ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆಯಲ್ಲಿ ಆಶ್ರಯ ಮನೆ ನಿರ್ಮಾಣ ಯೋಜನೆ ಹಳ್ಳ ಹಿಡಿದಿದೆ. ಅದರ ಕುರಿತು ಬಗೆದಷ್ಟು ಅಕ್ರಮ ಬಯಲಾಗುತ್ತಿದೆ. ಈಗ ಯೋಜನೆಯನ್ನೇ ಮಾರ್ಪಾಡು ಮಾಡಿ ನಿವೇಶನ ಮಾತ್ರ ನೀಡಲಾಗಿದ್ದು, ಅದು ಸಹ ಸಮರ್ಪಕವಾಗಿಲ್ಲ.

ಸೋಮರಡ್ಡಿ ಅಳವಂಡಿ ಕೊಪ್ಪಳ

ನಗರ ವಸತಿ ಯೋಜನೆಯಡಿಯಲ್ಲಿ ಕೊಪ್ಪಳ ನಗರದ ಹಿರೇಸಿಂದೋಗಿ ರಸ್ತೆಯಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ತೆವಳುತ್ತಾ ಸಾಗಿರುವ ಆಶ್ರಯ ವಸತಿ ಯೋಜನೆ ಇನ್ನೂ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ಯೋಜನೆಗಾಗಿ ಇದುವರೆಗೂ ನಗರಸಭೆಯಲ್ಲಿ ಎಷ್ಟು ವೆಚ್ಚ ಮಾಡಲಾಗಿದೆ ದೇವರೇ ಬಲ್ಲ. ಆದರೆ, ಅಲ್ಲಿರುವ ನಿವೇಶನಗಳು ಮಾತ್ರ ಹಾಳು ಕೊಂಪೆಯಂತಾಗಿವೆ.

2 ಸಾವಿರ ಆಶ್ರಯ ವಸತಿ ಯೋಜನೆಯಲ್ಲಿ ಇದುವರೆಗೂ 1400 ಹಂಚಿಕೆ ಮಾಡಲಾಗಿದೆ. ಉಳಿದ 600 ಹಂಚಿಕೆ ಮಾಡಿದ್ದರೂ ಇದುವರೆಗೂ ಹಕ್ಕು ಪತ್ರ ವಿತರಣೆಯಾಗಿಲ್ಲ.

ಈ ನಿವೇಶನಗಳಿಗಾಗಿ ಅರ್ಜಿ ಹಾಕಿದವರೇ ಬೇರೆ, ನಂತರ ಆಡಳಿತದಲ್ಲಿ ಆದ ಬದಲಾವಣೆಯಿಂದ ಹಂಚಿಕೆಯಾಗಿದ್ದೇ ಬೇರೆಯವರಿಗೆ. ಇದರ ವಿರುದ್ಧ ಅರ್ಜಿ ಹಾಕಿದವರು ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ ಮೇಲೆ ವಂತಿಗೆ ಪಾವತಿ ಮಾಡಿದವರ ಪೈಕಿ ಶೇ.60 ರಷ್ಟು ಅರ್ಜಿದಾರರಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ, ನಿಯಮಾನುಸಾರ ಮನೆ ನಿರ್ಮಾಣ ಮಾಡಿಕೊಟ್ಟಿಲ್ಲ. ನಿರ್ಮಾಣ ಮಾಡಿದ ಮನೆಗಳು ಈಗಾಗಲೇ ಬಹುತೇಕ ಭಾಗ ಬಿದ್ದು ಹೋಗಿದ್ದು, ಅವುಗಳನ್ಯಾರೂ ಫಲಾನುಭವಿಗಳು ಪಡೆಯಲು ಮುಂದೆ ಬರುತ್ತಿಲ್ಲ.


