್ ಇಲ್ಲದೇ ಧೂಳು ಹಿಡಿಯುತ್ತಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಸಭೆಯಲ್ಲಿ ಮೌನವಾಗಿ ಕೂರುತ್ತಾರೆ. ಅಧಿಕಾರಿಗಳ ತಪ್ಪುಗಳನ್ನು ತಿದ್ದುವ ಅಥವಾ ಸಭೆಯ ನಿರ್ಣಯಗಳ ಬಗ್ಗೆ ''''''''ಫಾಲೋ-ಅಪ್'''''''' ಮಾಡುವ ಕೆಲಸ ಜಿಲ್ಲಾಡಳಿತದಿಂದ ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕಾರವಾರಕ್ಕೆ ನುರಿತ ವೈದ್ಯರು ಬರಲು ಹಿಂದೇಟು ಹಾಕುತ್ತಿರುವ ಬಗ್ಗೆ ವಾಸ್ತವಾಂಶವನ್ನು ತೆರೆದಿಟ್ಟ ಶಾಸಕರು, ಮಂಗಳೂರಿನಂತಹ ದೊಡ್ಡ ನಗರಗಳಿಗೆ ಹೋಲಿಸಿದರೆ ಕಾರವಾರದಲ್ಲಿ ವೈದ್ಯರ ಮಕ್ಕಳ ಶಿಕ್ಷಣಕ್ಕಾಗಿ ಸುಸಜ್ಜಿತ ಶಾಲೆ-ಕಾಲೇಜುಗಳ ಕೊರತೆಯಿದೆ. ಈ ಕಾರಣಕ್ಕಾಗಿ ತಜ್ಞ ವೈದ್ಯರು ಇಲ್ಲಿ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ ಎಂದು ಒಪ್ಪಿಕೊಂಡರು. ಅಲ್ಲದೆ, ಆಸ್ಪತ್ರೆಯಂತಹ ಯಾವುದಾದರೂ ಸೌಕರ್ಯಕ್ಕಾಗಿ ಪ್ರಯತ್ನಿಸುವಾಗ ಜಿಲ್ಲೆಯ ಎಲ್ಲ ತಾಲೂಕುಗಳ ಜನಪ್ರತಿನಿಧಿಗಳ ನಡುವೆ ನಡೆಯುವ ಆಂತರಿಕ ರಾಜಕೀಯದಿಂದಾಗಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಾನು ಜನರ ಕೆಲಸವನ್ನು ಮಾಡಲು ಬಂದಿದ್ದು, ನನ್ನ ಆರೋಗ್ಯ ಹದಗೆಟ್ಟರೂ ತಾನು ಜನರ ಸೇವೆಯನ್ನು ಯಾವುದೇ ವ್ಯತ್ಯಾಸವಾಗದಂತೆ ಮಾಡಿಕೊಂಡು ಹೋಗುತ್ತೇನೆ. ಜನರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಸಾಧ್ಯವಾಗದಿದ್ದಲ್ಲಿ ನಾವು ಅಧಿಕಾರದಲ್ಲಿದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದ ಶಾಸಕ ಸೈಲ್, ಹೆಚ್ಚು ಹೇಳಿದರೆ ನಮ್ಮದೇ ಸರ್ಕಾರದ ವಿರುದ್ಧ ಮಾತನಾಡಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.