ಸಂವಿಧಾನ ಬದಲಾಯಿಸುತ್ತೇವೆ ಎನ್ನುವುದು ಮೂರ್ಖತನ

| Published : Apr 15 2025, 12:50 AM IST

ಸಾರಾಂಶ

ಸರ್ವರ ಏಳಿಗೆ, ಅಭ್ಯೂದಯಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು ಆದರೆ ಕೆಲವರು ನಮಗೆ ಅಧಿಕಾರ ಬಂದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆಂದು ಹೇಳುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ವರ ಏಳಿಗೆ, ಅಭ್ಯೂದಯಕ್ಕಾಗಿ ಡಾ. ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು ಆದರೆ ಕೆಲವರು ನಮಗೆ ಅಧಿಕಾರ ಬಂದರೆ ಸಂವಿಧಾನವನ್ನೇ ಬದಲಾಯಿಸುತ್ತೇವೆಂದು ಹೇಳುತ್ತಿರುವುದು ಮೂರ್ಖತನದ ಪರಮಾವಧಿ ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು.

ನಗರದ ನಗರಸಭೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ 134ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ್‌ರವರ 118ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾರ್ಥಕ್ಕಾಗಿ ಯಾರು ರಾಜಕೀಯ ಮಾಡಬೇಡಿ ಅಂಬೇಡ್ಕರ್‌ವರು ಪವಿತ್ರ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿಹೋದ ಪರಿಣಾಮ ಇಂದು ನಮ್ಮ ದೇಶ ವಿಶಾಲವಾಗಿ ಬೆಳೆಯುತ್ತಿದೆ. ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥೈಸಿಕೊಂಡು ನಡೆದರೆ ಎಲ್ಲರಿಗೂ ಒಳಿತಾಗಲಿದೆ. ಸಂವಿಧಾನವನ್ನು ಬದಲಾಯಿಸುವ ಶಕ್ತಿ ಯಾರಿಗೂ ಇಲ್ಲ ಇನ್ನೂ ಮುಂದಾದರೂ ಇಂತಹ ಮಾತುಗಳನ್ನು ನಿಲ್ಲಿಸಿ ರಾಜ್ಯದ ಅಭಿವೃದ್ದಿ, ಜನರ ಹಿತಾಸಕ್ತಿಕಡೆಗೆ ಗಮನಹರಿಸುವ ಮೂಲಕ ಅಂಬೇಡ್ಕರ್‌ರಂತಹ ನಾಯಕರಿಗೆ ಗೌರವನ್ನು ಕೊಡುವುದನ್ನು ಕಲಿತುಕೊಳ್ಳಬೇಕಿದೆಎ ಎಂದರು.

ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್‌ರವರು ಸಂವಿಧಾನ ರಚಿಸಿ ದಲಿತರು, ಹಿಂದುಳಿದವರು, ಮಹಿಳೆಯರು, ಕಾರ್ಮಿಕರಿಗೆ ಸಮಾನ ಹಕ್ಕುಗಳನ್ನು ತಂದುಕೊಟ್ಟು ಸಂವಿಧಾನದ ಪಿತಾಮಹ ಎನಿಸಿಕೊಂಡರು. ಸಮಾಜ ಸುಧಾರಕರಾಗಿ ಸಾಮಾಜಿಕ, ರಾಜಕೀಯವಾಗಿ ಎಲ್ಲರಿಗೂ ಪ್ರಾತಿನಿತ್ಯ ನೀಡಿದರು. ಒಂದು ಜಾತಿ, ವರ್ಗಕ್ಕೆ ಸೀಮಿತವಾಗದೆ ಎಲ್ಲಾ ವರ್ಗದ ಜನರ ಅಭಿವೃದ್ದಿಗೆ ಶ್ರಮಿಸಿದರು. ಇವರು ಕೊಟ್ಟಂತಹ ಸ್ವಾತಂತ್ರ್ಯ, ಸಮಾನತೆಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡು ದೇಶದ ಹಿತ ಕಾಪಾಡಬೇಕೆಂದರು.

ಈ ಸಂದರ್ಭದಲ್ಲಿ ಸಂಶೋಧಕ ಡಾ. ವಡ್ಡಗೆರೆ ನಾಗರಾಜಯ್ಯ, ಡಾ. ಬಿ.ಆರ್. ಅಂಬೇಡ್ಕರ್‌ರವರ ಬಗ್ಗೆ ಹಾಗೂ ಸಾಹಿತಿ ಕಂಟಲಗೆರೆ ಗುರುಪ್ರಸಾದ್ ಡಾ. ಬಾಬು ಜಗಜೀವನ್‌ರಾಮ್‌ರವರ ಬಗ್ಗೆ ಉಪನ್ಯಾಸ ನೀಡಿದರು. ಅಲೆಮಾರಿ ಜನಾಂಗದವರಿಗೆ ನಿವೇಶನ ಹಕ್ಕು ಪತ್ರ ವಿತರಣೆ, ಕ್ರೀಡಾಕೂಟದಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಗೌರವಧನ ನೀಡಲಾಯಿತು. ಶೇಖರ ರಕ್ತನಿಧಿ ಕೇಂದ್ರದಿಂದ ರಕ್ತದಾನ ಶಿಬಿರ ಹಾಗೂ ಆರೋಗ್ಯ ಇಲಾಖೆ ಸಂಚಾರಿ ವಾಹನವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಯಮುನಾಧರಣೇಶ್, ಉಪಾಧ್ಯಕ್ಷೆ ಮೇಘಶ್ರೀ, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಇಒ ಎಚ್.ಎಂ. ಸುದರ್ಶನ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಲ್. ತ್ರಿವೇಣಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಿ, ನಗರಸಭೆ ಸದಸ್ಯರುಗಳಾದ ಭಾರತಿ, ಆಶೀಫಾಬಾನು, ಹೂರ್‌ಬಾನು, ಲೋಕ್‌ನಾಥ್‌ಸಿಂಗ್, ಬೆಸ್ಕಾಂ ಮನೋಹರ್, ಪಶು ಇಲಾಖೆ ನಂದೀಶ್, ದಲಿತ ಮುಖಂಡರಾದ ಪೆದ್ದಿಹಳ್ಳಿ ನರಸಿಂಹಯ್ಯ, ನಾಗತೀಹಳ್ಳಿ ಕೃಷ್ಣಮೂರ್ತಿ, ಶಾಂತಮೂರ್ತಿ ಮತ್ತಿತರರಿದ್ದರು. ಕಾರ್ಯಕ್ರಮಕ್ಕೂ ಮುನ್ನಾ ಗ್ರಾಮದೇವತೆ ಶ್ರೀಕೆಂಪಮ್ಮದೇವಿ ದೇವಸ್ಥಾನದಿಂದ ನಗರದ ಮುಖ್ಯ ರಸ್ತೆಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್‌ರವರ ಹಾಗೂ ಡಾ. ಬಾಬು ಜಗಜೀವನರಾಮ್‌ರವರ ಭಾವಚಿತ್ರದ ಮೆರವಣಿಗೆಯು ನಡೆಯಿತು.