ಈ ನಡುವೆ ಉಳಿದ 600 ನಿವೇಶನ ಹಂಚಿಕೆ ಮಾಡುವ ಕುರಿತು ಕೊಪ್ಪಳ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ತೀರ್ಮಾನ ಮಾಡಲಾಗಿದೆ. ಪ್ರತಿ ಸದಸ್ಯರಿಗೂ ಹತ್ತು ಮನೆ ಆಯಾ ವಾರ್ಡ್‌ನಲ್ಲಿ ಹಂಚಿಕೆ ಮಾಡುವಂತೆ ತೀರ್ಮಾನ ಮಾಡಲಾಗಿದೆ. ಅದರಂತೆ ಎಲ್ಲ ದಾಖಲೆಗಳನ್ನು ಆಯಾ ವಾರ್ಡ್‌ನ ಸದಸ್ಯರು ನಗರಸಭೆಗೆ ಸಲ್ಲಿಕೆ ಮಾಡಿದ್ದಾರೆ.

ಆದರೆ, ನಗರಸಭೆಯಿಂದ ಇದುವರೆಗೂ ಹಕ್ಕು ಪತ್ರ ನೀಡಿಲ್ಲ. ಇದು ಸದಸ್ಯರನ್ನೇ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ. ಈಗ ಸದಸ್ಯರ ಅವಧಿಯೂ ಮುಗಿದಿರುವುದರಿಂದ ಹಂಚಿಕೆ ಮಾಡಿದ್ದು ಸಹ ಹಳ್ಳ ಹಿಡಿದಂತಾಗಿದೆ ಎಂದು ಸದಸ್ಯರು ಅಳಲು ತೋಡಿಕೊಳ್ಳುತ್ತಾರೆ.

ತುರ್ತಾಗಿ ಆಗಲಿ: ಅರ್ಹರಿಗೆ ಹಂಚಿಕೆ ಮಾಡಲಿ. ಆದರೆ, ಅಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನಾದರೂ ನೀಡುವಂತೆ ಆಗಲಿ. ನಿವೇಶನ ಹಂಚಿಕೆ ಮಾಡಿದ್ದಾರೆ. ಅದರೆ, ವಾಸ್ತವಿಕವಾಗಿ ನಿವೇಶನ ಎಲ್ಲಿದೆ ಎಂದು ನೋಡಲು ಆಗದಂತೆ ಜಾಲಿ ಬೆಳೆದಿದೆ. ನಿವೇಶನದ ಹಕ್ಕು ಪತ್ರ ಪಡೆದಿದ್ದೇ ಫಲಾನುಭವಿಗಳ ಸಾಧನೆಯಾಗಿದ್ದು, ಅದರ ಹೊರತಾಗಿ ತಮ್ಮ ನಿವೇಶನ ಎಲ್ಲಿದೆ ಎಂದು ನೋಡಲು ಆಗಿಲ್ಲ. ಈಗಂತೂ ಕೊಪ್ಪಳ ನಗರಸಭೆಯಲ್ಲಿ ಸದಸ್ಯರ ಅಧಿಕಾರವಧಿ ಮುಗಿದಿದ್ದು, ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದಾರೆ. ಅವರಾದರೂ ಇತ್ತ ಗಮನ ಹರಿಸಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಹಳ್ಳ ಹಿಡಿದಿದ್ದು ಯಾಕೆ : ಸೂರಿಲ್ಲದವರಿಗೆ ಸೂರು ನೀಡುವ ಯೋಜನೆ ಇದಾಗಿದೆ. ವಸತಿ ಖಾತೆ ಸಚಿವ ವಿ.ಸೋಮಣ್ಣ ಆಶ್ರಯ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಆಗ ಶಾಸಕರಾಗಿದ್ದ ಸಂಗಣ್ಣ ಕರಡಿ ಇಚ್ಛಾಶಕ್ತಿಯಿಂದ ಇದನ್ನು ಜಾರಿ ಮಾಡಲಾಗಿತ್ತಾದರೂ ನಂತರ ಇತ್ತ ಯಾರು ಸಹ ಕಣ್ಣೆತ್ತಿಯೂ ನೋಡಲಿಲ್ಲ.